ಹಾವೇರಿಯಲ್ಲಿ ನಿಲ್ಲದ ಮಳೆ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ನಡೆದ ಘಟನೆ
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ಆ.10): ಸಾವು ಯಾರಿಗೆ ಯಾವಾಗ ಬರುತ್ತೋ ಗೊತ್ತಿಲ್ಲ. ನೆಮ್ಮದಿಯಿಂದ ನಿದ್ರೆ ಮಾಡ್ತಿದ್ದ ವ್ಯಕ್ತಿ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ನಡೆದಿದೆ. ಜಿಲ್ಲೆಯಲ್ಲಿ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮನೆಯ ಗೋಡೆಗಳು ಶಿಥಿಲಗೊಂಡಿದ್ದದ್ದರಿಂದ ಮನೆಯ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮುಸ್ತಾಕ ಶರೀಪ್ ಸಾಬ ಯರಗುಪ್ಪಿ (27) ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಬಿದ್ದ ಪರಿಣಾಮ ಮುಸ್ತಾಕ ತೀವ್ರ ಗಾಯಗೊಂಡ ಇವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮನೆಯು ತೀವ್ರ ಶಿಥಿಲಗೊಂಡಿದ್ದರಿಂದ ಗೋಡೆಯು ಕುಸಿತಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಪತ್ನಿ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.
ಉಕ್ಕಿ ಹರಿಯುತ್ತಿರುವ ತುಂಗಭದ್ರೆ, ಜನರ ಪರದಾಟ
ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಆಸ್ಪತ್ರೆ ಸೇರಿದಂತೆ ತುರ್ತು ಅಗತ್ಯಗಳಿಗಾಗಿ ಜನ ಪರದಾಡ್ತಿದ್ದಾರೆ. ಹಾವೇರಿ ತಾಲೂಕು ಹಾಂವಸಿ ಹಾಗೂ ಶಾಕಾರ ಗ್ರಾಮಸ್ಥರು ದಿನನಿತ್ಯ ಒದ್ದಾಡೋ ಹಾಗಾಗಿದೆ.
ಹಾವೇರಿ: ಜಾನುವಾರುಗಳ ಜೀವ ಹಿಂಡುತ್ತಿರುವ ಲಂಪಿ ಸ್ಕಿನ್ ಕಾಯಿಲೆ
ತುಂಗಭದ್ರ ನದಿ ಪ್ರವಾಹ ಹೆಚ್ಚಾಗಿರೋ ಹಿನ್ನಲೆಯಲ್ಲಿ ಹಾಂವಸಿ ಮತ್ತು ಶಾಕರದಿಂದ ಹೊಳಲಿಗೆ ಹೋಗುವ ದಾರಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ನದಿಯ ಪಾತ್ರದಲ್ಲಿರುವ ಹಾಂವಸಿ ಮತ್ತು ಶಾಕಾರ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ವರದಾನದಿ ನೀರು ಕೂಡ ಹೆಚ್ಚಾಗಿದ್ದು ತುಂಗಭದ್ರಾ ನದಿಯ ಒತ್ತಡ ಹೆಚ್ಚಾಗಿದೆ.
ಶಾಕಾರ ಮತ್ತು ಹಾಂವಸಿ ಹಾವೇರಿ ತಾಲೂಕಿನ ಕಡೆಯ ಹಳ್ಳಿಗಳಾಗಿದ್ದು, ಜನರಿಗೆ ಸರಿಯಾದ ಆಸ್ಪತ್ರೆ ಕೂಡ ಇಲ್ಲ. ಆಸ್ಪತ್ರೆಗೆ ಸುಮಾರು 15 ಕಿಲೋಮೀಟರ್ ಸುತ್ತಿ ಗುತ್ತಲ ಪಟ್ಟಣಕ್ಕೆ ಹೋಗಬೇಕು. ಶಾಲಾ ಮಕ್ಕಳೂ ಕೂಡಾ ಶಾಲೆಗೆ ಹೋಗಲು ಪರಿತಪಿಸುತ್ತಿದ್ದಾರೆ. ಹಾವನೂರು ಗ್ರಾಮದಿಂದ ಶಾಕಾರ ಗ್ರಾಮದ ನಡುವೆ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಬಹು ದಿನಗಳಿಂದ ಒಂದು ಚಿಕ್ಕ ಸೇತುವೆ ನಿರ್ಮಿಸಿಕೊಡಿ ಎಂದು ಕೇಳಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದನೆ ನೀಡಿಲ್ಲ.
ಕುಮದ್ವತಿ ಆರ್ಭಟಕ್ಕೆ ನೂರಾರು ಎಕರೆ ಜಮೀನು ಜಲಾವೃತ
ಜಿಲ್ಲೆಯಲ್ಲಿ ನಿರಂತರ ಜಿಟಿ ಜಿಟಿ ಮಳೆಗೆ ಕುಮದ್ವತಿ ನದಿ ತುಂಬಿ ಹರಿಯುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರೋ ಸೇತುವೆ ಮುಳುಗಡೆಯಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಣಕೂರು- ಲಿಂಗದಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ಕುಮದ್ವತಿ ನದಿ ಅಪಾಯದ ಮಟ್ಟ ಮೀರಿದೆ. ಇದರಿಂದ ಸೇತುವೆ ಪಕ್ಕದ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ರೈತರ ಜಮೀನುಗಳು ನದಿಯಂತಾಗಿದೆ. ಎಲ್ಲಿ ನೋಡಿದರೂ ನೀರೇ ನೀರು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.