24ರಿಂದ ಅಭಾವೀಮ 23ನೇ ಮಹಾಧಿವೇಶನ: ಈಶ್ವರ್ ಖಂಡ್ರೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನ ಡಿ.24ರಿಂದ ಮೂರು ದಿನಗಳ ಕಾಲ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.
ದಾವಣಗೆರೆ *(ಡಿ.6) : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನ ಡಿ.24ರಿಂದ ಮೂರು ದಿನಗಳ ಕಾಲ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮಹಾಧಿವೇಶನದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳನ್ನೂ ಒಟ್ಟಾಗಿಸಿ, ಏಕತೆ, ಸಮಗ್ರತೆ ಕಾಪಾಡುವ ಜೊತೆಗೆ ಸಮಾಜದ ಮುಂದಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದರು.
ವೀರಶೈವ ಮಹಾಸಭಾ ರಾಜಕೀಯ ಪುಡಾರಿಗಳ ಸಂಘಟನೆ: ಎಸ್.ಎಂ ಜಾಮದಾರ್ ಕಿಡಿ
ಸುಮಾರು 118 ವರ್ಷಗಳ ಇತಿಹಾಸವಿರುವ ಅಭಾವೀಮ 1904ರಲ್ಲಿ ಸ್ಥಾಪನೆಯಾಗಿದೆ. ಈ ವರೆಗೆ 22 ಮಹಾಧಿವೇಶನ ನಡೆಸಿದ್ದು, 20 ಅಧ್ಯಕ್ಷರ ಮಹಾಸಭಾ ಕಂಡಿದೆ. ಮುಂದಿನ ಮೂರು ಅವಧಿಗೆ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ದಾವಣಗೆರೆಯಲ್ಲೇ 1917ರಲ್ಲಿ ಮಹಾಧಿವೇಶನ ನಡೆದಿತ್ತು. 105 ವರ್ಷಗಳ ನಂತರ ಮತ್ತೆ ಮಹಾಧಿವೇಶನಕ್ಕೆ ಈ ಊರು ಸಜ್ಜಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರಪತಿ, ಮುಖ್ಯಮಂತ್ರಿ ಭಾಗಿ
ಡಿ.24ರಂದು ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಗೆ ಆಹ್ವಾನಿಸಲಾಗುತ್ತದೆ. ಡಿ.26ರಂದು ಕಡೇ ದಿನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಮೂರು ದಿಗಳ ಅಧಿವೇಶನದಲ್ಲಿ ನಾಡಿನ ವಿವಿಧ ಮಠಾಧೀಶರು, ಹಿರಿಯ ಸಾಹಿತಿಗಳು ಪಾಲ್ಗೊಳ್ಳುವರು. ದೇಶಾದ್ಯಂತ ವಿವಿಧ ರಾಜ್ಯಗಳ ಸಮಾಜದ ಪ್ರತಿನಿಧಿಗಳು ಭಾಗವಹಿಸುವರು. ಉದ್ಯಮ, ಕೈಗಾರಿಕೆ, ಮಹಿಳಾ, ಕೃಷಿ, ಶಿಕ್ಷಣ, ಯುವ ಜನಾಂಗದ ಕುರಿತಂತೆ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಹತ್ತು ಹಲವು ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಮೀಸಲಾತಿ ಸಂವಿಧಾನ ಬದ್ಧವಾಗಿ ಸಿಗಲಿ:
ಉತ್ತರ ಮತ್ತು ಮಧ್ಯ ಕರ್ನಾಟಕದ ವೀರಶೈವ ಲಿಂಗಾಯತ ಬಾಂಧವರಲ್ಲಿ ಬಹುತೇಕರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹವರು ಕೇಂದ್ರ ಒಬಿಸಿ ಪಟ್ಟಿಯಿಂದ ಹಿಂದುಳಿದಿದ್ದು ಅಂತಹವರಿಗೆ ನ್ಯಾಯ ಸಿಗಬೇಕಿದೆ. ಇಡೀ ವಿಶ್ವಕ್ಕೆ ಸಾಮಾಜಿಕ ನ್ಯಾಯ ಕೊಟ್ಟಸಮಾಜವೇ ಈಗ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಿರುವುದು ದುರಂತ. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ, ಸಂವಿಧಾನ ಬದ್ಧವಾಗಿ ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು.
ಅನಾದಿಯಿಂದಲೂ ವೀರಶೈವ ಲಿಂಗಾಯತ ಮಠ ಮಾನ್ಯಗಳು ತಮ್ಮದೇ ಆದ ಪರಂಪರೆ, ಇತಿಹಾಸ, ಸಮಾಜಮುಖಿ ಕಾರ್ಯಗಳ ಹಿನ್ನೆಲೆ ಹೊಂದಿವೆ. ಅಧಿವೇಶನದ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತಾಯಿಸಲಾಗುವುದು. ರಾಜ್ಯ ಸೇರಿ ವಿವಿಧ ರಾಜ್ಯಗಳು, ವಿದೇಶಗಳಿಂದಲೂ ಆಗಮಿಸಲಿದ್ದು, ಮೂರೂ ದಿನಗಳ ಕಾಲ ಸಮಾಜದ ಲಕ್ಷಾಂತರ ಜನ ಪಾಲ್ಗೊಳ್ಳುವ ಮಹಾಧಿವೇಶನ ಇದಾಗಿರಲಿದೆ ಎಂದು ಮಾಹಿತಿ ನೀಡಿದರು.
Chitradurga: ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮುರುಘಾ ಶ್ರೀ ಪೀಠ ತ್ಯಾಗ ವಿಚಾರ ಚರ್ಚೆ: ಅಣಬೇರು ರಾಜಣ್ಣ
ಬಾರ್ಕಿಯ ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್.ತಿಪ್ಪಣ್ಣ, ಪ್ರಭಾಕರ ಕೋರೆ, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಸಚ್ಚಿದಾನಂದ ಮೂರ್ತಿ, ಕೆ.ಜಿ.ಶಿವಕುಮಾರ, ಬಿ.ಜಿ.ರಮೇಶ, ಶಂಭು ಉರೇಕೊಂಡಿ, ಸೇರಿ ಅನೇಕರಿದ್ದರು.
ವೀರಶೈವ ಲಿಂಗಾಯತ ಸಮಾಜಕ್ಕೆ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪ ಸಂವಿಧಾನಬದ್ಧವಾಗಿ ಯಾವ ಸೌಲಭ್ಯಗಳು ಸಿಗಬೇಕಾಗಿದೆ. ಅದಕ್ಕಾಗಿ ಅಭಾವೀಮ ಪ್ರಯತ್ನ ನಡೆಸುತ್ತಿದೆ. ಸಮುದಾಯದ ಎಲ್ಲರೂ ಒಗ್ಗಟ್ಟಾಗಿರಬೇಕು ಎಂಬುದಾಗಿ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಿದೆ.
ಈಶ್ವರ ಖಂಡ್ರೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಭಾವೀಮ.