ಡಿ.12 ರೊಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲೇಬೇಕು: ಯತ್ನಾಳ
ಮೀಸಲಾತಿಗೆ ಸುಮ್ನನೇ ಕಾಲಹರಣ ಮಾಡಬೇಡಿ, ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗು
ಇಂಡಿ(ನ.16): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಮುಂದೆ ಆಯೋಗದವರಿಗೆ ಕರೆ ಮಾಡಿ ಹೇಳುತ್ತಾರೆ. ನಂತರ ಏನು ಹೇಳುತ್ತಾರೊ ಗೊತ್ತಿಲ್ಲ. ಪಂಚಮಸಾಲಿ ಸಮುದಾಯಕ್ಕೆ ನೀಡುವ ಮೀಸಲಾತಿ ಕುರಿತು ಸುಮ್ನನೆ ಕಾಲಹರಣ ಮಾಡಬೇಡಿ. ಇನ್ನು ಮುಂದೆ ತಡೆಯುವ ಶಕ್ತಿ ಯಾರಿಂದಲೂ ಸಾಧ್ಯವಿಲ್ಲ. ಡಿ.12 ರೊಳಗಾಗಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಲೇ ಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.
ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದ ಬಳಿ ಬೃಹತ್‌ವೇದಿಯಲ್ಲಿ ಸೋಮವಾರ ಹಮ್ಮಿಕೊಂಡ ಲಿಂಗಾಯತ ಪಂಚಮಸಾಲಿ ಸಮಾವೇಶ, ಗಡಿನಾಡು ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯ, ರಾಷ್ಟ್ರ ಮಾತೆ ಕಿತ್ತೂರ ಚನ್ನಮ್ಮ 144ನೇ ಜಯಂತ್ಯುತ್ಸವ ಹಾಗೂ 199ನೇ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಕ್ಷೇತ್ರದಲ್ಲಿಯೇ ಪಂಚಮಸಾಲಿ ಜನರು ಹೆಚ್ಚಾಗಿದ್ದಾರೆ. ಕಾಲ ಪಕ್ವವಾಗುವ ಕಾಲ ಬಂದಿದೆ. ಮೀಸಲಾತಿ ಆಗೇ ಆಗುತ್ತದೆ. ಕೆಲವರು ಇಂದು ಮೀಸಲಾತಿ ಆಗೇ ಆಗುತ್ತದೆ ಎಂದು ತಿಳಿದು ಪ್ರಾಣಕೊಟ್ಟೇವು, ಮೀಸಲಾತಿ ಬಿಡುವುದಿಲ್ಲ ಎಂದು ನಾಟಕ ಮಾಡುತ್ತ ಹೇಳುತ್ತ ಹೊರಟಿದ್ದಾರೆ. ಇವರೆಲ್ಲ ರಾತ್ರೊರಾತ್ರಿ ಯಡಿಯೂರಪ್ಪ ಅವರಿಂದ .10 ಕೋಟಿ ತಂದು ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಎಂದರೆ ಅಶ್ಲೀಲ, ಕಾಂಗ್ರೆಸ್ ಹೈಬ್ರಿಡ್ ತಳಿ: ಯತ್ನಾಳ
ನಾನು ಮೀಸಲಾತಿ ಒಂದೇ ಸಮುದಾಯದ ಕುರಿತು ಸರ್ಕಾರದ ಮಟ್ಟದಲ್ಲಿ ಕೇಳಿರವುದಿಲ್ಲ. ಎಸ್ಸಿ, ಎಸ್ಟಿ, ಬಣಜಿಗ, ಉಪ್ಪಾರ, ತಳವಾರ, ಹಾಲುಮತ ಸಮಾಜ ಹೀಗೆ ಎಲ್ಲ ಸಮುದಾಯದ ಏಳಿಗೆ ಕುರಿತು ಮೀಸಲಾತಿ ಪರ ಧ್ವನಿ ಎತ್ತಿದ್ದೇನೆ. ಪ್ರತಿಯೊಂದು ಸಮುದಾಯದಲ್ಲಿ ಬಡವರಿದ್ದಾರೆ. ಶೈಕ್ಷಣಿಕ, ಸಾಮಾಜಿಕ ,ಆರ್ಥಿಕ ಅಭಿವೃದ್ಧಿ ಹೊಂದಲು ಮೀಸಲಾತಿ ಎಲ್ಲ ಸಮುದಾಯಕ್ಕೆ ಸಂವಿಧಾನ ಬದ್ಧ ನ್ಯಾಯ ಸಿಗಬೇಕು ಎಂಬುವುದು ನಮ್ಮ ಹೋರಾಟ ಆಗಿದೆ ಎಂದು ತಿಳಿಸಿದರು.
ರಾಜಕೀಯ ಮೀಸಲಾತಿ ಕೇಳುತ್ತಿಲ್ಲ, ಶಿಕ್ಷಣ, ಉದ್ಯೋಗ ಮೀಸಲಾತಿ ಕೇಳುತ್ತಿದ್ದೇವೆ. ನಾವೇನು ರಾಜಕೀಯ, ಮಂತ್ರಿ ಆಗಲು ಬೇಡುತ್ತಿಲ್ಲ. ಶ್ರೀಮಂತರಿಗೆ ನೀಡಲು ಕೇಳುತ್ತಿಲ್ಲ. ಎಲ್ಲ ಸಮುದಾಯದ ಬಡವರಿಗೆ ನೀಡಲು ಕೇಳುತ್ತಿದ್ದೇವೆ. ಎಲ್ಲ ಸಮುದಾಯಕ್ಕೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇಡೀ ದೇಶದ ನಾಯಕ. ಒಂದೇ ಸಮುದಾಯದ ನಾಯಕರಲ್ಲ. ಅವರೊಬ್ಬ ಶ್ರೇಷ್ಠ ದೇಶಭಕ್ತ, ಹೀಗಾಗಿಯೇ ಅವರು ನಮ್ಮ ದೇಶದಲ್ಲಿ ಹುಟ್ಟಿದ ಬೌದ್ಧಧರ್ಮ ಸ್ವೀಕಾರ ಮಾಡಿದ್ದಾರೆ. ತಮಗಾಗಿ, ತಮ್ಮ ಕುಟುಂಬಕ್ಕಾಗಿ ಏನೂ ಮಾಡಿಕೊಳ್ಳಲಿಲ್ಲ. ಇಡಿ ದೇಶದ ದಲಿತರು, ಬಡವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಅವರನ್ನು ದೇವರ ಸ್ಥಾನದಲ್ಲಿ ಪೂಜಿಸುತ್ತಾರೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವೀರರಾಣಿ ಕಿತ್ತೂರ ಚನ್ನಮ್ಮಾ ದೇಶದ ಸ್ವಾತಂತ್ರ್ಯ ಸಾರ್ವಭೌಮ್ವಕ್ಕಾಗಿ ಹೋರಾಟ ಮಾಡಿದ ವೀರ ಮಹಿಳೆ. 2ಎ ಮಿಸಲಾತಿ ನಾವು ಯಾರಿಂದಲೂ ಕಿತ್ತುಕೊಳ್ಳುತ್ತಿಲ್ಲ. ಅದು ಸಂವಿಧಾನ ಬದ್ಧ ನಮ್ಮ ಹಕ್ಕು. ಮೀಸಲಾತಿ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.
ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ, ಕಾಸುಗೌಡ ಬಿರಾದಾರ ಮಾತನಾಡಿದರು. ಸಂಕೇತ ಬಗಲಿ, ಶ್ರೀಶೈಲಗೌಡ ಬಿರಾದಾರ, ಎಸ್.ಎ.ಪಾಟೀಲ, ವಿ.ಎಚ್.ಬಿರಾದಾರ, ಭೀಮನಗೌಡ ಪಾಟೀಲ, ಎಂ.ಆರ್.ಪಾಟೀಲ ಗೊಳಸಾರ, ಭೀಮರಾಯ ಮದರಖಂಡಿ, ಬುದ್ದುಗೌಡ ಪಾಟೀಲ, ಶಂಕರಗೌಡ ಬಿರಾದಾರ, ಶ್ರೀಮಂತ ಇಂಡಿ, ಶ್ರೀಕಾಂತ ಕುಡಿಗನೂರ,ಪ್ರಭು ಹೊಸಮನಿ, ಸೋಮಶೇಖರ ದೇವರ, ಶಿವಾನಂದ ಚಾಳಿಕಾರ, ಅನೀಲಗೌಡ ಬಿರಾದಾರ, ಭೀಮು ಪ್ರಚಂಡಿ, ಆನಂದ ದೇವರ, ಬಾಳು ಮುಳಜಿ, ಶರಣಗೌಡ ಬಂಡಿ, ಸುಧಾಕರಗೌಡ ಬಿರಾದಾರ, ಭೀಮರಾಯಗೌಡ ಪಾಟೀಲ, ಧನರಾಜ ಮುಜಗೊಂಡ, ಮಲ್ಲು ಚಾಕುಂಡಿ, ಶಿವಾನಂದ ರಾವೂರ, ರಾಜುಗೌಡ ರೋಡಗಿ, ಉಮೇಶ ಲಚ್ಯಾಣ, ಪ್ರಶಾಂತಗೌಡ ಬಿರಾದಾರ ಮೊದಲಾದವರು ಇದ್ದರು.
ಪಟ್ಟಣದ ಶಿವಾಜಿ ವೃತ್ತದಿಂದ ವಿವಿಧ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ ಸ್ಥಬ್ಧ ಚಿತ್ರದೊಂದಿಗೆ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮಿಜೀಯವರ ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ವಿಜಯಪುರದಲ್ಲಿ ಕೈ-ಕಮಲ ನಾಯಕರ ಕಿತ್ತಾಟ, ಎಲ್ಲವೂ ಮುಗಿದಿಲ್ಲ ಎಂಬ ಸೂಚನೆ ಕೊಟ್ಟ ವಿಜುಗೌಡ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆತರೇ ಬಸನಗೌಡ, ಕಾಶಪ್ಪನವರ ಹಾಗೂ ಪಂಚಮಸಾಲಿ ಪ್ರಥಮ ಜಗದ್ಗುರುಗಳ ಹೆಸರು ಬರುತ್ತದೆ ಎಂದು ಇಂದು ಕೇವಲರು ನಮ್ಮವರೇ ಮುಖ್ಯಮಂತ್ರಿ ಅವರ ಕಿವಿಯಲ್ಲಿ ಹೇಳಿ ಬಂದಿದ್ದಾರೆ. ನಮ್ಮವರೇ ಒಬ್ಬರು ಮಂತ್ರಿ, ಇನ್ನೊಬ್ಬರು ಕಂತ್ರಿ, ಮತ್ತೊಬ್ಬರು ಸಂತ್ರಿ. ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ನೀವು ಈ ಮೂರು ಮಂದಿ ಮಾತು ಕೇಳಿದರೇ ನಿಮ್ಮ ಸಂತಿ ಕಡಿ ಸಂತಿ ಆಗುತ್ತದೆ ಎಂದು ಬೊಮ್ಮಾಯಿ ಅವರಿಗೆ ಹೇಳಿದ್ದೇನೆ ಅಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವೀರರಾಣಿ ಕಿತ್ತೂರ ಚನ್ನಮ್ಮ ದೇಶದ ಸ್ವಾತಂತ್ರ್ಯ ಸಾರ್ವಭೌಮ್ವಕ್ಕಾಗಿ ಹೋರಾಟ ಮಾಡಿದ ವೀರ ಮಹಿಳೆ. 2ಎ ಮಿಸಲಾತಿ ನಾವು ಯಾರಿಂದಲೂ ಕಿತ್ತುಕೊಳ್ಳುತ್ತಿಲ್ಲ. ಅದು ಸಂವಿಧಾನ ಬದ್ಧ ನಮ್ಮ ಹಕ್ಕು. ಮೀಸಲಾತಿ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಅಂತ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.