ಚಿಂಚೋಳಿಯಲ್ಲಿ ಭಾರೀ ಮಳೆ: ಹೊಲಗಳಿಗೆ ನುಗ್ಗಿದ ಮಳೆ ನೀರು, ಅಪಾರ ಬೆಳೆ ಹಾನಿ
ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆ| ಮುಲ್ಲಾಮಾರಿ ಜಲಾಶಯ ಭರ್ತಿಗೊಂಡು, ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದು ನಿಂತ ತೊಗರಿ, ಹೆಸರು, ಉದ್ದು, ಕಬ್ಬು, ಬಾಳೆ, ತರಕಾರಿ ಬೆಳೆಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಾಯಿತು|
ಚಿಂಚೋಳಿ(ಜು.20): ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಹರಿದು ಬಿಟ್ಟಹೆಚ್ಚುವರಿ ನೀರಿನ ಪ್ರವಾಹದಿಂದ ನದಿ ಪಾತ್ರದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆದು ನಿಂತ ಮುಂಗಾರು ಬೆಳೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.
ಕಳೆದೆರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಮುಲ್ಲಾಮಾರಿ ಜಲಾಶಯ ಭರ್ತಿಗೊಂಡು, ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದು ನಿಂತ ತೊಗರಿ, ಹೆಸರು, ಉದ್ದು, ಕಬ್ಬು, ಬಾಳೆ, ತರಕಾರಿ ಬೆಳೆಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಾಯಿತು.
ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪೋಲಕಪಳ್ಳಿ, ಗರಗಪಳ್ಳಿ, ಬುರುಗಪಳ್ಳಿ, ಕರಚಖೇಡ, ಜಟ್ಟೂರ, ಹಲಕೋಡ ಗ್ರಾಮಗಳ ರೈತರು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದುಕೊಂಡು ಬಿತ್ತನೆ ಮಾಡಿದ ಮುಂಗಾರು ಹೆಸರು ಹೂವು ಬಿಡುವ ಹಂತದಲ್ಲಿದ್ದವು, ಅಲ್ಲದೇ ತೊಗರಿ ಮತ್ತು ಉದ್ದು ಸಮೃದ್ದಿಯಾಗಿ ಬೆಳೆಯುತ್ತಿದ್ದ ಬೆಳೆಗಳು ನದಿಯ ನೀರು ಪಾಲಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕ ಸಿಲುಕಿದ್ದಾರೆ.
ಚಿಂಚೋಳಿ ಪಟ್ಟಣದ ಹೊರವಲಯದಲ್ಲಿನ ಅನೇಕ ಹೊಲಗಳಲ್ಲಿ ನೀರು ನಿಂತು ಕೊಂಡಿದೆ. ಅಲ್ಲದೇ ಕಬ್ಬು, ತರಕಾರಿ ಅರಶಿಣ ಬೆಳೆಗಳು ಹಾಳಾಗಿವೆ. ಟೊಮೊಟೋ, ಬದನೇಕಾಯಿ, ಬೆಂಡೆಕಾಯಿ, ಉಳ್ಳಾಗಡ್ಡಿ, ಹಿರೇಕಾಯಿ, ಮೆಕ್ಕೆಜೋಳ ಬೆಳೆಗಳು ಹಾಳಾಗಿವೆ.