ದೇಶದ 2ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಆರಂಭ : ಆರಗ ಜ್ಞಾನೇಂದ್ರ
ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಆರಂಭವಾಗಲಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ (ಫೆ.1) : ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಆರಂಭವಾಗಲಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga jnanendra) ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲೆ ಇದು ಎರಡನೇ ವಿಶ್ವವಿದ್ಯಾಲಯವಾಗಿದೆ. ಸದ್ಯ ಅಹಮದಾಬಾದ್‌ನಲ್ಲಿ ಮಾತ್ರ ಈ ವಿಶ್ವವಿದ್ಯಾಲಯವಿದೆ. ಕಳೆದ ಎರಡು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿರುವ ವಿವಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ನೀವು ಅಪೇಕ್ಷೆ ಪಡುವುದಾದರೆ ಕರ್ನಾಟಕಕ್ಕೆ ವಿವಿಯನ್ನು ಕೊಡುವುದಾಗಿ ತಿಳಿಸಿದ್ದರು. ಅದರಂತೆ ಕರ್ನಾಟಕಕ್ಕೆ ವಿವಿಯನ್ನು ಮಂಜೂರು ಮಾಡಿದ್ದಾರೆ. ಈ ವಿವಿಯನ್ನು ಶಿವಮೊಗ್ಗಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ರಾಜಕೀಯ ನಿವೃತ್ತಿ ಪಡೆದಿಲ್ಲ, ಮನೆಯಲ್ಲಿ ಕೂರಲ್ಲ: ಬಿಎಸ್‌ವೈ
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ(Rashtriya raksha university)ಕ್ಕಾಗಿ ಶಿವಮೊಗ್ಗ ನಗರದ ನವುಲೆಯಲ್ಲಿ 8 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಇಲ್ಲಿ ಶೀಘ್ರದಲ್ಲೆ ಕಟ್ಟಡ ಕಾಮಗಾರಿಗಳು ಪ್ರಾರಂಭವಾಗಲಿದೆ. ಸದ್ಯ ತಾತ್ಕಲಿಕವಾಗಿ ರಾಗಿಗುಡ್ಡದಲ್ಲಿನ ಸಮಾಜ ಕಲ್ಯಾಣ ಇಲಾಖೆ ಕಟ್ಟಡದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಪ್ರಾರಂಭವಾಗಲಿವೆ ಎಂದು ಮಾಹಿತಿ ನೀಡಿದರು.
ಈ ವಿವಿಯಲ್ಲಿ ಭದ್ರತಾ ವಿಷಯ(Security matter)ಕ್ಕೆ ಸಂಬಂಧಿಸಿ ಕೋರ್ಸುಗಳ ಡಿಪ್ಲೊಮಾ, ಪದವಿ ತರಗತಿಗಳ ಶಿಕ್ಷಣ ನೀಡಲಾಗುವುದು. ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಶನ್, ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಪ್ಟಿಮ್ಯಾನೇಜ್‌ಮೆಂಟ್, ದೈಹಿಕ ಸಾಮರ್ಥ್ಯ ನಿರ್ವಹಣೆಯ ಎರಡು ವಾರಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಪಿಜಿ ಡಿಪ್ಲೊಮಾ ಇನ್ ಕೋಸ್ಟಲ್ ಸೆಕ್ಯೂರಿಟಿ ಅಂಡ್ ಎಎಂಪಿ: ಲಾ ಎಸ್ಫೋರ್ಸ್‌ಮೆಂಟ್ ಕೋರ್ಸ್‌ಗಳ ಬೋಧನೆ ಮಾಡಲಾಗುವುದು ಎಂದರು.
ಇದರಿಂದ ಪೊಲೀಸ್ ಮತ್ತು ರಕ್ಷಣಾ ವಿಭಾಗಗಳಿಗೆ ನೇರವಾಗಿ ಅಭ್ಯರ್ಥಿಗಳು ಆಯ್ಕೆಯಾಗಬಹುದಾಗಿದ್ದು, ಇದೊಂದು ವೃತ್ತಿ ಭದ್ರತೆಯ ಶಿಕ್ಷಣವಾಗಿದೆ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ 30 ಸಾವಿರ ಹಿಂದೂ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸಿ ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ಯಾರನ್ನೂ ರೌಡಿಲಿಸ್ಟ್‌ನಿಂದ ಕೈಬಿಟ್ಟಿಲ್ಲ. ರಾಜಕೀಯ ಕಾರಣಗಳಿಗಾಗಿ ಅಮಾಯಕರನ್ನು, ನಿರಪರಾಧಿಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಅವರನ್ನು ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲು ಇಂತಹ ತೀರ್ಮಾನ ಕೈಗೊಂಡಿದೆ ಎಂಬುದು ಸುಳ್ಳು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕಲು ಅವರನ್ನು ರೌಡಿ ಲಿಸ್ಟ್‌ಗೆ ಸೇರಿಸಿತ್ತು ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ: ಯಡಿಯೂರಪ್ಪಗೆ ಮೋದಿ ಭಾವುಕ ಗೌರವ
ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ. ನರೇಂದ್ರ ಮೋದಿ, ಅಮಿತ್ ಷಾ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಸಿಗರು ಭಯಪಡುತ್ತಾರೆ. ಕಾಂಗ್ರೆಸ್ಸಿಗರ ಹತಾಶರಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.