ಬೆಂಗಳೂರು ನಗರ ಪರಿಸರದ ಹಿಂದಿನ ಮತ್ತು ವರ್ತಮಾನ ಪ್ರತಿಬಿಂಬಿಸುವ ‘ಪ್ರಕೃತಿ’ ವಿಷಯಾಧಾರಿತ ಕಲಾ ಪ್ರದರ್ಶನ ಈ ಬಾರಿಯ 23ನೇ ಚಿತ್ರಸಂತೆಯ ವಿಶೇಷ. ಜ.4ರಂದು ಕುಮಾರಕೃಪ ರಸ್ತೆ, ಕ್ರೆಸೆಂಟ್‌ ರಸ್ತೆ, ಚಿತ್ರಕಲಾ ಪರಿಷತ್ತು, ಸೇವಾ ದಳದ ಆವರಣದಲ್ಲಿ ನಡೆಯಲಿರುವ ಚಿತ್ರಸಂತೆ

ಬೆಂಗಳೂರು : ಬೆಂಗಳೂರು ನಗರ ಪರಿಸರದ ಹಿಂದಿನ ಮತ್ತು ವರ್ತಮಾನ ಪ್ರತಿಬಿಂಬಿಸುವ ‘ಪ್ರಕೃತಿ’ ವಿಷಯಾಧಾರಿತ ಕಲಾ ಪ್ರದರ್ಶನ ಈ ಬಾರಿಯ 23ನೇ ಚಿತ್ರಸಂತೆಯ ವಿಶೇಷ.

ಜ.4ರಂದು ಕುಮಾರಕೃಪ ರಸ್ತೆ, ಕ್ರೆಸೆಂಟ್‌ ರಸ್ತೆ, ಚಿತ್ರಕಲಾ ಪರಿಷತ್ತು, ಸೇವಾ ದಳದ ಆವರಣದಲ್ಲಿ ನಡೆಯಲಿರುವ ಚಿತ್ರಸಂತೆ ಪರಿಸರ ಸುಸ್ಥಿರತೆ ಮತ್ತು ಜವಾಬ್ದಾರಿಯುತ ನಗರ ಭವಿಷ್ಯಗಳ ಕುರಿತು ಜಾಗೃತಿ ಮೂಡಿಸಲು ಚಿಂತನೆಗೆ ಪ್ರೇರೇಪಿಸುವ ಕಲೆಯನ್ನು ಶಕ್ತಿಯು ಮಾಧ್ಯಮವಾಗಿ ಬಳಸುವ ಉದ್ದೇಶವನ್ನು ಒಳಗೊಂಡಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಡಾ.ಬಿ.ಎಲ್‌. ಶಂಕರ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಚಿತ್ರಸಂತೆಗೆ 22 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಈ ಬಾರಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ರಾಜ್ಯದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರಿಗೆ ಶೇ.50ರಷ್ಟು ಮೀಸಲು ನೀಡಲಾಗಿದೆ. ಉಳಿದಂತೆ ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್‌, ಲಕ್ಷದ್ವೀಪ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಕಲಾವಿದರು ಆಗಮಿಸಲಿದ್ದಾರೆ ಎಂದು ಹೇಳಿದರು.

ಒಟ್ಟು 1500ಕ್ಕೂ ಹೆಚ್ಚು ಮಳಿಗೆಗಳಿದ್ದು ಸಾಮಾನ್ಯ ವರ್ಗಕ್ಕೆ 1165, ಅಂಗವಿಕಲರಿಗೆ 186, ಹಿರಿಯ ನಾಗರಿಕರಿಗೆ 87 ಮತ್ತು ಅಂಗವಿಕಲ ಹಿರಿಯ ನಾಗರಿಕರಿಗೆ 6 ಮಳಿಗೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. 1440 ಮಳಿಗೆಗಳ ಪೈಕಿ ಪುರುಷರಿಗೆ 972 (ಶೇ.67) ಮತ್ತು ಮಹಿಳೆಯರಿಗೆ 473 (ಶೇ.33) ಮಳಿಗೆಗಳನ್ನು ವಿತರಿಸಲಾಗಿದೆ. ಇದರಲ್ಲಿ ವೃತ್ತಿಪರ ಕಲಾವಿದರಿಗೆ 1162 ಮತ್ತು ಹವ್ಯಾಸಿ ಕಲಾವಿದರಿಗೆ 225 ಮಳಿಗೆಗಳು ಇರಲಿವೆ ಎಂದು ತಿಳಿಸಿದರು.

ಸಿಎಂ,ಡಿಸಿಎಂ ಉದ್ಘಾಟನೆ:

ಜ.4ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಲಾಪ್ರದರ್ಶನ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌, ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಎಸ್‌.ಟಿ. ಸೋಮಶೇಖರ್‌, ರಿಜ್ವಾನ್‌ ಅರ್ಷದ್‌, ಕರ್ನಾಟಕ ಚಿತ್ರಕಲಾ ಪರಿಷತ್‌ ಟ್ರಸ್ಟ್‌ ಅಧ್ಯಕ್ಷ ಎಸ್‌.ಎನ್‌. ಅಗರವಾಲ್‌ ಉಪಸ್ಥಿತರಿರುವರು. ಚಿತ್ರಸಂತೆಯಲ್ಲಿ ಕಲಾಪ್ರದರ್ಶನವು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದರು.

ಬಗೆಬಗೆಯ ಕಲಾಕೃತಿಗಳು

ಮೈಸೂರು ಮತ್ತು ತಂಜಾವೂರು ಶೈಲಿಯ ಪರಂಪರೆಯ ಚಿತ್ರಕಲೆ, ರಾಜಸ್ಥಾನಿ, ಮಧುಬನಿ ಶೈಲಿಯ ಕಲಾಕೃತಿಗಳು ಹಾಗೂ ಜಲವರ್ಣ, ತೈಲವರ್ಣ, ಅಕ್ರಿಲಿಕ್‌, ಪೆನ್ಸಿಲ್‌, ಮಷಿ ರೇಖಾಚಿತ್ರಗಳು, ಗ್ರಾಫಿಕ್‌ ಮಾಧ್ಯಮ ಕೃತಿಗಳು ಸೇರಿದಂತೆ ವಿವಿಧ ಪರಂಪರೆಯ ಆಧುನಿಕ ಮತ್ತು ಸಮಕಾಲೀನ ಶೈಲಿಯ ಕಲಾಕೃತಿಗಳು ಚಿತ್ರಸಂತೆಯಲ್ಲಿ ವೀಕ್ಷಣೆ ಮತ್ತು ಮಾರಾಟಕ್ಕೆ ಲಭ್ಯ ಇರಲಿವೆ. ನೂರು ರುಪಾಯಿಯಿಂದ ಲಕ್ಷಾಂತರ ರು. ಮೌಲ್ಯದ ಕಲಾಕೃತಿಗಳನ್ನು ಈ ಚಿತ್ರಸಂತೆಯಲ್ಲಿ ಖರೀದಿಸಬಹುದಾಗಿದೆ.

ಫೀಡರ್‌ ಬಸ್‌ ವ್ಯವಸ್ಥೆ

ಚಿತ್ರಸಂತೆಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ, ಮಂತ್ರಿ ಮಾಲ್‌ ಮೆಟ್ರೋ ನಿಲ್ದಾಣ, ವಿಧಾನಸೌದ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್‌ ಬಸ್‌ ಸೇವೆಯನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಬಿಎಂಟಿಸಿ ಬಸ್‌ಗಳು ಲಭ್ಯ ಇರಲಿವೆ. ಸಾರ್ವಜನಿಕರಿಗೆ ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಮಳಿಗೆಗಳ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್‌ ಸೌಲಭ್ಯ, ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.