2019ರ ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮದ ವಾಸನೆ..?
* ಸತ್ಯನಾರಾಯಣ ಎಂಬಾತನ ಬಳಿ ಪಿಎಸ್‌ಐ ಹುದ್ದೆ ಕೊಡಿಸೋದಾಗಿ ನಂಬಿಸಿ ವಂಚಿಸಿದ ನವೀನ್
* ಹಣ ಪಡೆದು ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಆರೋಪಿ
* ಪೊಲೀಸರ ಕಾರ್ಯಕ್ಕೆ ಎಸ್‌ಪಿ ಮೆಚ್ಚುಗೆ
ವರದಿ- ರವಿಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ(ಮೇ.11): ಪೊಲೀಸ್ ಸಬ್‌ಇನ್ಸ್‌ಪೆಕ್ಟರ್(PSI) ಹುದ್ದೆಯ ನೇಮಕಾತಿಯಲ್ಲೂ ಅಕ್ರಮದ ವಾಸನೆ ಆಗಿದೆಯಾ ಎಂಬ ಅನುಮಾನ ಮೂಡಿಸುತ್ತಿದೆ. ಹೌದು, ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿಗೆ ಸೇರಿದ ಜಿ.ಎಸ್. ಸತ್ಯನಾರಾಯಣ ಎಂಬಾತನ ಬಳಿ ಪಿಎಸ್‌ಐ ಹುದ್ದೆ ಕೊಡಿಸೋದಾಗಿ ನಂಬಿಸಿ ಹುಬ್ಬಳ್ಳಿ ಮೂಲದ ನವೀನ್ ಧಳಭಂಜನ್(Naveen Dalbanjan) ಎಂಬಾತ ಸುಮಾರು 21 ಲಕ್ಷದ 20 ಸಾವಿರ ರೂ ಹಣ ಪಡೆದು ವಂಚಿಸಿರೋ(Fraud) ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಇತ್ತೀಚೆಗೆ ಪಿಎಸ್‌ಐ ನೇಮಕಾತಿಯ ಅಕ್ರಮ(PSI Recruitment Scam) ಬಯಲಾಗುತ್ತಿದ್ದಂತೆ ಬಾಗೇಪಲ್ಲಿಯ ಸತ್ಯನಾರಾಯಣ ಎಂಬಾತ ನಮಗೂ ಕೆಲಸ ಕೊಡಿಸೋದಾಗಿ ನಂಬಿಸಿ ನವೀನ್ ಧಳಭಂಜನ್ ಹಣ ಪಡೆದು ವಂಚಿಸಿದ್ದಾರೆಂದು ಮೇ. 8 ರಂದು ಬಾಗೇಪಲ್ಲಿ ಪೊಲೀಸ್(Police) ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಬೆನ್ನೆತ್ತಿದ ಬಾಗೇಪಲ್ಲಿ ಪೊಲೀಸರು ಎರಡೇ ದಿನದಲ್ಲಿ ಆರೋಪಿ ನವೀನ್ ಧಳಭಂಜನ್ ಎಂಬಾತನನ್ನು ಬಂಧಿಸಿ(Arrest) ವಿಚಾರಣೆ ನಡೆಸಿದಾಗ ಹಣ ಪಡೆದು ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ .
ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?
ಏನಿದು ಪ್ರಕರಣ?
2019ರಲ್ಲಿ ಸರ್ಕಾರ 300 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ(Notification) ಹೊರಡಿಸಿತ್ತು. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಈ ಅಧಿಸೂಚನೆಯಂತೆ ಬಾಗೇಪಲ್ಲಿ ಮೂಲದ ಸತ್ಯನಾರಾಯಣ ಅವರ ಪುತ್ರ ಕಿರಣ್ ಎಂಬಾತ ಕೂಡ ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆಯಲ್ಲಿ ಕಿರಣ್ ಶಾಟ್ ಪುಟ್ ನಲ್ಲಿ ಫೇಲ್ ಆಗಿದ್ದನು. ಈ ವೇಳೆ ಕಿರಣ್ ಹಾಗೂ ಸತ್ಯನಾರಾಯಣ್‌ಗೆ ಗೌರಿಬಿದನೂರು ಮೂಲದ ಜಯರಾಮರೆಡ್ಡಿ ಎಂಬಾತನ ಮೂಲಕ ನವೀನ್ ಧಳಭಂಜನ್ ಎಂಬಾತನ ಪರಿಚಯವಾಗಿದೆ. ಈ ವೇಳೆ ಫೇಲ್ ಆಗಿರೋ ದೈಹಿಕ ಪರೀಕ್ಷೆ ಸೇರಿದಂತೆ ಲಿಖಿತ ಪರೀಕ್ಷೆಯಲ್ಲೂ ಪಾಸ್ ಮಾಡಿಸಿ ನೌಕರಿ ಕೊಡಿಸಲು 30 ಲಕ್ಷ ಹಣ ಬೇಡಿಕೆ ಇಟ್ಟಿದ್ದರು. ನವೀನ್ ಧಳಭಂಜನ್ ಜೊತೆ ಪವನ್, ಸುಹಾಸ್ ಎಂಬ ಮೂವರು ಕೂಡ ಹಣಕ್ಕೆ ಡಿಮ್ಯಾಂಡ್ ಮಾಡಿದ್ರು. ಇದಕ್ಕೆ ಒಪ್ಪಿದ ಕಿರಣ್ ಹಾಗೂ ತಂದೆ ಸತ್ಯನಾರಾಯಣ್ ನವೀನ್ ಅಕೌಂಟ್‌ಗೆ 7 ಲಕ್ಷ 70 ಸಾವಿರ ಹಣವನ್ನು ಹಾಕಿದ್ದು, 13 ಲಕ್ಷದ 50 ಸಾವಿರ ರೂ ಹಣವನ್ನು ನಗದು ರೂಪದಲ್ಲಿ ನೀಡಿದ್ದರು.
ಯಾರು ಈ ನವೀನ್ ಧಳಭಂಜನ್?
ಹುಬ್ಬಳ್ಳಿ(Hubballi) ಮೂಲದ ನವೀನ್ ಧಳಭಂಜನ್ ಅಂಗಡಿಯೊಂದನ್ನು ಇಟ್ಟುಕೊಂಡಿರುತ್ತಾನೆ. ಇದೀಗ ನವೀನ್ ಧಳಭಂಜನ್ ನನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬರೀ ಇವರೊಬ್ಬರ ಬಳಿ ಮಾತ್ರ ಹಣ ಪಡೆದಿದ್ದಾರಾ ಅಥವಾ ಬೇರೆಯವರ ಬಳಿ ಕೂಡ ಹಣ ಪಡೆದಿದ್ದಾರಾ? ಈತನಿಗೆ ಸಾಥ್ ನೀಡಿದವರು ಯಾರು? ಹೀಗೆ ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ತಾನು ಹಣ ಪಡೆದು ವಂಚನೆ ಮಾಡಿರೋದಾಗಿ ನವೀನ್ ಧಳಭಂಜನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರ ಕಾರ್ಯಕ್ಕೆ ಎಸ್‌ಪಿ ಮೆಚ್ಚುಗೆ
ಇನ್ನೂ ಈ ಪ್ರಕರಣವನ್ನು ಪತ್ತೆ ಹಚ್ಚಿದ ಬಾಗೇಪಲ್ಲಿ ಪೊಲೀಸರಿಗೆ ಎಸ್‌ಪಿ ಮಿಥುನ್ ಕುಮಾರ್(Mithun Kumar) ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ದೂರು ದಾಖಲಿಸಿಕೊಂಡ ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಬಾಗೇಪಲ್ಲಿ ಇನ್ಸಫೆಕ್ಟರ್ ಡಿಆರ್ ನಾಗರಾಜ್, ಸಿಬ್ಬಂದಿಯಾದ ನಟರಾಜ್, ಅರುಣ್, ವಿನಾಯಕ್, ಅಶೋಕ್, ಶಬ್ಬಿರ್ ಊರಾನಮನಿ ರನ್ನು ಶ್ಲಾಘಿಸಿದ್ದಾರೆ.