ಕಾಂಗ್ರೆಸ್ ಎಂದರೆ ಅಶ್ಲೀಲ, ಕಾಂಗ್ರೆಸ್ ಹೈಬ್ರಿಡ್ ತಳಿ: ಯತ್ನಾಳ
ಹಿಂದು ಪದದ ಆವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಜಾರಕಿಹೊಳಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಶಾಸಕ ಬಸನಗೌಡ ಕಿಡಿ
ವಿಜಯಪುರ(ನ.10): ಹಿಂದು ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಮೆರವಣಿಗೆ ಮೂಲಕ ಗಾಂಧಿ ವೃತ್ತಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ದ್ವಿಗ್ವಿಜಯಸಿಂಗ್, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಡಿಕೆಶಿ ಅವರು ಹಿಂದುತ್ವದ ಬಗ್ಗೆ ವಿರೋಧವಾಗಿ ಮಾತನಾಡಿದ್ದಾರೆ. ಈಗ ಶಾಸಕ ಸತೀಶ ಜಾರಕಿಹೊಳಿ ಕೂಡಾ ಅವರ ಸಾಲಿಗೆ ಸೇರಿದ್ದಾರೆ. ಕಾಂಗ್ರೆಸ್ ಎಂದರೆ ಅಶ್ಲೀಲ, ಕಾಂಗ್ರೆಸ್ ಹೈಬ್ರಿಡ್ ತಳಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
15 ವರ್ಷಗಳಿಂದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡುತ್ತಲೇ ಹೊರಟಿದ್ದಾರೆ. ದೇಶವನ್ನು ನೆಹರು ಕುಟುಂಬದವರಪ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ದೇಶವನ್ನು ಮೂರು ಭಾಗವಾಗಿ ಮಾಡಿದ್ದೆ, ಕಾಂಗ್ರೆಸ್ ಪಕ್ಷ. ಪಾಕಿಸ್ತಾನವನ್ನು ಹುಟ್ಟು ಹಾಕಿ ಕಾಂಗ್ರೆಸ್ ನಾಯಕರು ಭಾರತಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಕೈ-ಕಮಲ ನಾಯಕರ ಕಿತ್ತಾಟ, ಎಲ್ಲವೂ ಮುಗಿದಿಲ್ಲ ಎಂಬ ಸೂಚನೆ ಕೊಟ್ಟ ವಿಜುಗೌಡ
ಸತೀಶ ಜಾರಕಿಹೊಳಿ ಅವರು ಹಿಂದೂ ಪದವೇ ಅಶ್ಲೀಲ ಎಂದು ಹೇಳುವ ಮೂಲಕ ಈ ದೇಶದ ಅನ್ನ, ನೀರು ತಿಂದು ದೇಶದ್ರೋಹ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹೈಬ್ರಿಡ್ ತಳಿಯಾಗಿದ್ದಾರೆ. ಹಿಂದೂಸ್ಥಾನಕ್ಕೆ ಜಾತಿ, ಮತ ಭೇದವಿಲ್ಲ. ಹಿಂದೂ ಎಂದರೆ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಚ್ ಹೇಳಿದೆ. ಅದನ್ನು ತಿಳಿದುಕೊಳ್ಳಬೇಕು. ಯಾವುದೇ ದೇಶಕ್ಕೆ ಹೋದರೂ ನಾನು ಹಿಂದೂಸ್ತಾನದಿಂದ ಬಂದಿದ್ದೇನೆ ಎಂದೇ ಹೇಳಬೇಕು. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕಾಂಗ್ರೆಸ್ ಈಗ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿ ಉಳಿದಿಲ್ಲ. ಬದಲಾಗಿ ಹೈಬ್ರಿಡ್ ಕಾಂಗ್ರೆಸ್ ಆಗಿ ಬದಲಾಗಿದೆ ಎಂದು ಹರಿಹಾಯ್ದರು.
ಸತೀಶ ಜಾರಕಿಹೊಳಿ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುತ್ತಾರೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಕೂಡಿಸಲು ಬಿಡುವುದಿಲ್ಲ. ಕೆಲವು ನಕ್ಸಲ್‌ವಾದಿಗಳ ಜೊತೆ, ಲದ್ದಿ ಜೀವಿಗಳ ಜೊತೆ ಸೇರಿಕೊಂಡು ಸ್ಮಶಾನದಲ್ಲಿ ನಾಟಕ ಮಾಡುತ್ತಾರೆ. ಬೆಳಗಾವಿ ಹಿಂದೂಗಳು ಸತೀಶ ಜಾರಕಿಹೊಳಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಮತ ಹಾಕಬಾರದು. ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿರುವ ಸತೀಶ ಜಾರಕಿಹೊಳಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸತೀಶ ಜಾರಕಿಹೊಳಿ ಕೊನೆಯ ಮೊಳೆ ಹೊಡೆದಿದ್ದಾರೆ. ಸುರ್ಜೇವಾಲ ಅವರಿಗೆ ಧೈರ್ಯವಿದ್ದರೆ, 24 ಗಂಟೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಸವಾಲು ಎಸೆದರು.
ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಜನ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಚೈತನ್ಯ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡಿದ್ದಾರೆ. ಹಿಂದೂಗಳ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕರು ಎಚ್ಚರದಿಂದ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಸಿಎಂ ಬೊಮ್ಮಾಯಿಗೆ ಅಂತಿಮ ಗಡುವು ನೀಡಿದ ಯತ್ನಾಳ
ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯವನ್ನು ಮರೆತು. 35 ವಾರ್ಡ್‌ಗಳಲ್ಲಿ 17 ವಾರ್ಡ್‌ಗಳ ಟಿಕೆಟ್‌ಗಳನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದಾರೆ. ಸತೀಶ ಜಾರಕಿಹೊಳಿ ಯಾವ ಪುಸ್ತಕ ಓದಿದ್ದಾರೋ ಗೊತ್ತಿಲ್ಲ. ಸನಾತನ ಧರ್ಮ ಹಿಂದೂ ಎನ್ನುವುದು ಕೇವಲ ಶಬ್ದ ಅಲ್ಲ. ಜೀವನ ಬದ್ಧತೆಯಾಗಿದೆ. ನಮ್ಮ ಸಂಸ್ಕೃತಿ ಪರಂಪರೆ ತಿಳಿದುಕೊಳ್ಳಲು ಜಾರಕಿಹೊಳಿ ಯಾವುದಾದರೂ ಪಂಡಿತರ ಮೊರೆ ಹೋಗಲಿ. ಕಾಂಗ್ರೆಸ್ ನಾಯಕನಾಗಿ ಒಣ ಪ್ರಚಾರದ ಉದ್ದೇಶದಿಂದ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಿರಿ. ಮುಂದೆ ನಿಮ್ಮ ರಾಜಕೀಯ ಭವಿಷ್ಯ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಮಹಾನಗರಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ನಗರ ಮಂಡಲ ಅಧ್ಯಕ್ಷ ಮಳುಗೌಡ, ರಾಜೇಶ ದೇವಗಿರಿ, ಸುರೇಶ ಬಿರಾದಾರ, ಬಸವರಾಜ ಬೈಚಬಾಳ, ಶಂಕರ ಹೂಗಾರ, ಸಂದೀಪ್ ಪಾಟೀಲ, ಭೀಮಾಶಂಕರ ಹದ್ನೂರ, ಕೃಷ್ಣಾ ಗುನ್ನಾಳಕರ, ಬಸವರಾಜ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ ಗಡಗಿ, ಪಾಂಡು ಸಾಹುಕಾರ, ಮಹೇಶ ಒಡೆಯರ, ವಿಠ್ಠಲ ಹೊಸಪೇಟೆ, ಜವಾರ ಗೋಸಾವಿ, ಸಂತೋಷ ಪಾಟೀಲ, ಲಕ್ಷ್ಮಣ ಜಾಧವ, ಕಾಂತು ಸಿಂಧೆ, ವಿಠ್ಠಲ ನಡುವಿನಕೇರಿ, ವಿಜಯ ಜೋಶಿ, ಗೀತಾ ಕುಗನೂರ, ಲಕ್ಷ್ಮೇ ಕನ್ನೊಳ್ಳಿ, ವಿವೇಕಾನಂದ ಡಬ್ಬಿ, ಸತೀಶ ಡೋಬಳೆ, ದತ್ತಾ ಗೋಲಾಂಡೆ, ಗುರು ಗಚ್ಚಿನಮಠ, ರಾಹುಲ್ ಔರಂಗಬಾದ್ ಉಪಸ್ಥಿತರಿದ್ದರು.