ಕಲಬುರಗಿ: ಭಾರೀ ಮಳೆ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು

ಬೆಣ್ಣೆತೋರಾ ಯೋಜನೆ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ| ಜಲಾಶಯಕ್ಕೆ ಹೆಚ್ಚಿದ ಒಳಹರಿವು| ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ| ಡ್ಯಾಂನಲ್ಲಿ ಗರಿಷ್ಠ ಮಟ್ಟದವರೆಗೆ ನೀರು ಶೇಖರಣೆ ಮಾಡಿ ಹೆಚ್ಚಿನ ಒಳಹರಿವಿನ ನೀರನ್ನು ಯಾವುದೇ ಕ್ಷಣದಲ್ಲಿ ಅಣೆಕಟ್ಟಿನ ಕೋಡಿಯ ಮುಖಾಂತರ ನದಿಗೆ ಹರಿಬಿಡಲಾಗುವುದು ಎಂದು ತಿಳಿಸಿದ ಕೆಎನ್‌ಎನ್‌ಎಲ್‌ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು|

15000 Cusec Water Released to Bheema River From Sonna Barrage

ಕಲಬುರಗಿ(ಜು.25): ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಹರಿವು ಹೆಚ್ಚಿದ್ದು, ಅದರಂತೆ ಶುಕ್ರವಾರ ಬ್ಯಾರೇಜಿನಿಂದ 15000 ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ.

ಬ್ಯಾರೇಜಿಗೆ ಒಳಹರಿವಿನ ನೀರಿನ ಪ್ರಮಾಣ 15000 ಕ್ಯುಸೆಕ್‌ ಇದ್ದು, ಅಷ್ಟೇ ಪ್ರಮಾಣದ ನೀರು ನದಿಗೆ ಹರಿಬಿಡಲಾಗುತ್ತಿದೆ. ಸೊನ್ನ ಬ್ಯಾರೇಜ್‌ ಸಾಮರ್ಥ್ಯ 3.16 ಟಿ.ಎಂ.ಸಿ. ಇದ್ದು, ಶುಕ್ರವಾರ ಸಂಜೆ 5.20ಕ್ಕೆ ಹೊತ್ತಿಗೆ 2.95 ಟಿಎಂಸಿ ನೀರು ಸಂಗ್ರಹಣಗೊಂಡಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು, ಆಗ ನೀರಿನ ಒಳಹರಿವು ಇನ್ನು ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು 15000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ.

ಬೆಣ್ಣೆತೋರಾ ಜಲಾಶಯದಿಂದ ನೀರು ಬಿಡುಗಡೆ:

ಕಲಬುರಗಿ ತಾಲೂಕಿನ ಬೆಣ್ಣೆತೋರಾ ಯೋಜನೆ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಬರುತ್ತಿದೆ. ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಜಲಾಶಯದಲ್ಲಿ ಗರಿಷ್ಠ ಮಟ್ಟದವರೆಗೆ ನೀರು ಶೇಖರಣೆ ಮಾಡಿ ಹೆಚ್ಚಿನ ಒಳಹರಿವಿನ ನೀರನ್ನು ಯಾವುದೇ ಕ್ಷಣದಲ್ಲಿ ಅಣೆಕಟ್ಟಿನ ಕೋಡಿಯ ಮುಖಾಂತರ ನದಿಗೆ ಹರಿಬಿಡಲಾಗುತ್ತದೆ ಎಂದು ಕೆಎನ್‌ಎನ್‌ಎಲ್‌ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಚಿಂಚೋಳಿಯಲ್ಲಿ ಭಾರೀ ಮಳೆ: ಹೊಲಗಳಿಗೆ ನುಗ್ಗಿದ ಮಳೆ ನೀರು, ಅಪಾರ ಬೆಳೆ ಹಾನಿ

ಬೆಣ್ಣೆತೋರಾ ಜಲಾಶಯದ ಹಿನ್ನಿರಿನ ಗ್ರಾಮಗಳಾದ ಅಂಕಲಗಾ, ಕುರಿಕೋಟಾ, ನಾಗೂರ್‌, ಸಿರಗಾಪೂರ, ಯಂಕಂಚಿ, ಹರಕಂಚಿ, ತೊಂಡಕಲ್‌, ಕನ್ನಡಗಿ, ಕಡಬೂರ್‌ ಗ್ರಾಮಗಳಿಗೆ ಹಿನ್ನಿರು ಆವರಿಸೋದರಿಂದ ಜನರು ಎಚ್ಚರಿಕೆ ವಹಿಸಬೇಕು. ನಾಗೂರ್‌ ಮತ್ತು ಕುರಿಕೋಟಾ ಗ್ರಾಮಗಳ ಗ್ರಾಮಸ್ಥರು ಹಿನ್ನಿರಿನಲ್ಲಿ ಇಳಿಯದೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ತಿಳಿಸಿದ್ದಾರೆ.

ನದಿ ಪಾತ್ರದಲ್ಲಿ ಎಚ್ಚರಕೆ ವಹಿಸಿ

ರಾಜ್ಯದ ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗುತ್ತಿರುವ ಪರಿಣಾಮ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದಲ್ಲಿರುವ ಭೀಮಾ ಏತ ನೀರಾವರಿ ಬ್ಯಾರೇಜ್‌ನಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ. ಸದ್ಯ 15 ಸಾವಿರ ಕ್ಯುಸೆಕ್‌ ಒಳ ಹರಿವು ಮತ್ತು ಅಷ್ಟೇ ಪ್ರಮಾಣದ ಹೊರ ಹರಿವು ಇದೆ ಎಂದು ಕೆಎನ್‌ಎನ್‌ಎಲ್‌ ಇಇ ಅಶೋಕ ಕಲಾಲ್‌ ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.

ಬ್ಯಾರೇಜ್‌ನ ಒಟ್ಟು ಸಂಗ್ರಹ ಸಾಮರ್ಥ್ಯ 3.16 ಟಿಎಂಸಿ ಇದ್ದು ಸದ್ಯ 2.81 ಟಿಎಂಸಿ ಸಂಗ್ರಹವಿಟ್ಟುಕೊಳ್ಳಲಾಗಿದ್ದು ಹೆಚ್ಚುವರಿ ನೀರನ್ನು ಬ್ಯಾರೇಜ್‌ನ 6 ಕ್ರಸ್ಟ್‌ ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ಹೀಗಾಗಿ ಬ್ಯಾರೇಜ್‌ನ ಕೆಳಭಾಗದ ನದಿ ಪಾತ್ರದ ಹಳ್ಳಿಗಳ ರೈತರು, ಕುರಿಗಾಹಿಗಳು, ಮೀನುಗಾರರು ನದಿ ಪಾತ್ರಕ್ಕೆ ಹೋಗುವುದು ಬೇಡ, ಯಾವುದೇ ಸಂದರ್ಭದಲ್ಲಿ ನದಿಯಲ್ಲಿ ಪ್ರವಾಹ ಮಟ್ಟ ಮೀರಿ ನೀರು ಬರುವ ಸಾಧ್ಯತೆ ಇದೆ. ಆದರೆ ಇದುವರೆಗೂ ಮಹಾರಾಷ್ಟ್ರದ ಬ್ಯಾರೇಜ್‌ಗಳಿಂದ ನೀರು ಹರಿದು ಬಂದಿಲ್ಲ. ಒಂದು ವೇಳೆ ಮಹಾರಾಷ್ಟ್ರದಿಂದಲೂ ನೀರು ಹರಿದು ಬಂದರೆ ಭೀಮಾ ನದಿ ಅಪಾಯ ಮಟ್ಟಮೀರಿ ಹರಿಯಲಿದೆ. ನದಿ ದಂಡೆಗೆ ಹೋಗಬಾರದೆಂದು ಎಚ್ಚರಿಕೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios