ಹಾವೇರಿ: ಜಾನುವಾರುಗಳ ಜೀವ ಹಿಂಡುತ್ತಿರುವ ಲಂಪಿ ಸ್ಕಿನ್‌ ಕಾಯಿಲೆ

ಹಾವೇರಿ ತಾಲೂಕಿನ ಯತ್ತಿನಹಳ್ಳಿ, ಕರ್ಜಗಿ ಭಾಗದಲ್ಲಿ ವ್ಯಾಪಿಸುತ್ತಿರುವ ಚರ್ಮ ಗಂಟು ರೋಗ

Lumpy Skin Disease to Cattle at Haveri grg

ನಾರಾಯಣ ಹೆಗಡೆ

ಹಾವೇರಿ(ಆ.06):  ಅತಿವೃಷ್ಟಿ, ನೆರೆಯಿಂದ ಬೆಳೆ ಹಾಳಾಗುತ್ತಿರುವುದರ ನಡುವೆ ಅನ್ನದಾತ ಪ್ರೀತಿಯಿಂದ ಸಾಕಿದ ಜಾನುವಾರುಗಳು ಲಂಪಿ ಸ್ಕಿನ್‌ (ಚರ್ಮ ಗಂಟು) ರೋಗದಿಂದ ಬಳಲುತ್ತಿವೆ. ಉಳುಮೆ ಮಾಡುವ ಎತ್ತುಗಳು, ಹಾಲು ಕರೆಯುವ ಆಕಳುಗಳು ಮಲಗುತ್ತಿವೆ. ಇದನ್ನು ನೋಡಿ ರೈತರು ಕಣ್ಣೀರು ಹಾಕುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿವೆ. ಎರಡು ವರ್ಷಗಳ ಹಿಂದೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಸುಮಾರು 200ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ ರೋಗ ಮತ್ತೆ ಉಲ್ಬಣಿಸುತ್ತಿದೆ. ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಗಂಟು ರೋಗ ಕಾಣಿಸಿಕೊಂಡಿದೆ. ಕರ್ಜಗಿ ಸುತ್ತಮುತ್ತಲ ಗ್ರಾಮಗಳಲ್ಲೂ ಹಲವು ದನಕರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ.

ದನಕರುಗಳ ಮೈಮೇಲೆ ಗುಳ್ಳೆಗಳು ಕಾಣಸಿಕೊಂಡು ಅವು ಆಹಾರ ಸೇವಿಸುವುದನ್ನೇ ನಿಲ್ಲಿಸುತ್ತಿವೆ. ದಿನದಿಂದ ದಿನಕ್ಕೆ ರೋಗ ವ್ಯಾಪಿಸುತ್ತಿದೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ಜಿಲ್ಲೆಯ ರೈತರಿಗೆ ಇದರಿಂದ ಆತಂಕ ಶುರುವಾಗಿದೆ.

HAVERI: ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ನೀರು ಆಹಾರ ಸೇವಿಸದೇ ಜಾನುವಾರುಗಳು ನಿತ್ರಾಣಗೊಳ್ಳುತ್ತಿವೆ. ಉಳುಮೆ ಎತ್ತುಗಳು ಕೊಟ್ಟಿಗೆಯಲ್ಲೇ ಮಲಗುತ್ತಿವೆ. ಕಾಯಿಲೆ ಬಂದಿರುವ ಹಸು ಹಾಲು ಕರೆಯುವುದನ್ನೇ ನಿಲ್ಲಿಸಿವೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಒಂದೇ ಕೊಟ್ಟಿಗೆಯಲ್ಲಿರುವ ಮತ್ತು ಮೇಯಲು ಹೋಗುವ ದನಕರುಗಳಿಗೆ ಹರಡುತ್ತಿವೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ತಕ್ಷಣ ನಿಯಂತ್ರಣಕ್ಕೆ ಬರದಿದ್ದರೆ ಜಿಲ್ಲೆಯ ಹೈನುಗಾರಿಕೆ ಮೇಲೆ ಭಾರೀ ಪೆಟ್ಟು ಬೀಳಲಿದೆ.

ರೈತರು ಕಂಗಾಲು:

ಪ್ರೀತಿಯಿಂದ ಸಾಕಿದ್ದ ಎತ್ತು, ಆಕಳುಗಳ ಮೈತುಂಬಾ ಗಡ್ಡೆಗಳು ತುಂಬಿಕೊಂಡಿದ್ದು, ರಕ್ತ ಸೋರುತ್ತಿವೆ. ಇದನ್ನು ನೋಡಿ ರೈತರು ಮಮ್ಮಲ ಮರುಗುತ್ತಿದ್ದಾರೆ. ಉಪಚಾರಕ್ಕೆ ನಿತ್ಯ ಸಾವಿರಾರು ರು. ಖರ್ಚು ಮಾಡಿದರೂ ಮಲಗಿದ ಜಾನುವಾರುಗಳು ಮೇಲಕ್ಕೇಳುತ್ತಿಲ್ಲ. ಇತ್ತ ಮುಂಗಾರು ಹಂಗಾಮಿನ ಕೃಷಿ ಕಾರ್ಯಗಳನ್ನು ಮಾಡಲಾಗದೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ರೈತರು ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹಾಲು ಕರೆಯುವ ಆಕಳುಗಳು ಹಾಲು ಹಿಂಡುವುದನ್ನು ನಿಲ್ಲಿಸಿವೆ. ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಅನೇಕ ರೈತರಿಗೆ ಚಿಂತೆ ಶುರುವಾಗಿದೆ.

ರೋಗ ಪೀಡಿತ ಜಾನುವಾರು ಆಹಾರ ಸೇವಿಸದೇ ನಿತ್ರಾಣಗೊಳ್ಳುತ್ತಿರುವುದರಿಂದ ಆತಂಕಗೊಂಡು ಪಶು ವೈದ್ಯರಿಗೆ ಮಾಹಿತಿ ತಿಳಿಸುತ್ತಿದ್ದಾರೆ. ಒಂದರಿಂದ ಮತ್ತೊಂದು ಜಾನುವಾರಿಗೆ ಹರಡುವ ರೋಗವಾಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಹಾವೇರಿಯಲ್ಲೊಂದು ಆಮೆಗತಿ ಕಾಮಗಾರಿ; 15 ವರ್ಷ ಕಳೆದರೂ ಮುಗಿಯದ ಯುಜಿಡಿ ಕಾಮಗಾರಿ!

ನಮ್ಮ ಉಸಿರಾಗಿರುವ ಜಾನುವಾರುಗಳಿಗೆ ದಿಢೀರನೇ ಈ ರೋಗ ಕಾಣಿಸಿಕೊಂಡಿದೆ. ಉಳುಮೆ ಮಾಡುತ್ತಿದ್ದ ಎತ್ತು ಮೂರ್ನಾಲ್ಕು ದಿನಗಳಿಂದ ಆಹಾರ ಸೇವಿಸದೇ ಮಲಗಿದೆ. ಮೈಮೇಲೆ ಗಂಟು ಕಾಣಿಸಿಕೊಂಡಿದೆ. ರಕ್ತ ಸೋರಿ ಎತ್ತುಗಳು ನಿತ್ರಾಣಗೊಂಡಿವೆ. ಪ್ರತ್ಯೇಕವಾಗಿ ಕಟ್ಟಿ ಉಪಚರಿಸುವಂತೆ ಸೂಚಿಸಿದ್ದಾರೆ ಅಂತ ರೈತ ನಾಗಪ್ಪ ಕೂಬಿಹಾಳ ಹೇಳಿದ್ದಾರೆ.  

ಲಂಪಿ ಸ್ಕಿನ್‌ ರೋಗ ಹಾವೇರಿ ತಾಲೂಕಿನ ಯತ್ತಿನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡಿದ್ದು, ರೋಗ ಪೀಡಿತ ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಈ ರೋಗದಿಂದ ಜಿಲ್ಲೆಯಲ್ಲಿ ದನಕರು ಸತ್ತಿಲ್ಲ. ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸ್ಯಾಂಪಲ್ಸ್‌ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ರೋಗವಿರುವ ದನವನ್ನು ಪ್ರತ್ಯೇಕವಾಗಿ ಕಟ್ಟಿಉಪಚರಿಸಿದರೆ ಉಳಿದ ದನಕರುಗಳಿಗೆ ಹರಡುವುದನ್ನು ತಡೆಯಬಹುದಾಗಿದೆ ಅಂತ ಪಶು ಸಂಗೋಪನಾ ಇಲಾಖೆ ಡಿಡಿ ಸತೀಶ ಸಂತಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios