ಗೂಂಡಾಗಳಿಂದ ಗಲಭೆ ಎಬ್ಬಿಸಿದ ಕುಮಾರಸ್ವಾಮಿ: ಯೋಗೇಶ್ವರ್
ಕಾರ್ಯಕರ್ತರ ಪಕ್ಷಾಂತರದಿಂದ ಹತಾಶಗೊಂಡ ಕುಮಾರಸ್ವಾಮಿ, ಎಚ್‌ಡಿಕೆ ಎಂದು ಶಿಷ್ಟಾಚಾರ ಪಾಲಿಸಿದ್ದಾರೆಯೇ?: ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣ(ಅ.02): ಜೆಡಿಎಸ್ ಕಾರ್ಯಕರ್ತರ ಪಕ್ಷಾಂತರದಿಂದ ಹತಾಶಗೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಗೂಂಡಾಗಳನ್ನು ಕರೆಸಿ ಅಡ್ಡಿಪಡಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವುದು ಕುಮಾರಸ್ವಾಮಿಗೆ ದಿಗ್ಭ್ರಮೆ ಮೂಡಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದ ಪಕ್ಷದಲ್ಲಿ ನಿಷ್ಠಾವಂತರಾಗಿ ಗುರುತಿಸಿಕೊಂಡವರು ಪಕ್ಷ ಬಿಡುತ್ತಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಪಕ್ಷಾಂತರದಿಂದ ಜನರ ಗಮನ ಬೇರೆಡೆ ಸೆಳೆಯಲು ಅವರು ಗಲಭೆಗೆ ಪ್ರಚೋದನೆ ನೀಡಿದ್ದಾರೆಂದು ದೂರಿದರು.
ಕೆಂಗೇರಿಯಿಂದ ಬಂದಿದ್ದ ಪುಂಡರು:
ಗುದ್ದಲಿ ಪೂಜೆಯಂದು ಗಲಾಟೆಗೆ ಕೆಂಗೇರಿ ಸೇರಿದಂತೆ ಬೇರೆಡೆಗಳಿಂದ ಜನರನ್ನು ಕರೆಸಲಾಗಿದೆ. ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಕೆಂಗೇರಿಯಿಂದ ಸುಮಾರು ಏಳೆಂಟು ಕಾರುಗಳಲ್ಲಿ ಗೂಂಡಾಗಳನ್ನು ಕರೆತಂದಿದ್ದು, ಅವರಿಂದ ಗಲಾಟೆ ಮಾಡಿಸಿದ್ದಾರೆ. ಹೊರಗಿನಿಂದ ಬಂದ ಗೂಂಡಾಗಳೆ ಕಲ್ಲು, ಮೊಟ್ಟೆಗಳ ತೂರಿದ್ದಾರೆ. ಜೆಡಿಎಸ್‌ನ ಕಾರ್ಯಕರ್ತರಾರಯರು ಈ ರೀತಿ ಕಲ್ಲು ಹೊಡೆಯುವವರಲ್ಲ. ಇಂದಿನ ಘಟನೆಗೆ ಹೊರಗಿನ ಗೂಂಡಾಗಳು ಮತ್ತು ಜೆಡಿಎಸ್‌ನಲ್ಲಿರುವ ನಾಲ್ಕೈದು ಮಂದಿಯೇ ಕಾರಣ. ಈ ಕುರಿತು ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದರು.
ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಸಿಪಿವೈ, ಚನ್ನಪಟ್ಟಣ ಈಗ ಬೂದಿ ಮುಚ್ಚಿದ ಕೆಂಡ!
ಎಚ್‌ಡಿಕೆ ಶಿಷ್ಟಾಚಾರ ಪಾಲಿಸಿದ್ದಾರೆಯೆ?:
ಇದೀಗ ಶಿಷ್ಟಾಚಾರದ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಯಾವತ್ತು ಶಿಷ್ಟಾಚಾರ ಪಾಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಶಾಸಕರಾಗಿರುವ ಅವರು, ಸಂಸದ, ವಿಧಾನಪರಿಷತ್ ಸದಸ್ಯರು ಸೇರಿದಂತೆ ಯಾವ ಜನಪ್ರತಿನಿಧಿಗಳನ್ನು ಕರೆಸಿ ಕಾರ್ಯಕ್ರಮ ಮಾಡಿದ್ದಾರೆ. ಒಂದೇ ಒಂದು ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಳ್ಳದ ಇವರು ಯಾವ ಆಧಾರದಲ್ಲಿ ಶಿಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.
ಇಂದಿನ ಕಾರ್ಯಕ್ರಮವನ್ನು ಶಿಷ್ಟಾಚಾರದ ಪ್ರಕಾರವೇ ಆಯೋಜಿಸಲಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಕುಮಾರಸ್ವಾಮಿಯವರ ಹೆಸರನ್ನು ಮುದ್ರಿಸಲಾಗಿತ್ತು. ಇವರಿಗೆ ಕ್ಷೇತ್ರದ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಕಾಮಗಾರಿ ಆಗಮಿಸಿ ಕೈಜೋಡಿಸಬೇಕಿತ್ತು. ಅದು ಬಿಟ್ಟು ಈ ರೀತಿ ಗಲಾಟೆ ಮಾಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿ.ಪಿ.ಯೋಗೇಶ್ವರ್ v/s ಎಚ್ ಡಿ ಕುಮಾರಸ್ವಾಮಿ ನಡುವೆ ಜಟಾಪಟಿ
ಅನುದಾನ ತಡೆಯಲು ಪತ್ರ:
ತಾಲೂಕಿನ ಜನತೆ ಸಮಸ್ಯೆ ಹೇಳಿಕೊಂಡು ಮುಖ್ಯಮಂತ್ರಿಗಳಿಂದ 50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದನ್ನ ಸಹಿಸಲಾಗದೆ ಕುಮಾರಸ್ವಾಮಿ ತಮ್ಮದೇ ಪಕ್ಷದ ಎಂಎಲ್‌ಸಿಗಳಿಂದ ಅರ್ಜಿ ಸಮಿತಿಗೆ ದೂರು ಸಲ್ಲಿಸಿ, ಚನ್ನಪಟ್ಟಣಕ್ಕೆ ನೀಡಿದಂತೆ ತಮ್ಮ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಅಡ್ಡಗಾಲು ಹಾಕಿಸಿದರು. ಅನುದಾನ ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದರು. ಈ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಕುಮಾರಸ್ವಾಮಿ ನನ್ನ ಕಾರಿಗೆ ಕಲ್ಲು ಹೊಡೆಸಿದ್ದಾರೆ. ನಾನು ಅವರಂತೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟುಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ನಗರಾಧ್ಯಕ್ಷ ಶಿವಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲುವೇಗೌಡ ಉಪಸ್ಥಿತರಿದ್ದರು.