Asianet Suvarna News Asianet Suvarna News

Vijayapura : 8 ವಿಧಾನಸಭಾ ಕ್ಷೇತ್ರಗಳಲ್ಲಿ 18,38,452 ಮತದಾರರು

:  ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2023ರ ಜನವರಿ 5ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,39,813 ಗಂಡು, 8,98,405 ಹೆಣ್ಣು ಹಾಗೂ 234 ಇತರೆ ಸೇರಿದಂತೆ ಒಟ್ಟು 18,38,452 ಮತದಾರರಿದ್ದಾರೆ.

18 38 452 voters in 8 assembly constituencies snr
Author
First Published Jan 6, 2023, 6:20 AM IST

  ವಿಜಯಪುರ (ಜ. 06):  ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2023ರ ಜನವರಿ 5ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,39,813 ಗಂಡು, 8,98,405 ಹೆಣ್ಣು ಹಾಗೂ 234 ಇತರೆ ಸೇರಿದಂತೆ ಒಟ್ಟು 18,38,452 ಮತದಾರರಿದ್ದಾರೆ. ಪ್ರಕಟಿತ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮತದಾರರು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂತಿಮ ಮತದಾರರ ಪಟ್ಟಿಕುರಿತು ಮಾಹಿತಿ ನೀಡಿ, ಕರಡು ಮತದಾರರ ಪಟ್ಟಿಯನ್ನು 09.11.2022 ರಂದು ಪ್ರಕಟಿಸಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 08.12.2022ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು, ತಿದ್ದುಪಡಿ, ವರ್ಗಾವಣೆಗೆ ಸಂಬಂಧಿಸಿದ ನಮೂನೆ-6, ನಮೂನೆ-7, ನಮೂನೆ-8 ಅರ್ಜಿಗಳನ್ನು ಸ್ವೀಕರಿಸಿ 26.12.2022ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಎಲ್ಲ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಗೊಳಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ವೇಳೆ 40,058 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಮುಖ್ಯಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣದಲ್ಲಿದ್ದು, ಸಾರ್ವಜನಿಕರು ಕೂಡ ಪರಿಶೀಲಿಸಿಕೊಳ್ಳಬಹುದು ಎಂದರು.

ಕ್ಷೇತ್ರವಾರು ಮತದಾರರ ವಿವರ:

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 1,06,875 ಗಂಡು, 1,03,451 ಹೆಣ್ಣು, 22 ಇತರೆ ಒಟ್ಟು 2,10,348 ಮತದಾರರಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದಲ್ಲಿ 1,09,749 ಗಂಡು, 1,03,393 ಹೆಣ್ಣು, 31 ಇತರೆ ಸೇರಿದಂತೆ 2,13,173 ಮತದಾರರಿದ್ದಾರೆ. ಬಸವನಬಾಗೇವಾಡಿ ಕ್ಷೇತ್ರದಲ್ಲಿ 1,04,484 ಗಂಡು, 1,00,186 ಹೆಣ್ಣು, 11 ಇತರೆ ಸೇರಿ ಒಟ್ಟು 2,04,681 ಮತದಾರರಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ 1,08,463 ಗಂಡು, 1,03,961 ಹೆಣ್ಣು ಹಾಗೂ 4 ಇತರೆ ಸೇರಿ ಒಟ್ಟು 2,12,428 ಮತದಾರರಿದ್ದಾರೆ. ಬಿಜಾಪುರ ನಗರ ಮತಕ್ಷೇತ್ರದಲ್ಲಿ 1,31,459 ಗಂಡು, 1,33,161 ಹೆಣ್ಣು, 94 ಇತರೆ ಸೇರಿ ಒಟ್ಟು 2,64,714 ಮತದಾರರಿದ್ದಾರೆ.

ನಾಗಠಾಣ ಮತಕ್ಷೇತ್ರದಲ್ಲಿ 1,35,836 ಗಂಡು, 1,28,082 ಹೆಣ್ಣು ಹಾಗೂ 27 ಇತರೆ ಮತದಾರರು ಸೇರಿದಂತೆ 2,63,945 ಮತದಾರರಿದ್ದಾರೆ. ಇಂಡಿ ಮತಕ್ಷೇತ್ರದಲ್ಲಿ 1,22,997 ಗಂಡು, 1,14,382 ಹೆಣ್ಣು, 18 ಇತರೆ ಸೇರಿದಂತೆ 2,37,397 ಮತದಾರರಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ 1,19,950 ಗಂಡು, 1,11,789 ಹೆಣ್ಣು, 27 ಇತರೆ ಸೇರಿದಂತೆ ಒಟ್ಟು 2,31,766 ಮತದಾರರಿದ್ದು, ಒಟ್ಟು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ 9,39,813 ಗಂಡು, 8,98,405 ಹೆಣ್ಣು ಹಾಗೂ 234 ಇತರೆ ಮತದಾರರು ಸೇರಿದಂತೆ ಒಟ್ಟು 18,38,452 ಮತದಾರರಿದ್ದಾರೆ ಎಂದರು.

2072 ಮತಗಟ್ಟೆಗಳು:

ಜಿಲ್ಲೆಯಲ್ಲಿ ಪ್ರಸ್ತುತ 2072 ಮತಗಟ್ಟೆಗಳು ಅಸ್ತಿತ್ವದಲ್ಲಿದ್ದು, ಕ್ಷೇತ್ರವಾರು ಮುದ್ದೇಬಿಹಾಳ- 241, ದೇವರಹಿಪ್ಪರಗಿ- 252, ಬಸವನಬಾಗೇವಾಡಿಯಲ್ಲಿ ಈ ಮೊದಲು 233 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 232 ಮತಗಟ್ಟೆಗಳಿವೆ. ಬಬಲೇಶ್ವರದಲ್ಲಿ 253 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 243 ಮತಗಟ್ಟೆಗಳಿವೆ. ಬಿಜಾಪುರ ನಗರ ಮತಕ್ಷೆತ್ರದಲ್ಲಿ ಈ ಮೊದಲು 279 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 269 ಮತಗಟ್ಟೆಗಳು ಅಸ್ವಿತ್ವದಲ್ಲಿವೆ. ನಾಗಠಾಣದಲ್ಲಿ ಈ ಮೊದಲು 305 ಮತಗಟ್ಟೆಗಳಿದ್ದವು, ಪ್ರಸ್ತುತ ಅಂತಿಮವಾಗಿ 296 ಮತಗಟ್ಟೆಗಳಿವೆ. ಇಂಡಿ ಮತಕ್ಷೇತ್ರದಲ್ಲಿ ಈ ಮೊದಲು 274 ಮತಗಟ್ಟೆಗಳಿದ್ದು, ಅಂತಿಮವಾಗಿ 268 ಮತಗಟ್ಟೆಗಳಿವೆ. ಸಿಂದಗಿ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ 2072 ಮತಗಟ್ಟೆಗಳು ಅಂತಿಮವಾಗಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು.

ನಿರಂತರ ಮತದಾರ ಪಟ್ಟಿಪರಿಷ್ಕರಣೆ:

ಅಂತಿಮ ಮತದಾರರ ಪಟ್ಟಿಪ್ರಕಟಿಸಿದ ನಂತರವೂ ಪರಿಷ್ಕರಣೆ ಕಾರ್ಯ ಮುಂದುವರಿಯಲಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನಿರ್ದೇಶನ ಬಂದ ಕೂಡಲೇ ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ಇತರೆ ಸೇವೆಗಳಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಈ ಮೊದಲು ವರ್ಷಕ್ಕೆ ಒಂದು ಬಾರಿ ಮಾತ್ರ ಅವಕಾಶವಿತ್ತು. ಆದರೆ ಪ್ರಸ್ತುತ ಚುನಾವಣಾ ಆಯೋಗ ಜನವರಿ 01, ಏಪ್ರಿಲ್‌ 01, ಜುಲೈ 01 ಹಾಗೂ ಅಕ್ಟೋಬರ್‌ 01 ಸೇರಿದಂತೆ 4 ಬಾರಿ 18 ವರ್ಷ ಪೂರೈಸಿದ ಅರ್ಹ ಮತದಾರರು ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅವಕಾಶ ನೀಡಿದೆ. ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಇತ್ಯಾದಿಗಳಿಗಾಗಿ ಆನ್‌ಲೈನ್‌ ಪ್ಲಾಟ್‌ಫಾರ್ಮಗಳಾದ ವಿಎಚ್‌ಎ, ಎನ್‌ವಿಎಸ್‌ಪಿ ಹಾಗೂ ಮತಗಟ್ಟೆಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಗರುಡ ತಂತ್ರಾಂಶ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಚುನಾವಣಾ ತಹಸೀಲ್ದಾರ ಶಾಂತಲಾ ಚಂದನ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಚನ್ನಬಸಪ್ಪ ನಂದರಗಿ, ಎಚ್‌.ಎಸ್‌.ದಳವಾಯಿ, ಎಂ.ಕೆ.ಬಾಗಾಯತ್‌, ನಿತೇಶ ತೊರವಿ, ಅನಿರುದ್ದ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Follow Us:
Download App:
  • android
  • ios