ಬಿತ್ತನೆ ವಿಫಲವಾದರೆ ಶೇ.25ರಷ್ಟು ವಿಮೆ ಪರಿಹಾರ
ಹವಾಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ತೋಟಗಾರಿಕೆ ಇಲಾಖೆಯವರು ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು: ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ
ಬಾಗಲಕೋಟೆ(ಜು.22): ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯಂತೆ ಗ್ರಾಮ ಪಂಚಾಯತ್ ಮಟ್ಟದ ಪ್ರಮುಖ ಬೆಳೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕಗಳಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟುಪರಿಹಾರವನ್ನು ವಿಮಾ ಸಂಸ್ಥೆಯವರು ನೀಡಲಿದ್ದಾರೆಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಾವೃಷ್ಟಿಕಾರಣ ಬೆಳೆ ವಿಮೆ ಯೋಜನೆಯಡಿ ಬಿತ್ತನೆ ಅಡಚಣೆ ಪರಿಹಾರ ಕುರಿತು ಜರುಗಿದ ಜಿಲ್ಲಾಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲಿ ಮಳೆಯ ಅಭಾವ ಕಾರಣ ಮಳೆಯಾಶ್ರಿತ ಹೆಸರು ಬೆಳೆಯು ಶೇ.75ಕ್ಕಿಂತ ಕಡಿಮೆ ಬಿತ್ತನೆಯಾಗಿರುವುದಾಗಿ ವರದಿಯಾಗಿದೆ. ವಿಮಾ ಯೋಜನೆಯ ಮಾರ್ಗಸೂಚಿಯಂತೆ ಗ್ರಾಮ ಪಂಚಾಯತ್ ಮಟ್ಟದ ಪ್ರಮುಖ ಬೆಳೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕಗಳಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟುಪರಿಹಾರವನ್ನು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದು ಪಡಿಸಲಾಗುವುದೆಂದು ತಿಳಿಸಿದರು.
ಕೃಷ್ಣ ನದಿ ಒಳಹರಿವು ಹೆಚ್ಚಳ: ಆಲಮಟ್ಟಿಅಣೆಕಟ್ಟೆಗೆ ಜೀವಕಳೆ!
ಮಳೆ ಕೊರತೆ:
ಪ್ರಸಕ್ತ ಸಾಲಿನ ಜೂನ್ ಹಾಗೂ ಜುಲೈ ಮಾಹೆಯ ಮಳೆಯ ವಿವರದಂತೆ ಬಾಗಲಕೋಟೆ ತಾಲೂಕಿನಲ್ಲಿ 127 ಮಿ.ಮೀ ವಾಡಿಕೆ ಮಳೆಗೆ 70.7 ಮಿ.ಮೀ ಮಳೆಯಾಗಿದ್ದು, ಶೇ.44.3ರಷ್ಟು ಕೊರತೆಯಾಗಿದೆ. ಹುನಗುಂದ ತಾಲೂಕಿನಲ್ಲಿ ವಾಡಿಕೆ ಮಳೆಯಾದ 131.8 ಮಿ.ಮೀ ಮಳೆಗೆ 51.3 ಮಿ.ಮೀ ಮಳೆಯಾಗಿದ್ದು, ಶೇ. 61.1 ರಷ್ಟುಮಳೆ ಕೊರತೆಯಾಗಿದೆ. ಇಳಕಲ್ಲ ತಾಲೂಕಿನ ವಾಡಿಕೆ ಮಳೆ 122.5 ಮಿ.ಮೀ ಗೆ 57.6 ಮಿ.ಮೀ. ಮಳೆಯಾಗಿದ್ದು ಶೇ.53 ರಷ್ಟುಮಳೆ ಕಡಿಮೆಯಾಗಿರುವುದಾಗಿ ಸಭೆಗೆ ಜಂಟಿ ಕೃಷಿ ನಿರ್ದೇಶಕರು ವಿವರವನ್ನು ನೀಡಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲಿ ಹೆಸರು ಬೆಳೆಯ ಬಿತ್ತನೆ ಗುರಿಯನ್ನು ಅನುಕ್ರಮವಾಗಿ 2500, 1000 ಹಾಗೂ 1000 ಹೆಕ್ಟೇರ್ ಹೊಂದಿದ್ದು, ಇದಕ್ಕೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಸಲ್ಲಿಸಿರುವ ಬಿತ್ತನೆ ವರದಿಯಂತೆ 310, 90 ಹಾಗೂ 215 ಹೆಕ್ಟೇರ್ ಎಂದು ಅನುಕ್ರಮವಾಗಿ ವರದಿಯಾಗಿದೆ. ಈ ಮೇಲಿನ ಅಂಶಗಳಂತೆ ಮಾಡಲು ಸಭೆಯಲ್ಲಿ ಹಾಜರಿದ್ದವರ ಅಭಿಪ್ರಾಯವನ್ನು ಜಂಟಿ ಕೃಷಿ ನಿರ್ದೇಶಕರು ಕೋರಿದರು.
111 ಅರ್ಜಿ:
ಯಾವುದೇ ಆಕ್ಷೇಪಣೆ ಬರಲಿಲ್ಲವಾದ್ದರಿಂದ ಸಂರಕ್ಷಣೆ ತಂತ್ರಾಂಶದಲ್ಲಿನ ವರದಿಯಂತೆ ಜುಲೈ 20ರಂತೆ ಜಿಲ್ಲೆಯಲ್ಲಿ ಹೆಸರು ಬೆಳೆಗೆ 835 ಅರ್ಜಿಗಳು ಸ್ವೀಕೃತವಾಗಿದ್ದು, 3164.35 ರಷ್ಟುಕ್ಷೇತ್ರ ವಿಮೆಗೆ ಒಳಪಟ್ಟಿರುತ್ತವೆ. ಬಾಗಲಕೋಟೆ ತಾಲೂಕಿನಲ್ಲಿ 11 ಗ್ರಾಮ ಪಂಚಾಯತಿಗಳಲ್ಲಿ 111 ಅರ್ಜಿಗಳು, ಹುನಗುಂದ ತಾಲೂಕಿನಲ್ಲಿ 45 ಹಾಗೂ ಇಳಕಲ್ಲ ತಾಲೂಕಿನ 42 ಅರ್ಜಿಗಳ ಒಟ್ಟು 356.9, 133.23 ಹಾಗೂ 107.38 ಕ್ಷೇತ್ರದಲ್ಲಿ ಹೆಸರು ಬೆಳೆಯ ವಿಮೆಯಾಗಿರುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಮಖಂಡಿ ವಿಭಾಗದ ಕೃಷಿ ನಿರ್ದೇಶಕ ಕೆ.ಎಸ್.ಅಗಸಿನಾಳ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಸಹಾಯಕ ನಿರ್ದೇಶಕರಾದ ಪಾಂಡಪ್ಪ ಲಮಾಣಿ, ಮಂಜುನಾಥ ಮಾಳೆ ಸೇರಿದಂತೆ ಕೃಷಿ ಇಲಾಖೆಯ ಪ್ರೀತಿ ತೇಲಿ, ಎಂ.ಆರ್.ನಾಗೂರ, ವಿಮೆ ಪ್ರತಿನಿಧಿಗಳು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅನ್ನಭಾಗ್ಯ ಯೋಜನೆ ಹಣ: ತಾಂತ್ರಿಕ ಸಮಸ್ಯೆಗೆ ಫಲಾನುಭವಿಗಳು ಅತಂತ್ರ..!
ಡಂಗೂರ ಸಾರಿ ಅರಿವು ಮೂಡಿಸಿ
ತಾಲೂಕು ಮಟ್ಟದಲ್ಲಿ ಇಂದಿನಿಂದಲೇ ಕ್ರಮ ಜರುಗಿಸಿ ನಿಗದಿತ ನಮೂನೆಯಲ್ಲಿ ಜುಲೈ 24ರಂದು ಸಲ್ಲಿಸಲು ಸೂಚಿಸಿದರು. ಈ ಬಗ್ಗೆ ಹಾಜರಿದ್ದ ಬೆಳೆ ವಿಮೆ ಸಂಸ್ಥೆ ಪ್ರತಿನಿಧಿಗಳು, ಸಮಿತಿ ಸದಸ್ಯರುಗಳು ಹಾಗೂ ರೈತ ಪ್ರತಿನಿಧಿಗಳಿಗೆ ಹೇಳಿದಾಗ ಹಾಜರಿದ್ದ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಹವಾಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ತೋಟಗಾರಿಕೆ ಇಲಾಖೆಯವರು ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
24ರೊಳಗೆ ವರದಿ ಸಲ್ಲಿಸಿ
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಲ್.ಐ.ರೂಢಗಿ ಮಾತನಾಡಿ, ಮುಂಗಾರು 2023ರ ಬೆಳೆ ವಿಮೆ ಅಧಿಸೂಚನೆಯಂತೆ ಜಿಲ್ಲೆಯ ಹೆಸರು ಬೆಳೆಯ ಬೆಳೆ ವಿಮೆ ನೋಂದಾಯಿಸಲು ಕೊನೆಯ ದಿನ ಜುಲೈ 15 ಮುಗಿದಿದ್ದು, ಬಿತ್ತನೆ ಅಡಚಣೆ ಪರಿಹಾರ ಮಾಡಲು ಕೊನೆಯ ದಿನ ಜುಲೈ 30 ಆಗಿದ್ದು, ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನವರು ನಿಗದಿತ ನಮೂನೆಯಲ್ಲಿ ವರದಿ ತಯಾರಿಸಿ ಜುಲೈ 24 ರೊಳಗಾಗಿ ಸಲ್ಲಿಸಲು ತಿಳಿಸಿದರು.