ಬೆಂಗಳೂರು (ಮೇ.06) :  ಖಾಸಗಿ ಆಸ್ಪತ್ರೆಯಲ್ಲಿ ತಾಯಿಗೆ ಹಾಸಿಗೆ ನೀಡಲು ಪುತ್ರನಿಂದ   1.2 ಲಕ್ಷ ಲಕ್ಷ ರು. ಲಕ್ಷ ಸುಲಿಗೆ ಮಾಡಿದ್ದ ಆರೋಗ್ಯ ಮಿತ್ರ ಸಿಬ್ಬಂದಿ ಸೇರಿ ಮೂವರನ್ನು ಸದಾಶಿವನಗರ ಠಾಣೆ ಪೊಲೀಸರು ಬುಧವಾರ ಸೆರೆ ಹಿಡಿದಿದ್ದಾರೆ. 

ಆರೋಗ್ಯ ಮಿತ್ರ ಸಿಬ್ಬಂದಿ ನೌಕರ ಪುನೀತ್, ಪೀಪಲ್ ಟ್ರೀ ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮಂಜುನಾಥ್ ಹಾಗೂ ಇದೇ ಆಸ್ಪತ್ರೆಯ ಸಿಬ್ಬಂದಿ ವೆಂಕಟ್ ಸುಬ್ಬರಾವ್ ಬಂಧಿತರು. ನೆಲಮಂಗಲದ ಲಕ್ಷ್ಮೀಶ ಎಂಬುವರ ತಾಯಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುವುದಾಗಿ ಹೇಳಿ ಆರೋಪಿಗಳು ಹಣ ಪಡೆದಿದ್ದರು. ಸಂತ್ರಸ್ತರು ನೀಡಿದ ದೂರಿನ  ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಡ್ ಮಾಫಿಯಾ : 17 ಸಿಬ್ಬಂದಿಗೆ ಗೇಟ್‌ಪಾಸ್, ಬಿಬಿಎಂಪಿ ಸಿಬ್ಬಂದಿಯೂ ಶಾಮೀಲು? .

ತಾಯಿ ಉಳಿಸಲು ಮಗನ ಸಾಹಸ: ಕೊರೋನಾ ಸೋಂಕಿತರಾಗಿ ನೆಲಮಂಗಲದ ಆಸ್ಪತ್ರೆಯಲ್ಲಿ ಲಕ್ಷ್ಮೀಶ ಅವರ ತಾಯಿ ಲಕ್ಷ್ಮೀದೇವಮ್ಮ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಂತೆ ನೆಲಮಂಗಲ ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಅಂತೆಯೇ ಪೀಪಲ್ ಟ್ರೀ ಆಸ್ಪತ್ರೆಗೆ ಲಕ್ಷ್ಮೀದೇವಮ್ಮ ಅವರನ್ನು ಕರೆತರಲಾಗಿತ್ತು. ಆದರೆ ಐಸಿಯು ವಿಭಾಗದಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಲಕ್ಷ್ಮೀದೇವಮ್ಮ ಅವರನ್ನು ದಾಖಲು ಮಾಡಿಕೊಳ್ಳಲು ಪೀಪಲ್ ಟ್ರೀ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರು.

ತೇಜಸ್ವಿ ಸೂರ್ಯ + ನಂದನ್ ನಿಲೇಕಣಿ.. ಮಾಫಿಯಾ ಆಟ ಇನ್ನು ನಡೆಯಲ್ಲ! ..

ಆಗ ಲಕ್ಷ್ಮೀಶ ಅವರನ್ನು ಸಂಪರ್ಕಿಸಿದ ವೆಂಕಟ್ ಹಾಗೂ ಮಂಜುನಾಥ್, ‘ನಿಮಗೆ ನಾವು ಐ ಯು ಬೆಡ್ ಕೊಡಿಸುತ್ತೇವೆ. ಇದಕ್ಕೆ  1.2 ಲಕ್ಷ ನೀಡುವಂತೆ ಬೇಡಿಕೆ’ ಇಟ್ಟಿದ್ದರು. ಈ ದಂಧೆಗೆ ಆರೋಗ್ಯ ಮಿತ್ರ ಸಿಬ್ಬಂದಿ ಪುನೀತ್ ಸಾಥ್ ಕೊಟ್ಟಿದ್ದ. ತಾಯಿ ಜೀವ ಉಳಿಸಲು ಪರದಾಡುತ್ತಿದ್ದ ಪುತ್ರ, ಆರೋಪಿಗಳ ಬೇಡಿಕೆಗೆ ಒಪ್ಪಿದ್ದರು. ಅಂತೆಯೇ  50 ಸಾವಿರ ಗೂಗಲ್ ಪೇ ಮೂಲಕ ವರ್ಗಾಯಿಸಿದರೆ, ಇನ್ನುಳಿದ  70 ಸಾವಿರ ನಗದು ರೂಪದಲ್ಲಿ ಕೊಟ್ಟಿದ್ದರು. ಈ ಹಣ ಸಂದಾಯವಾದ ಬಳಿಕ ಆಸ್ಪತ್ರೆಯಲ್ಲಿ ಲಕ್ಷ್ಮೀದೇವಮ್ಮ ಅವರಿಗೆ ಐಸಿಯು ಹಾಸಿಗೆ ಸಿಕ್ಕಿತು.

ದುರಾದೃಷ್ಟವಾಶಾತ್ ಆಸ್ಪತ್ರೆಗೆ ಸೇರಿದಂತೆ ಕೆಲವೇ ಗಂಟೆಗಳಲ್ಲಿ ಅವರು ಕೊನೆಯುಸಿರೆಳೆದರು. ಈ ಹಣ ಸುಲಿಗೆ ಬಗ್ಗೆ ಪೊಲೀಸರಿಗೆ ಲಕ್ಷ್ಮೀಶ ದೂರು ನೀಡಿದರು. ಅದರನ್ವಯ ಸದಾಶಿವನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona