ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೊರೋನಾ: ಶುರುವಾಯ್ತು ಆತಂಕ
ಕಲಬುರಗಿಯ ಸರ್ಕಾರಿ ಪ್ರೌಢ ಶಾಲೆವೊಂದರಲ್ಲಿ 15 ವಿದ್ಯಾರ್ಥಿಗಳಿಗೆ ಕೊರೋನಾ ಮಹಾಮಾರಿ ಹೊಕ್ಕರಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.
ಕಲಬುರಗಿ, (ಮಾ.05) : ನಗರದ ಸರ್ಕಾರಿ ಪ್ರೌಢ ಶಾಲೆವೊಂದರಲ್ಲಿ 9 ಮತ್ತು 10ನೇ ತರಗತಿಯ ಒಟ್ಟು 15 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್ ಡೌನ್ ಮಾಡಿ, ಒಂದು ವಾರ ರಜೆ ಘೋಷಿಸಲಾಗಿದೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ, ಮಾರ್ಚ್ 1 ರಂದು 63 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆ ಮಾಡಿ ಮಾದರಿ ತೆಗೆದುಕೊಂಡಿದ್ದರು. 63 ಪೈಕಿ 22 ವಿದ್ಯಾರ್ಥಿಗಳ ವರದಿ ಬಂದಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.
ಕರ್ನಾಟಕದಲ್ಲಿ ಮತ್ತೆ ಶುರುವಾಯ್ತು ಕೊರೋನಾ ಅಟ್ಟಹಾಸ
ಪಾಸಿಟಿವ್ ಬಂದ ಮಕ್ಕಳ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಫೆ.26ಕ್ಕೆ ಬೇಡಸೂರ ತಾಂಡ ಮತ್ತು ಫೆ.18ಕ್ಕೆ ನಾಮುತಾಂಡದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮುಂಬೈಯಿಂದ ಜನರು ಪಾಲ್ಗೊಂಡಿದ್ದರು. ಅದರಲ್ಲಿ ಈ ಶಾಲೆಯ ಇಬ್ಬರು ಮಕ್ಕಳು ಭಾಗವಹಿಸಿದ್ದರು. ಇದರಿಂದ ಕೋವಿಡ್ ಹರಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.
ಕೋವಿಡ್ ಪಾಸಿಟಿವ್ ಬಂದ 15 ವಿದ್ಯಾರ್ಥಿಗಳ ಟ್ರಾವೆಲ್ ಹಿಸ್ಟರಿ ಸಂಗ್ರಹಸಿ ಮನೆಯ ಸದಸ್ಯರಿಗೆ ಹಾಗೂ ಸಂಪರ್ಕಿತರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಕಾಳಗಿ ಪಟ್ಟಣದಲ್ಲಿ ಈ ವಾರದ ಸೋಮವಾರದ ಸಂತೆ ಬಂದ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕೋವಿಡ್ ಕಂಡು ಬಂದ ಈ ವಿದ್ಯಾರ್ಥಿಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಇನ್ನೂ 41 ವಿದ್ಯಾರ್ಥಿಗಳ ವರದಿಗಳು ಬಾಕಿ ಇವೆ. ಪಾಸಿಟಿವ್ ಬಂದಿರುವ 15 ವಿದ್ಯಾರ್ಥಿಗಳನ್ನು ಹೋಂ ಐಸೋಲೋಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಸರ್ಕಾರಿ ಪ್ರೌಢ ಶಾಲೆಯನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿದೆ. ಅಲ್ಲದೇ, ಒಂದು ವಾರದವರೆಗೆ ಸೀಲ್ ಡೌನ್ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ಸ್ಪಷ್ಟ ಪಡಿಸಿದರು.
ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಧೃಡ ಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗೆ ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ಪಾಟೀಲ್ ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಶಾಲೆಯ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬಿಸಿ ಊಟದ ಸಿಬ್ಬಂದಿಗಳು ಸೇರಿದಂತೆ ಒಟ್ಟು 175 ಜನರ ಮಾದರಿ ಸಂಗ್ರಹಿಸಿದ್ದರು.