2026ರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ, ನೀಲಾದ್ರಿ ನಗರದ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ 'ರಾಣಿ ಚೆನ್ನಮ್ಮ' ಪಡೆಯನ್ನು ನಿಯೋಜಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ (ಡಿ.25): 2026ನೇ ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ಐಟಿ-ಬಿಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಭ್ರಮಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ ಖಾಕಿ ಕಣ್ಗಾವಲು
ಬೆಂಗಳೂರು ಹೊರವಲಯ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಐಟಿ ಹಬ್ ವ್ಯಾಪ್ತಿಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ . ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ಅವರು ಖುದ್ದಾಗಿ ಫೀಲ್ಡಿಗಿಳಿದಿದ್ದು, ನೀಲಾದ್ರಿ ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ರೌಂಡ್ಸ್ ನಡೆಸಿ ಭದ್ರತೆಯನ್ನು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಪ್ರತಿ ಹಂತದಲ್ಲೂ ಪೊಲೀಸರ ಕಣ್ಗಾವಲು ಇರಲಿದೆ.
ನೀಲಾದ್ರಿ ನಗರದ ಮೇಲೆ ಹದ್ದಿನ ಕಣ್ಣು;
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ಯುವಜನತೆಯ ನೆಚ್ಚಿನ ತಾಣವಾಗಿದ್ದು, ಹೊಸ ವರ್ಷದ ದಿನ ಇಲ್ಲಿ ಸುಮಾರು 20 ರಿಂದ 35 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಈ ಪ್ರದೇಶವನ್ನು 'ಹಾಟ್ ಸ್ಪಾಟ್' ಎಂದು ಗುರುತಿಸಲಾಗಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಪಿಜಿಗಳಲ್ಲಿರುವ ಮಹಿಳೆಯರು ಮತ್ತು ಯುವತಿಯರ ರಕ್ಷಣೆಗಾಗಿ 'ರಾಣಿ ಚೆನ್ನಮ್ಮ' ಪಡೆಯನ್ನು ವಿಶೇಷವಾಗಿ ನೇಮಕ ಮಾಡಲಾಗಿದೆ.
ಪಬ್, ಬಾರ್ ಮಾಲೀಕರಿಗೆ ಖಾಕಿ ವಾರ್ನಿಂಗ್
ಯುವಕರ ಹಾಟ್ ಫೇವರೆಟ್ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈಗಾಗಲೇ ಮಾಲೀಕರೊಂದಿಗೆ ಸಭೆ ನಡೆಸಿರುವ ಪೊಲೀಸರು, ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಪಾರ್ಟಿ ನಡೆಯುವ ಜಾಗದಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಆದೇಶಿಸಲಾಗಿದೆ.
ನಿಯಮ ಮೀರಿದರೆ ಕ್ರಮ ಗ್ಯಾರಂಟಿ
ಪೊಲೀಸರು ವಿಧಿಸಿರುವ ಸಮಯ ಮಿತಿಯನ್ನು ಮೀರಿ ಸೇವೆ ನೀಡಿದರೆ ಅಂತಹ ಬಾರ್ ಮತ್ತು ಪಬ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಡ್ರಂಕ್ ಅಂಡ್ ಡ್ರೈವ್ ಮತ್ತು ಅನಗತ್ಯವಾಗಿ ರಸ್ತೆಯಲ್ಲಿ ಗಲಾಟೆ ಮಾಡುವವರನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಕಟ್ಟುನಿಟ್ಟಿನ ನಿಯಮಗಳ ನಡುವೆಯೇ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್ ನಡೆಯಲಿದೆ.


