ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ 

ಬೆಂಗಳೂರು(ಸೆ.24): ದ್ವಿಚಕ್ರ ವಾಹನಕ್ಕೆ ಟಿಪ್ಪರ್‌ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆ ಮೇಲೆ ಟಿಪ್ಪರ್‌ ಚಕ್ರ ಉರುಳಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಸುಚಿತ್ರಾ(16) ಮೃತ ಬಾಲಕಿ. ಈಕೆಯ ತಂದೆ ಉಮೇಶ್‌ ಕೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ರಾತ್ರಿ 11.45ರ ಸುಮಾರಿಗೆ ಕೊಟ್ಟಿಗೆಪಾಳ್ಯದ ಬೆಗ್ಗರ್ಸ್‌ ಕಾಲೋನಿ ಬಳಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸುಚಿತ್ರಾ, ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ತಂದೆ ಉಮೇಶ್‌ ಗುರುವಾರ ರಾತ್ರಿ ಸುಚಿತ್ರಾಳನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿ ಮನೆಗೆ ವಾಪಸಾಗುತ್ತಿದ್ದರು. ಕೊಟ್ಟಿಗೆಪಾಳ್ಯದ ಬೆಗ್ಗರ್ಸ್‌ ಕಾಲೋನಿ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂದಿನಿಂದ ಬಹಳ ವೇಗವಾಗಿ ಬಂದ ಟಿಪ್ಪರ್‌ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಉಮೇಶ್‌ ರಸ್ತೆಯ ಬಲಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತ್ತಿದ್ದ ಸುಚಿತ್ರಾ ಎಡಕ್ಕೆ ಬಿದ್ದಿದ್ದಾಳೆ. ಈ ವೇಳೆ ಟಿಪ್ಪರ್‌ನ ಮುಂಭಾಗದ ಎಡ ಚಕ್ರ ಸುಚಿತ್ರಾಳ ತಲೆ ಮೇಲೆ ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆದುಳು ನಿಷ್ಕ್ರೀಯ: ಕೊಪ್ಪಳದ ವ್ಯಕ್ತಿಯ ಅಂಗಾಂಗ ದಾನ, ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ..!

ಟಿಪ್ಪರ್‌ ಚಾಲಕನ ನಿರ್ಲಕ್ಷ್ಯದ ಚಾಲನೆ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಸಂಬಂಧ ಟಿಪ್ಪರ್‌ ಜಪ್ತಿ ಮಾಡಿದ್ದು, ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.