ಯಾದಗಿರಿ ಜಿಲ್ಲೆಯಲ್ಲಿ ನೋಂದಣಿಯಾದ 30,000ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ 3,000ಕ್ಕೂ ಅಧಿಕ ಮಂದಿಯ ಹೆರಿಗೆಯ ಮಾಹಿತಿ ಲಭ್ಯವಿಲ್ಲದಿರುವುದು ಸಾವಿರಾರು ಭ್ರೂಣಹತ್ಯೆಗಳ ಅನುಮಾನಕ್ಕೆ ಕಾರಣವಾಗಿದೆ. ಕನ್ನಡಪ್ರಭ ವರದಿಯ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ.
ಆನಂದ್ ಎಂ. ಸೌದಿ
ಯಾದಗಿರಿ: ಭ್ರೂಣಹತ್ಯೆಗಳ ಮಾಹಿತಿ ಯಾದಗಿರಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವಂತಿದ್ದು, ನೋಂದಣಿ ಮಾಡಿಸಿದ್ದ 30 ಸಾವಿರಕ್ಕೂ ಹೆಚ್ಚು ಗರ್ಭಿಣಿಯರ ಪೈಕಿ 3000ಕ್ಕೂ ಹೆಚ್ಚು ಮಂದಿಗೆ ಹೆರಿಗೆಯಾದ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ. ಕಳೆದ 1 ವರ್ಷದಲ್ಲಿ (2024-25) ಸದ್ದಿಲ್ಲದೆ ಸಾವಿರಕ್ಕೂ ಹೆಚ್ಚು ಭ್ರೂಣಹತ್ಯೆಗಳು ನಡೆದಿದ್ದು, ಆರೋಗ್ಯ ಇಲಾಖೆಗೇ ಆಘಾತ ಮೂಡಿಸಿದೆ.
ಈ ಹಿಂದೆ ಮಾ.18ರಂದು ‘ಯಾದಗಿರಿ ಜಿಲ್ಲೆಯಲ್ಲಿ 7 ತಿಂಗಳಲ್ಲಿ 30 ಹೆಣ್ಣು ಭ್ರೂಣಹತ್ಯೆ’ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಶೇಷ ವರದಿ ಸಂಚಲನ ಮೂಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ತನಿಖೆಗೆ ಆದೇಶಿಸಿದ್ದರು. ಐವರು ವೈದ್ಯಾಧಿಕಾರಿಗಳನ್ನೊಳಗೊಂಡ ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಿ ಯಾದಗಿರಿಯಷ್ಟೇ ಅಲ್ಲ, ಈ ಬಗ್ಗೆ ರಾಜ್ಯವ್ಯಾಪಿ ಎಲ್ಲ ಜಿಲ್ಲೆಗಳಲ್ಲೂ ಗಂಭೀರವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.
‘ಕನ್ನಡಪ್ರಭ’ ವರದಿ ಆಧರಿಸಿ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರ ನೇತೃತ್ವದಲ್ಲಿ ಮಾ.25ರಂದು ಮಧ್ಯಾಹ್ನ ನಡೆದ ಹಿರಿಯ ಅಧಿಕಾರಿಗಳನ್ನೊಳಗೊಂಡ ವೀಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿನ ಈ ಆಘಾತಕಾರಿ ಅಂಶ ಬಯಲಾಗಿತ್ತು. ‘ಕನ್ನಡಪ್ರಭ’ಕ್ಕೆ ಲಭ್ಯವಾದ, ಸಭೆಯಲ್ಲಿ ಮಂಡಿಸಲಾದ ಕಟ್ಟುನಿಟ್ಟಿನ ಗೌಪ್ಯ ವರದಿಯಲ್ಲಿನಂತೆ 2025ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ 7 ತಿಂಗಳಲ್ಲಿ ಒಟ್ಟು 652 ಗರ್ಭಪಾತ ಪ್ರಕರಣಗಳು ಇಲಾಖೆಯಲ್ಲೇ ವರದಿಯಾಗಿವೆ. ಗರ್ಭಪಾತದ ರಾಜ್ಯದ ಸರಾಸರಿ ವರದಿ ಶೇ.5.24 ರಷ್ಟಿದ್ದರೆ, ಯಾದಗಿರಿ ಜಿಲ್ಲೆಯದ್ದು ಶೇ.3.16 ರಷ್ಟಿದೆ.
1329 ಗರ್ಭಪಾತ
ಹಾಗೆಯೇ, 2024-25ರ ಸಾಲಿನಲ್ಲಿ ನೋಂದಣಿ ಮಾಡಿಸಿದ್ದ 31,435 ಗರ್ಭಿಣಿಯರ ಪೈಕಿ, 26,584 ಜೀವಂತ ಹೆರಿಗೆಗಳಾಗಿದ್ದು, 188 ಶಿಶು ಮರಣಗಳು ಸಂಭವಿಸಿವೆ. ಇನ್ನೂ 207 ಹೆರಿಗೆಗಳು ಆಗಬೇಕಿದ್ದು, 1329 ಗರ್ಭಪಾತಗಳಾಗಿವೆ. ಅಚ್ಚರಿಯೆಂದರೆ, ಇವೆಲ್ಲಗಳ ಸೇರಿಸಿದಾಗ ಆಗುವ 28,308 ಪ್ರಕರಣಗಳಲ್ಲಿ ಇನ್ನೂ 3,127ರಷ್ಟು ಹೆರಿಗೆಯ ವಿವರಗಳೇ ಸಿಗುತ್ತಿಲ್ಲ. ಈ ಗರ್ಭಿಣಿಯರಿಗೆ ನಂತರದಲ್ಲಿ ಹೆರಿಗೆಯಾಯಿತೇ? ಶಿಶುಗಳು ಜೀವಂತವಿವೆಯೇ? ಅಥವಾ ಮೃತಪಟ್ಟವೇ? ಯಾಕೆ? ಏನು? ಎಂಬ ಅನೇಕ ಅಂಶಗಳಿಗೆ ಉತ್ತರ ಸಿಕ್ಕಿಲ್ಲ.
ನಕಲಿ ತಾಯಿ ಕಾರ್ಡ್ ಸೃಷ್ಟಿ
‘ಹೆಣ್ಣು’ ಶಿಶು ಎಂಬ ಕಾರಣಕ್ಕೆ ಅನೇಕರು ಸದ್ದಿಲ್ಲದೆ ಅಬಾರ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಚರ್ಚೆಗಳಾಗಿವೆ ಎಂದು ‘ಕನ್ನಡಪ್ರಭ’ಕ್ಕೆ ಬಲ್ಲ ಮೂಲಗಳು ತಿಳಿಸಿವೆ. ಹರ್ಷ ಗುಪ್ತಾ ಅವರ ಸೂಚನೆಯಂತೆ ರಚಿಸಲಾಗಿದ್ದ ರಾಜ್ಯಮಟ್ಟದ ಸಮಿತಿ ಏ.6ರಿಂದ ಏ.10ರವರೆಗೆ ಜಿಲ್ಲೆಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದೆ. ಕೆಲವು ಕಡೆಗಳಲ್ಲಿ ಸಮಿತಿಗೆ ದೊರೆತ ಮಾಹಿತಿಗಳು ಅವರನ್ನೂ ಬೆಚ್ಚಿ ಬೀಳಿಸಿವೆ ಎನ್ನಲಾಗಿದೆ. ಟಾರ್ಗೆಟ್ ರೀಚ್‌ಗಾಗಿ ತಾಯಿ ಕಾರ್ಡ್‌ಗಳನ್ನೂ ಸಹ ನಕಲಿ ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ಇಲಾಖೆಯಲ್ಲೇ ಕೇಳಿ ಬರುತ್ತಿವೆ.
ಇದನ್ನೂ ಓದಿ: ಭ್ರೂಣ ಲಿಂಗ ಪತ್ತೆಕೋರರ ಮಾಹಿತಿ ಕೊಟ್ರೆ ₹1 ಲಕ್ಷ ಬಹುಮಾನ! ಮಹತ್ವದ ಘೋಷಣೆ
ಗರ್ಭಪಾತ ತಡೆಗೆ ಕ್ರಮ
ಗರ್ಭಪಾತ ಪ್ರಕರಣಗಳ ಕುರಿತು ರಾಜ್ಯಮಟ್ಟದ ಸಮಿತಿ ಜಿಲ್ಲೆಗೆ ಬಂದು ಮಾಹಿತಿ ಸಂಗ್ರಹಿಸಿದೆ. ಇಷ್ಟರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ತಂಡ ತಮಗೆ ತಿಳಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದೇನೆ. ನಕಲಿ ವೈದ್ಯರು ಹಾಗೂ ಗರ್ಭಪಾತ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳುತ್ತಾರೆ.
ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿ ನೇಮಕ: ಸಚಿವ ದಿನೇಶ್ ಗುಂಡೂರಾವ್


