ಯೋಗಿ, ಎಚ್ಡಿಕೆ ಗದ್ದಲ: ಜೆಡಿಎಸ್ ಕಾರ್ಯಕರ್ತರ ವಿರುದ್ಧ 2 ಎಫ್‌ಐಆರ್
ಜೆಡಿಎಸ್-ಬಿಜೆಪಿ ನಡುವಿನ ಬೀದಿಕಾಳಗಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎರಡು ಎಫ್‌ಐಆರ್ ದಾಖಲು
ಚನ್ನಪಟ್ಟಣ(ಅ.03): ಶನಿವಾರ ಗುದ್ದಲಿ ಪೂಜೆ ಕಾರ್ಯಕ್ರಮದ ವೇಳೆ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದ ಜೆಡಿಎಸ್-ಬಿಜೆಪಿ ನಡುವಿನ ಬೀದಿಕಾಳಗಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದೆ.
ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆ ಎಸೆದಿರುವ ಸಂಬಂಧ ಯೋಗೇಶ್ವರ್ ಕಾರು ಚಾಲಕ ವೆಂಕಟೇಶ್ ಎಂಬುವರು ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಸೇರಿದಂತೆ 14 ಮಂದಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದು, ಒಂದು ಪ್ರಕರಣ ದಾಖಲಾಗಿದ್ದರೆ, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ಬಿದ್ದಿರುವ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಗೂಂಡಾಗಳಿಂದ ಗಲಭೆ ಎಬ್ಬಿಸಿದ ಕುಮಾರಸ್ವಾಮಿ: ಯೋಗೇಶ್ವರ್
ನಿಖಿಲ್ ಭೇಟಿ:
ಈ ಮಧ್ಯೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಡಿವೈಎಸ್‌ಪಿ ಕಚೇರಿಗೆ ಭಾನುವಾರ ಭೇಟಿ ನೀಡಿ ಯೋಗೇಶ್ವರ್ ಮತ್ತು ಅವರ ಬೆಂಬಲಿಗರ ಮೇಲೆ ಎಫ್‌ಐಆರ್ ದಾಖಲಿಸಿ ಎಂದು ಆಗ್ರಹಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕ್ಷೇತ್ರದ ಶಾಸಕರಿಗೂ ಆಹ್ವಾನ ನೀಡದೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಔಚತ್ಯವೇನಿತ್ತು?. ಕಲಾವಿದರ ಕೋಟಾದಲ್ಲಿ ವಿಧಾನಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್‌ಗೆ ಇಷ್ಟುದೊಡ್ಡ ಮೊತ್ತದ ಅನುದಾನ ಸಿಕ್ಕಿದ್ದು ಹೇಗೆ?. ಕಲಾವಿದರ ಕೋಟಾದಲ್ಲಿ ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಅನುದಾನ ತಂದ ಇತಿಹಾಸ ಇದೆಯೇ? ಎಂದು ಪ್ರಶ್ನಿಸಿದರು.