ಸಂಚಾರಿ ನಿಯಮ ಉಲ್ಲಂಘಿಸಿದ 116 ವಾಹನಗಳ ಚಲನ್ ಡಿಲೀಟ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!
ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬರು ಪೊಲೀಸ್ ಇಲಾಖೆಯ ಸಂಚಾರ ನಿರ್ದೇಶನಾಲಯದ ಐಡಿಯಿಂದ 116 ವಾಹನಗಳ ಚಲನ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಪೊಲೀಸಪ್ಪನ ಪಾಡು ಹೇಳತೀರದಾಗಿದೆ..
ಲಕ್ನೋ (ಡಿ.05): ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಪೊಲೀಸ್ ಇಲಾಖೆಗೆ ವಂಚಿಸುವಂತಹ ವಿಚಿತ್ರ ಕೃತ್ಯ ಎಸಗಿದ್ದಾನೆ. ಟ್ರಾಫಿಕ್ ಪೊಲೀಸರಿಗೆ ನೀಡಲಾಗುವ ಸಂಚಾರ ನಿರ್ದೇಶನಾಲಯದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಬರೋಬ್ಬರಿ 116 ವಾಹನಗಳ ಚಲನ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದರಿಂದ ಪೊಲೀಸರಿಗೆ ತಲೆನೋವು ಶುರುವಾಗಿದ್ದು, ಡಿಲೀಟ್ ಮಾಡಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಉನ್ನಾವ್‌ನಲ್ಲಿ ಒಂದು ಚಲನ್ ತಪ್ಪಿಸಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿದೆ.
ಅಕ್ಟೋಬರ್ 25 ರಂದು ಉನ್ನಾವ್‌ನಿಂದ ಪೊಲೀಸ್ ಕಾನ್‌ಸ್ಟೇಬಲ್ ಮುಖೇಶ್ ರಾಜಪೂತ್ ಅವರು ಲಕ್ನೋ ಸಂಚಾರ ಲೈನ್‌ನ ಅಧಿಕಾರಿ ಆದಿತ್ಯ ದುಬೆ ಅವರಿಗೆ ಅಕ್ಟೋಬರ್ 24, 2024 ರಂದು UP35Q7005 ಸಂಖ್ಯೆಯ ವಾಹನದ ಚಲನ್ ಅನ್ನು ಸಂಚಾರ ನಿರ್ದೇಶನಾಲಯದ ಬಳಕೆದಾರ ಐಡಿಯಿಂದ ತಪ್ಪಾಗಿ ಅಳಿಸಲಾಗಿದೆ ಎಂದು ತಿಳಿಸಿದರು. ಈ ಸುದ್ದಿ ಸಂಚಾರ ಇಲಾಖೆಯ ಅಧಿಕಾರಿಗಳಿಗೆ ತಲುಪಿದಾಗ, ಅವರಿಗೆ ಆಶ್ಚರ್ಯ ಉಂಟಾಯಿತು. ಆಗ ಈ ಐಡಿಯಿಂದ ಈವರೆಗೆ 116 ವಾಹನಗಳ ಸಂಚಾರಿ ನಿಯಮ ಉಲ್ಲಂಘಿಸಿದ ಚಲನ್‌ಗಳನ್ನು ಅಳಿಸಲಾಗಿದೆ ಎಂದು ತಿಳಿದುಬಂದಿದೆ. ಜತೆಗೆ, ಕೆಲವು ಚಲನ್‌ಗಳನ್ನು ನ್ಯಾಯಾಲಯದಿಂದ ಬಿಡುಗಡೆ ಮಾಡಲು ಅನುಮತಿ ಪಡೆಯಲಾಗಿತ್ತು.
ನಾಪತ್ತೆಯಾದ ಕಾನ್‌ಸ್ಟೇಬಲ್: ಇನ್ನು ಪೊಲೀಸ್ ಕಾನ್‌ಸ್ಟೇಬಲ್ ಅಜಯ್ ಶರ್ಮಾ ಯಾವುದೇ ಅಧಿಕಾರಿಯ ಅನುಮತಿಯಿಲ್ಲದೆ ನಿರ್ದೇಶನಾಲಯದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಚಲನ್‌ಗಳನ್ನು ಅಳಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆರಂಭದಲ್ಲಿ ಆರೋಪವನ್ನು ನಿರಾಕರಿಸಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇದೀಗ ಯಾರಿಗೂ ಸಿಗದೇ ಪರಾರಿ ಆಗಿದ್ದಾನೆ.
ಇದನ್ನೂ ಓದಿ : ₹2.5 ಕೋಟಿ ಪೀಕಿದ ಹೈಸ್ಕೂಲ್ ಬಾಯ್‌ಫ್ರೆಂಡ್‌ಗೆ ತನು, ಮನ, ಧನ ಮತ್ತು ದೇಹವನ್ನೂ ಅರ್ಪಿಸಿದ ಯುವತಿ!
ಪೊಲೀಸರು ಈಗ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ಕಾನ್‌ಸ್ಟೇಬಲ್ ಫೋನ್ ಕರೆ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಗೋಸಾಯಿಗಂಜ್ ಠಾಣಾಧಿಕಾರಿ ಅಂಜನಿ ಕುಮಾರಿ ಮಿಶ್ರಾ, ತನಿಖೆ ಪೂರ್ಣಗೊಂಡ ನಂತರವೇ ಈ ವಂಚನೆಯಿಂದ ಎಷ್ಟು ಹಣ ನಷ್ಟವಾಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ಪೊಲೀಸರು ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.