ಮದ್ದೂರು [ಡಿ.30]: ಜಮೀನು ಮಂಜೂರಾತಿ ಸಂಬಂಧ ಸಾಗುವಳಿ ಚೀಟಿ ಮತ್ತು ವಿಚಾರಣಾವಹಿ ನಕಲಿ ಪ್ರತಿ ಒದಗಿಸುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿದ್ದ ತಹಸೀಲ್ದಾರ್ ವಿ.ಗೀತಾ ಅವರಿಗೆ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿ ಆದೇಶ ನೀಡಿದೆ.

ಮದ್ದೂರು ತಾಲೂಕು ಕಚೇರಿಯಲ್ಲಿ ಈ ಹಿಂದೆ ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಹೊಸಕೋಟೆ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಗೀತಾ ಅವರಿಗೆ ಆಯೋಗ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಗೀತಾರವರ ಪ್ರತಿ ತಿಂಗಳ ವೇತನದಲ್ಲಿ 5 ಸಾವಿರದಂತೆ ಮೂರು ತಿಂಗಳು ಕಡಿತ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಮಾಹಿತಿ ಹಕ್ಕು ಆಯೋಗ ಸೂಚನೆ ನೀಡಿದೆ.

ತಾಲೂಕಿನ ಮಾರಸಿಂಗನಹಳ್ಳಿಯ ಕೆಂಚೇಗೌಡರ ಪುತ್ರ ದೇವೇಗೌಡರ ಸರ್ವೆ ನಂ. 125/ಸಿಯಲ್ಲಿ 1.11 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ ಸಂಬಂಧ ಗ್ರಾಮದ ಶಿವರಾಮು ಎಂಬುವರು ಸಾಗುವಳಿ ಚೀಟಿ ಹಾಗೂ ವಿಚಾರಣಾವಹಿ ನಕಲು ಪ್ರತಿ ಒದಗಿಸುವಂತೆ ಮಾಹಿತಿ ಹಕ್ಕು ಕಾಯಿದೆಯಡಿ 2017ರ ಜೂ. 27ರಂದು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಸಾರ್ವಜನಿಕ ಮಾಹಿತಿಯ ಅಧಿಕಾರಿ ಯಾದ ತಹಸೀಲ್ದಾರ್ ವಿ. ಗೀತಾ, ಶಿವರಾಮು ಅವರಿಗೆ ಯಾವುದೇ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಬಂಧ ಅರ್ಜಿದಾರ ಶಿವರಾಮು ತಹಸೀಲ್ದಾರ್ ವಿ. ಗೀತಾ ವಿರುದ್ಧ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ಕುರಿತು ಆಯೋಗದ ಆಯುಕ್ತ ಎಸ್.ಎಸ್. ಪಾಟೀಲ್ ವಿಚಾರಣೆ ನಡೆಸಿದ್ದರು. ಮುಂದಿನ 2019 ಜನ ವರಿ 1, ಮೇ. 3,ಜುಲೈ 16, ಆಗಸ್ಟ್ 19ರ ದಿನಾಂಕದೊಳಗೆಮಾಹಿತಿ ನೀಡುವಂತೆ ಮೂರು ಬಾರಿ ಗಡುವು ನೀಡಿ ಪ್ರತಿವಾದಿಯಾದ ತಹಸೀಲ್ದಾರ್ ಗೀತಾ ಅವರಿಗೆ ಸೂಚನೆ ನೀಡಿದ್ದರು. ಆಯೋಗದ ಎದುರು ಖುದ್ದಾಗಿ ಹಾಜರಾಗದೆ, ಸಮಜಾಯಿಷಿಯೂ ನೀಡದ ಕಾರಣ ಆಯೋಗದ ಎದುರು ಗೈರು ಹಾಜರಾಗಿ ಆದೇಶವನ್ನು ಧಿಕ್ಕರಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಆಯುಕ್ತ ಎಸ್.ಎಸ್. ಪಾಟೀಲ್ ತಹಸೀಲ್ದಾರ್ ಗೀತಾ ಅವರಿಗೆ 15 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.