ಬೆಂಗಳೂರು: ಸ್ಕೂಟರ್‌ಗೆ ಬಸ್ ಡಿಕ್ಕಿ, ತಲೆಗೆ ಚಕ್ರ ಹರಿದು ಮಹಿಳಾ ಉದ್ಯೋಗಿ ಸಾವು
ಮನೆಯಿಂದ ಕಂಪನಿ ಕೆಲಸಕ್ಕೆ ಬೆಳಗ್ಗೆ 9 ಗಂಟೆಗೆ ಸ್ಕೂಟರ್‌ನಲ್ಲಿ ವಿನುತಾ ತೆರಳುವಾಗ ಮಾರ್ಗ ಮಧ್ಯೆ ನಡೆದ ಅವಘಡ. ಘಟನೆ ಬಳಿಕ ಪರಾರಿಯಾಗಿರುವ ಖಾಸಗಿ ಬಸ್ ಚಾಲಕ ಪತ್ತೆಗೆ ತನಿಖೆ ನಡೆದಿದೆ.
ಬೆಂಗಳೂರು(ಜ.25): ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್ ಶೆಲ್ ಪೆಟ್ರೋಲ್ ಬಂಕ್ ಸಮೀಪ ಮಂಗಳವಾರ ನಡೆದಿದೆ. ಸುಬ್ರಹ್ಮಣ್ಯ ನಗರದ ನಿವಾಸಿ ವಿನುತಾ (32) ಮೃತ ದುರ್ದೈವಿ. ಮನೆಯಿಂದ ಕಂಪನಿ ಕೆಲಸಕ್ಕೆ ಬೆಳಗ್ಗೆ 9 ಗಂಟೆಗೆ ಸ್ಕೂಟರ್‌ನಲ್ಲಿ ವಿನುತಾ ತೆರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಪರಾರಿಯಾಗಿರುವ ಖಾಸಗಿ ಬಸ್ ಚಾಲಕ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
12 ವರ್ಷಗಳ ಹಿಂದೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಿನುತಾ ಹಾಗೂ ರಾಜಶೇಖರ್ ವಿವಾಹವಾಗಿದ್ದು, ಇವರಿಗೆ 10 ವರ್ಷದ ಹೆಣ್ಣು ಮಗಳಿದ್ದಾಳೆ. ಖಾಸಗಿ ಕಂಪನಿಯಲ್ಲಿ ದಂಪತಿ ಉದ್ಯೋಗದಲ್ಲಿದ್ದು, ಸುಬ್ರಹ್ಮಣ್ಯಪುರ ನಗರದಲ್ಲಿ ನೆಲೆಸಿದ್ದರು. ಕಾಮಾಕ್ಷಿಪಾಳ್ಯದ ಖಾಸಗಿ ಕಂಪನಿಯಲ್ಲಿ ಅಕೌಟೆಂಟ್ ಆಗಿದ್ದ ವಿನುತಾ ಅವರು, ಪ್ರತಿದಿನ ನಾಗರಬಾವಿ ರಿಂಗ್ ರೋಡ್ ಮೂಲಕ ಕಚೇರಿಗೆ ಕೆಲಸ ತೆರಳುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಕೆಲಸಕ್ಕೆ ಅವರು ತೆರಳುತ್ತಿದ್ದರು. ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್ ಶೆಲ್ ಪೆಟ್ರೋಲ್ ಬಂಕ್ ಬಳಿ ವಿನುತಾ ಅವರ ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿದೆ. ಆ ವೇಳೆ ಕೆಳಗೆ ಬಿದ್ದಾಗ ತಲೆ ಮೇಲೆ ಬಸ್ಸಿನ ಚಕ್ರಗಳು ಹರಿದ ಪರಿಣಾಮ ವಿನುತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಸಿಲಿಂಡರ್ ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು
ಹಂಫ್ಸ್ ಇಲ್ಲದ ಕಾರಣ ದುರಂತ:
ಕೆಲ ದಿನಗಳ ಹಿಂದೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ತುಮಕೂರು ರಸ್ತೆಯಲ್ಲಿ ಹಂಫ್ಸ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದರು. ಆನಂತರ ಹಂಫ್ಸ್ ಹಾಕದ ಪರಿಣಾಮ ವಾಹನಗಳಿಗೆ ವೇಗ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಲೇ ಅಪಘಾತಗಳು ಸಂಭವಿಸುತ್ತಿದ್ದು, ವಿನುತಾ ಅವರ ಸಾವಿಗೂ ಬಿಬಿಎಂಪಿ ಅಧಿಕಾರಿಗಳೇ ಕಾರಣವಾಗಿದ್ದಾರೆ ಎಂದು ಮೃತರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.