ಮೃತ ಅರಣ್ಯ ರಕ್ಷಕನ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರು. ಪರಿಹಾರ
ಶ್ರೀಗಂಧ ಕಳ್ಳರೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಫಾರೆಸ್ಟ್ ವಾಚರ್ ಕುಟುಂಬಕ್ಕೆ 20 ಲಕ್ಷಕ್ಕೂ ಅಧಿಕ ಮೊತ್ತದ ಪರಿಹಾರ ನೀಡಲಾಗುತ್ತಿದೆ.
ಸಾಗರ [ಫೆ.09]: ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶ್ರೀಗಂಧ ಸಂಗ್ರಹಣೆಯ ಗೋದಾಮು ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಶ್ರೀಗಂಧಚೋರರಿಂದ ಹತ್ಯೆಯಾಗಿರುವ ವಾಚರ್ ನಾಗರಾಜ್ ಬಾಳೆಗುಂಡಿ ಕುಟುಂಬಕ್ಕೆ ಉದ್ಯೋಗ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ಕುಟುಂಬಸ್ಥರು, ಅರಣ್ಯ ಇಲಾಖೆ ಕ್ಷೇಮಾಭಿವೃದ್ದಿ ಸಂಘ, ಸರ್ಕಾರಿ ನೌಕರರ ಸಂಘ ಸೇರಿ ಜನಪ್ರತಿನಿಧಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸ್ಥಳಕ್ಕೆ ಬಂದ ಶಾಸಕ ಎಚ್.ಹಾಲಪ್ಪ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಾಗರಾಜ್ ಸರ್ಕಾರದ ಸ್ವತ್ತು ರಕ್ಷಣೆ ಮಾಡಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನಾಗರಾಜ್ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಶನಿವಾರ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸುತ್ತಿದ್ದು, ವಿಷಯವನ್ನು ಗಮನಕ್ಕೆ ತರಲಾಗುತ್ತದೆ. ನಾಗರಾಜ್ ಕುಟುಂಬಕ್ಕೆ ಸೂಕ್ತ ಪರಿಹಾರದ ಬಗ್ಗೆ ಸಹ ಮನವಿ ಮಾಡಲಾಗುತ್ತದೆ. ಪೊಲಿಸ್ ಇಲಾಖೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ ಶಾಸಕರು, ನಾಗರಾಜ್ ಪುತ್ರ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
7.50 ಲಕ್ಷ ರು. ಪರಿಹಾರ:
ನಾಗರಾಜ್ ಕುಟುಂಬಕ್ಕೆ ಲಿಖಿತವಾಗಿ ಪರಿಹಾರ ಭರವಸೆ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಶನಿವಾರ ಮೃತ ನಾಗರಾಜ್ ಕುಟುಂಬಸ್ಥರು ಮತ್ತು ವಿವಿಧ ಸಂಘಸಂಸ್ಥೆಗಳು, ಗ್ರಾಮಸ್ಥರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ನಾಗರಾಜ್ ಕುಟುಂಬಕ್ಕೆ ಪ್ರಥಮ ಹಂತವಾಗಿ ರು. 7.50 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ರಕ್ತಸಿಕ್ತವಾಗಿ ನರಳಾಡ್ತಾ ಪ್ರಾಣಬಿಟ್ಟ ಗಿರೀಶ್, ಶಿವಮೊಗ್ಗದ ಘೋರ ಹತ್ಯೆಯ ಸಿಸಿಟಿವಿ ದೃಶ್ಯ...
ದಿವಂಗತ ನೌಕರನ ಹೆಸರನ್ನು ಅರಣ್ಯ ಇಲಾಖೆ ಹುತಾತ್ಮರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಈ ಸಂಬಂಧ ರು. 20 ಲಕ್ಷ ಸರ್ಕಾರದಿಂದ ನೀಡಲು ತೀರ್ಮಾನಿಸಲಾಗಿದೆ. ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ನಿಧಿಯಿಂದ ರು. 2 ಲಕ್ಷ ನೀಡಲು ತೀರ್ಮಾನಿಸಲಾಗಿದೆ. ಮೃತ ನಾಗರಾಜ್ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಡಿವೈಎಸ್‌ಪಿ ರಘು ಜೆ., ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಮೂರ್ತಿ, ಎಂ. ರಾಘವೇಂದ್ರ, ಪ್ರಮೋದ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಗ್ವೆ ಇನ್ನಿತರರು ಹಾಜರಿದ್ದರು.
ಡಿಎಫ್‌ಓ ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು
ಇದಕ್ಕೂ ಮೊದಲು ಉಪ ಅರಣ್ಯ ಸಂರಕ್ಷಣಾಕಾರಿಗಳ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮೃತ ನಾಗರಾಜ್ ಬಾಳೆಗುಂಡಿ ಸಂಬಂಧಿ ಮಮತಾ ಅವರು ಅರಣ್ಯ ಇಲಾಖೆ ಕಾರ್ಯವೈಖರಿ ತೀವ್ರ ಖಂಡಿಸಿದರು. ಕೋಟ್ಯಂತರ ರು. ಬೆಲೆಬಾಳುವ ಶ್ರೀಗಂಧದ ಮರ ಗೋದಾಮಿನಲ್ಲಿರುವಾಗ ಯಾವುದೇ ಶಸ್ತಾ್ರಸ್ತ್ರವನ್ನು ಸಹ ನೀಡದೆ ಒಬ್ಬನೇ ಕಾವಲುಗಾರರನ್ನು ನೇಮಕ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಗುರುವಾರ ರಾತ್ರಿ ಕಾವಲಿಗೆ ಮೂವರನ್ನು ನೇಮಕ ಮಾಡಲಾಗಿತ್ತು. ಅದೇ ದಿನ ಇಬ್ಬರು ನೌಕರರು ರಜೆ ಹಾಕಿರುವುದಕ್ಕೆ ಕಾರಣ ಕಂಡು ಹಿಡಿಯಬೇಕು. ಶ್ರೀಗಂಧ ಕಳ್ಳತನದಲ್ಲಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಕೂಡಲೇ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾರ್‍ಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ, ರಾಜ್ಯ ಪರಿಷತ್ ಸದಸ್ಯ ಮ.ಸ. ನಂಜುಂಡಸ್ವಾಮಿ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ್ ನಾಯ್‌್ಕ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತೀ.ನ.ಶ್ರೀನಿವಾಸ್, ಗಣಪತಿ ಬಾಳೆಗುಂಡಿ, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಸಂತೋಷಕುಮಾರ್ ಎನ್. ಇನ್ನಿತರರು ಮಾತನಾಡಿ, ಮೃತ ನಾಗರಾಜ್ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವುದು ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.