ನಂದಿ ಬೆಟ್ಟ ರಸ್ತೆ ಕಾಮಗಾರಿಗೆ 2 ತಿಂಗಳ ಗಡುವು
- ಆಮೆ ವೇಗದಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ನಗರದ ನಂದಿ ರಸ್ತೆ
- ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಮಂಗಳವಾರ ದಿಢೀರ್ ಭೇಟಿ
- ರಸ್ತೆ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ
ಚಿಕ್ಕಬಳ್ಳಾಪುರ (ಸೆ.22): ಆಮೆ ವೇಗದಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ನಗರದ ನಂದಿ ಬೆಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಮಂಗಳವಾರ ದಿಢೀರ್ ಭೇಟಿ ನೀಡಿ ರಸ್ತೆ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ವಿಳಂಬದ ಬಗ್ಗೆ ನಗರಸಭೆ (Municipality) ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಎರಡು ತಿಂಗಳ ಒಳಗಾಗಿ ಎಷ್ಟುಸಾಧ್ಯವೋ ಅಷ್ಟುಬೇಗ ಅದ್ಯತೆ ಮೇಲೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಗೆ ನೀಡಿದ ಅವರು, 850 ಮೀ. ಉದ್ದದ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡುವ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿ 6 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂದಿ ರಸ್ತೆಗೆ 1.92 ಕೋಟಿ ರು. ನಿಗದಿ
ಕಾಮಗಾರಿ ನಡೆಯುವ ಜಾಗದುದ್ದಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು (DC) ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು. ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನಯಡಿ 3 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ಸ್ಟೇಡಿಯಂ ರಸ್ತೆಗೆ 70 ಲಕ್ಷ ಮತ್ತು ಚಿಕ್ಕಬಳ್ಳಾಪುರ ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 30 ಲಕ್ಷ ಹಾಗೂ ನಂದಿ ರಸ್ತೆ ಅಭಿವೃದ್ಧಿಗೆ 192 ಲಕ್ಷ ಅನುದಾನ ನಿಗದಿಗೊಳಿಸಲಾಗಿತ್ತು. ಮೂರು ಕಾಮಗಾರಿಗಳ ಪೈಕಿ ಸ್ಟೇಡಿಯಂ ರಸ್ತೆ ಮತ್ತು ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ನಂದಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನಂದಿಬೆಟ್ಟದಲ್ಲಿ 'ನಮ್ಮ ನಂದಿ' ಅಭಿಯಾನಕ್ಕೆ ಸದ್ಗುರು ಚಾಲನೆ
ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಹಣಕಾಸು ಆಯೋಗದಿಂದ 3 ಕೋಟಿ ಅನುದಾನವನ್ನು ವಿಶೇಷ ಅನುದಾನವನ್ನು ಮಂಜೂರು ಮಾಡಿಸಿಕೊಟ್ಟಿದ್ದು ಈ ಪೈಕಿ ಸ್ಟೇಡಿಯಂನ ಸಿ.ಸಿ ರಸ್ತೆ ಹಾಗೂ ನಂದಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 2.62 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ನಂದಿ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ವಿದ್ಯುತ್ (Electric) ಕಂಬಗಳನ್ನು ಸ್ಥಳಾಂತರಿಸುವುದು ಹಾಗೂ ರಸ್ತೆ ಇಕ್ಕೆಲಗಳ ಕೆಲವು ಪ್ರದೇಶಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವುದು ಕಾಮಗಾರಿ ವೇಗಕ್ಕೆ ತೊಡಕಾಗಿತ್ತು. ಈಗ ಎಲ್ಲಾ ಸಮಸ್ಯೆ ನೀಗಿದ್ದು 2 ತಿಂಗಳೊಳಗಾಗಿ ನಂದಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಸಿ.ಸಿ. ರಸ್ತೆ ಜನರ ಬಳಕೆಗೆ ಲಭ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ, ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಪೌರಾಯುಕ್ತ ಎನ್ ಮಹಂತೆಶ್ ಹಾಗೂ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.