ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಏರುಮುಖವಾಗಿದ್ದು, ಪ್ರತಿ ದಿನ ಸರಾಸರಿ 21 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಕಳಕಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಕಳೆದ ವರ್ಷ 11 ತಿಂಗಳಲ್ಲಿ 68 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಪೊಲೀಸರು.
ಬೆಂಗಳೂರು : ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಏರುಮುಖವಾಗಿದ್ದು, ಪ್ರತಿ ದಿನ ಸರಾಸರಿ 21 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಕಳಕಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಒಂದಡೆ ಸಂಚಾರ ನಿಯಮ ಬಗ್ಗೆ ನಾನಾ ರೀತಿಯಲ್ಲಿ ಪೊಲೀಸರು ಜಾಗೃತಿ ಅಭಿಯಾನ ನಡೆಸುತ್ತಿದ್ದರೆ, ಮತ್ತೊಂದೆಡೆ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದು ವಿಪರ್ಯಾಸವಾಗಿದೆ. ಕಳೆದ ವರ್ಷ 11 ತಿಂಗಳಲ್ಲಿ 68 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಪೊಲೀಸರು.
1 ನಿಮಿಷಕ್ಕೆ 14 ಪ್ರಕರಣ:
ಚಾಲನೆ ವೇಳೆ ಮೊಬೈಲ್ ಬಳಕೆ, ನೋ ಪಾರ್ಕಿಂಗ್, ಹೆಲ್ಮೆಟ್ ಇಲ್ಲದೆ ಸವಾರಿ, ಏಕಮುಖ ಸಂಚಾರದಲ್ಲಿ ವಾಹನ ಚಾಲನೆ, ಮದ್ಯ ಸೇವಿಸಿ ಚಾಲನೆ, ಅಧಿಕ ಪ್ರಖರದ ದೀಪಗಳು (ಎಲ್‌ಇಡಿ) ಬಳಕೆ ಹಾಗೂ ಸಿಗ್ನಲ್ ಜಂಪ್ ಹೀಗೆ ಸಂಚಾರ ಉಲ್ಲಂಘನೆ ಸಂಬಂಧ ಪೊಲೀಸರು ದಂಡ ಪ್ರಯೋಗಿಸಿದ್ದಾರೆ.
ಚಾಲುಕ್ಯ, ಶಿವಾನಂದ ಸರ್ಕಲ್, ಸಿಲ್ಕ್ ಬೋರ್ಡ್, ಅನಿಲ್ ಕುಂಬ್ಳೆ ಸರ್ಕಲ್, ಹಡ್ಸನ್ ವೃತ್ತ, ಎಂ.ಜಿ. ರಸ್ತೆ ಹಾಗೂ ಬೆಳ್ಳಂದೂರು ಸೇರಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸರು ನಿಯಮ ಮೀರುವವರ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಿಗಿಯಾದ ನಿಲುವುಗಳಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಪ್ರಯೋಗವು ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ ವರೆಗೆ 69,88,400 ಪ್ರಕರಣಗಳು ದಾಖಲಾಗಿದ್ದು, ಸರಾಸರಿ 11 ತಿಂಗಳಲ್ಲಿ ಪ್ರತಿ ದಿನ 21 ಸಾವಿರ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಪ್ರತಿ ನಿಮಿಷಕ್ಕೆ 14 ಮಂದಿ ಸಂಚಾರ ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ. ಅಲ್ಲದೆ ಎಐ ಕ್ಯಾಮೆರಾ ಬಳಸಿಯೇ ಶೇ.80 ರಷ್ಟು ಪ್ರಕರಣಗಳು ದಾಖಲಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಹೆಲ್ಮೆಟ್ ಇಲ್ಲದೆ ಚಾಲನೆ: 20,33,259 ಪ್ರಕರಣ!
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಮಹತ್ವದ ಕುರಿತು ಪೊಲೀಸರು ಅರಿವು ಮೂಡಿಸಿದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕಳೆದ ವರ್ಷ ಹೆಲ್ಮೆಟ್ ಧರಿಸದ ತಪ್ಪಿಗೆ ಸವಾರರ ವಿರುದ್ಧ 20,33,259 ಪ್ರಕರಣಗಳು ಹಾಗೂ ಹಿಂಬದಿ ಸವಾರರ ಮೇಲೆ 11,27,924 ಪ್ರಕರಣಗಳು ದಾಖಲಾಗಿವೆ. ಇನ್ನು ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ಸಂಬಂಧ 11,16,278 ನೋ ಪಾರ್ಕಿಂಗ್ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.


