ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. 

ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ (Mavalli Cross) ಬಳಿ ಭೀಕರ ಅಪಘಾತ (Bus Accident) ಸಂಭವಿಸಿದ್ದು, ಮೂವರು ಮೃತರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಏಳು ಜನರನ್ನು ಹುಬ್ಬಳ್ಳಿ ಆಸ್ಪತ್ರೆಗೆ (KIMS, Hubballi) ರವಾನಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ (Yellapur, Uttar Kannada) ಆಸ್ಪತ್ರೆಗೆ ಶವಾಗರಕ್ಕೆ ಶಿಫ್ಟ್ ಮಾಡಲಾಗಿದೆ. KA-19-F-3470 ಸಂಖ್ಯೆಯ ಸಾರಿಗೆ ಬಸ್ ಬಾಗಲಕೋಟೆಯಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ರಸ್ತೆಬದಿ ಪಾರ್ಕ್ ಮಾಡಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರು ಬಾಗಲಕೋಟೆ ಮೂಲದವರು!

ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನೀಲವ್ವ ಹರದೊಳ್ಳಿ ( 40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತನ ವಯಸ್ಸು ಅಂದಾಜು 45 ಆಗಿದ್ದು, ಬಾಗಲಕೋಟೆ ಮೂಲದವರು ಎನ್ನಲಾಗಿದೆ. ಆದ್ರೆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತರು ಕೆಲಸ ಅರಸಿಕೊಂಡು ಬಾಗಲಕೋಟೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು.

ಅಪಘಾತದಲ್ಲಿ ಗಾಯಗೊಂಡಿರುವ ಏಳು ಪ್ರಯಾಣಿಕರು ಬಾಗಲಕೋಟೆ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ. 7 ಹಾಗೂ 12 ವರ್ಷದ ಚಿಕ್ಕ ಚಿಕ್ಕ ಮಕ್ಕಳಿಗೆ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣ ಸಂಬಂಧ ಬಸ್ ಚಾಲಕ ಯಮನಪ್ಪ ಮಾಗಿ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕ ವಿಜಯಪುರ ಜಿಲ್ಲೆಯ ಆಲಮಟ್ಟಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ಭೀಕರ ಅಪಘಾತಕ್ಕೆ ಕಾರಣ ಏನು?

ರಸ್ತೆಯಂಚಿನಲ್ಲಿ ನಿಲ್ಲಿಸಿದ್ದ ಲಾರಿ ಇಂಡಿಕೇಟರ್ ಹಾಕಿರಲಿಲ್ಲ. ಬಸ್ ಓವರಟೇಕ್ ಮಾಡುವ ಸಂದರ್ಭದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಬಸ್ ಚಾಲಕ ಹಾಗೂ ನಿರ್ವಾಹಕ‌ ದುರ್ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸ್ಥಳ ಯಲ್ಲಾಪುರ- ಅಂಕೋಲಾ ರಸ್ತೆ ದಟ್ಟ ಕಾಡು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ್ದು, ದುರ್ಗಮ ರಸ್ತೆಯಾಗಿದೆ.

ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್ ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಪಿಐ ರಮೇಶ್ ಹಾನಾಪುರ ನೇತೃತ್ವದಲ್ಲಿಯೇ ಗಾಯಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. PSI ಯಲ್ಲಾಲಿಂಗ್ ಕುನ್ನೂರ, ಮೃತ ದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಿಸಿದದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪಾಂಡವಪುರ ದುರಂತ; ಬಸ್‌ನಲ್ಲಿದ್ದ ಮಕ್ಕಳ ಆತ್ಮ ಗೊಂಬೆಗಾಗಿ ಬಂದಿತ್ತು, ವಿಡಿಯೋ ನೋಡಿ

ಶಿರಸಿಯಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭ

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದೆ‌. ಶಿರಸಿ ತಾಲೂಕಿನ ಶಿರಗಣಿ ಗ್ರಾಮದ ಸಾತ್ವಿಕ್ ಭಟ್ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಮನೆಗೆ ಚಿರತೆ ಬಂದಿದ್ದು, ನಾಯಿ ಬೊಗಳುತ್ತಿದ್ದದ್ದನ್ನು ಗಮನಿಸಿದ ಮನೆಯವರು ನೋಡುವಾಗ ಚಿರತೆ ಮನೆಯಿಂದ ಹೊರಹೋಗಿದೆ. ಇತ್ತೀಚೆಗೆ ಶಿರಸಿ ಭಾಗದಲ್ಲಿ ಚಿರತೆಗಳು ಮನೆಗಳಿಗೆ ಬರುತ್ತಿದ್ದು, ಮನೆಯ ಸಾಕು ಪ್ರಾಣಿಗಳನ್ನು ಬೇಟೆಯಾಡಿ ಎಳೆದೊಯ್ಯುತ್ತಿದೆ. ಶಿರಗಣಿ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು, ಸುತ್ತಮುತ್ತಲ ಜನರಿಗೆ ಭಯ ಹುಟ್ಟುವಂತಾಗಿದೆ.