Asianet Suvarna News Asianet Suvarna News

ಶಿವಮೊಗ್ಗ: ಯಡಿಯೂರಪ್ಪಗೆ ಮೋದಿ ಭಾವುಕ ಗೌರವ

80ನೇ ಜನ್ಮದಿನದಂದೇ ಯಡಿಯೂರಪ್ಪ ಕನಸಿನ ಏರ್‌ಪೋರ್ಟ್‌ ಉದ್ಘಾಟಿಸಿದ ಪ್ರಧಾನಿ, ಕೈ ಹಿಡಿದು ಜತೆಯಲ್ಲೇ ವೇದಿಕೆಗೆ ಕರೆದೊಯ್ದರು, ಚಪ್ಪಾಳೆ ತಟ್ಟಿದರು, ಬಿಎಸ್‌ವೈಗೆ ಶಿರಬಾಗಿ ನಮಸ್ಕರಿಸಿದರು. 

PM Narendra Modi Pays Emotional Respect to BS Yediyurappa grg
Author
First Published Feb 28, 2023, 6:23 AM IST

ಶಿವಮೊಗ್ಗ(ಫೆ.28): ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅವರ 80ನೇ ಜನ್ಮದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿಕೆಯ ಸುರಿಮಳೆಗೈದು ವಿಶಿಷ್ಟವಾಗಿ ಅಭಿನಂದನೆ ಹಾಗೂ ಗೌರವ ಸಲ್ಲಿಸಿದ ಅಪರೂಪದ ಘಟನೆಗೆ ಶಿವಮೊಗ್ಗ ಸೋಮವಾರ ಸಾಕ್ಷಿಯಾಯಿತು. ಯಡಿಯೂರಪ್ಪ ಅವರು ತಮ್ಮ ಇಡೀ ಜೀವನವನ್ನು ಬಡವರು ಹಾಗೂ ರೈತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಯಶಸ್ಸಿನ ಎತ್ತರಕ್ಕೆ ಏರಿದರೂ ಅವರ ವಿನಮ್ರತೆ ನಮಗೆ ಹಾಗೂ ಭವಿಷ್ಯದ ಪೀಳಿಗೆಗೆ ಪ್ರೇರಣೆ ಎಂದು ಮೋದಿ ಬಣ್ಣಿಸಿದ್ದು ಮತ್ತಷ್ಟುವಿಶೇಷವಾಗಿತ್ತು.

ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅವರ ಜನ್ಮದಿನದಂದೇ, ಅವರ ರಾಜಕೀಯ ತವರು ನೆಲದಲ್ಲೇ ಉದ್ಘಾಟಿಸಲು ಶಿವಮೊಗ್ಗಕ್ಕೆ ಆಗಮಿಸಿದ ಮೋದಿ ಅವರು, ಯಡಿಯೂರಪ್ಪ ಅವರನ್ನು ಕಂಡೊಂಡನೆ ಕೈ ಹಿಡಿದು ಜತೆಯಲ್ಲಿ ಕರೆದೊಯ್ದರು. ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಹೊಗಳಿದರು.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು: ಅಪ್ಪಟ ಮೋದಿ ಅಭಿಮಾನಿ

ಯಡಿಯೂರಪ್ಪ ಅವರು ಭಾಷಣ ಮಾಡಲು ಎದ್ದು ನಿಂತಾಗ ಕೈಕುಲುಕಿ ಶುಭ ಕೋರಿದರು. ಭಾಷಣದ ವೇಳೆ ಯಡಿಯೂರಪ್ಪ ಕೆಮ್ಮಿದಾಗ ನೀರು ಕೊಡಿಸಲು ಆಯೋಜಕರು ಯತ್ನಿಸಿದರು. ಆಗ ನೀರು ಸಿಗಲಿಲ್ಲ. ತಕ್ಷಣವೇ ಮೋದಿ ಅವರು ತಮ್ಮ ಭದ್ರತಾ ಸಿಬ್ಬಂದಿಯಿಂದ ನೀರು ತರಿಸಿಕೊಟ್ಟರು. ಯಡಿಯೂರಪ್ಪ ಅವರು ಮಾಡಿದ ಭಾಷಣವನ್ನು ತದೇಕಚಿತ್ತದಿಂದ ಆಲಿಸಿದ ಅವರು, ಭಾಷಣ ಮುಗಿಯುತ್ತಿದ್ದಂತೆ ಎದ್ದು ನಿಂತು ಅವರು ಕುರ್ಚಿಯತ್ತ ಬರುವವರೆಗೂ ಚಪ್ಪಾಳೆ ತಟ್ಟಿ ಗೌರವಿಸಿದರು. ಯಡಿಯೂರಪ್ಪ ಅವರಿಗೆ ಶಿರಬಾಗಿ ನಮಸ್ಕರಿಸಿದರು. ಯಡಿಯೂರಪ್ಪ ಕೂಡ ಮೋದಿ ಅವರಿಗೆ ಶಿರಬಾಗಿ ನಮಿಸಿ ಪ್ರಧಾನಿ ಕೈಯನ್ನು ಹಿಡಿದು ಚುಂಬಿಸಿ ಭಾವುಕರಾದರು. ಈ ಸನ್ನಿವೇಶವನ್ನು ಕಂಡು ಜನರೂ ಎದ್ದು ನಿಂತು ಚಪ್ಪಾಳೆ ತಟ್ಟಿಸಂಭ್ರಮಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಮಲೆನಾಡಿನ ಹೆಬ್ಬಾಗಿಲು ಆಗಲಿದೆ: ಸಿಎಂ ಬೊಮ್ಮಾಯಿ

ಬಳಿಕ ತಮ್ಮ ಭಾಷಣದ ಸಂದರ್ಭದಲ್ಲಿ ಜನತೆಗೆ ವಿಶೇಷ ಮನವಿಯೊಂದನ್ನು ಮಾಡಿದ ಮೋದಿ ಅವರು, ಪ್ರೇಕ್ಷಕರು ತಮ್ಮ ಮೊಬೈಲ್‌ನ ಫ್ಲ್ಯಾಷ್‌ಲೈಟ್‌ ಆನ್‌ ಮಾಡಿ ವೇದಿಕೆಯತ್ತ ತೋರಿಸಿ ಯಡಿಯೂರಪ್ಪ ಅವರ ಜನ್ಮದಿನಕ್ಕೆ ಗೌರವ ಸಲ್ಲಿಸಬೇಕು ಎಂದು ಕೋರಿಕೆ ಇಟ್ಟರು. ಜನರಿಂದ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಯಡಿಯೂರಪ್ಪ ಮತಷ್ಟುಭಾವುಕರಾದರು. ಇದೇ ವೇಳೆ, ಹಸಿರು ಶಾಲು ಹೊದಿಸಿ, ನೇಗಿಲು ಮಾದರಿಯ ಸ್ಮರಣಿಕೆ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಮೂಲಕ ಮೋದಿ ಅವರು ಯಡಿಯೂರಪ್ಪ ಅವರ 80ನೇ ಜನ್ಮದಿನವನ್ನು ಅವಿಸ್ಮರಣೀಯವಾಗಿಸಿದರು.

ಬಿಎಸ್‌ವೈ ಸ್ಫೂರ್ತಿ:

ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಾಡಿದ ತಮ್ಮ ವಿದಾಯ ಭಾಷಣ ನನಗೆ ಸ್ಫೂರ್ತಿ ತಂದಿದೆ. ಮಾತ್ರವಲ್ಲ, ಎಲ್ಲ ನಾಯಕರುಗಳಿಗೂ ಇದೊಂದು ಸ್ಫೂರ್ತಿದಾಯಕ ಭಾಷಣ. ಯಡಿಯೂರಪ್ಪ ಒಬ್ಬ ಹೋರಾಟಗಾರ, ರೈತಪರ ನಾಯಕ. ತಮ್ಮ ಜೀವನವನ್ನೇ ಬಡವರು, ರೈತರಿಗಾಗಿ ಅರ್ಪಣೆ ಮಾಡಿಕೊಂಡವರು. ರೈತರ ಏಳಿಗೆಗಾಗಿ ಸದಾ ತುಡಿಯುವ ಮನಸ್ಸು ಅವರದು. ಕರ್ನಾಟಕದ ಜನಪ್ರಿಯ ನಾಯಕ ಯಡಿಯೂರಪ್ಪ ಅವರ ಆರೋಗ್ಯ ಚೆನ್ನಾಗಿರಲಿ, ಅವರಿಗೆ ದೀರ್ಘಾಯುಸ್ಸು ಲಭಿಸಲಿ ಎಂದು ಮೋದಿ ತಮ್ಮ ಭಾಷಣದಲ್ಲಿ ಶುಭ ಹಾರೈಸಿದರು. ಈ ವೇಳೆ ಜನರು ಭಾರಿ ಕರತಾಡನ ಮಾಡಿದರು.

Follow Us:
Download App:
  • android
  • ios