ತಾಲೀಮು : ಬೆಚ್ಚಿದ ನಾಲ್ಕು ಹೊಸ ಆನೆಗಳು - 14 ಆನೆ, 43 ಅಶ್ವ ದಳಕ್ಕೆ ತಾಲೀಮು

ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ಮತ್ತು ಅಶ್ವದಳಕ್ಕೆ ಬುಧವಾರ ಕುಶಾಲತೋಪು ಸಿಡಿಸುವ ಮೂಲಕ ತಾಲೀಮು ನೀಡಲಾಯಿತು.

   14 Elephants  43 Workout Hours Participated in Dasara Jambusavari  preparation  snr

 ಮೈಸೂರು :  ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ಮತ್ತು ಅಶ್ವದಳಕ್ಕೆ ಬುಧವಾರ ಕುಶಾಲತೋಪು ಸಿಡಿಸುವ ಮೂಲಕ ತಾಲೀಮು ನೀಡಲಾಯಿತು.

ನಗರದ ವಸ್ತುಪ್ರದರ್ಶನ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳನ್ನು ಒಂದೆಡೆ ಸೇರಿಸಿ ಸಿಡಿಮದ್ದು ಸಿಡಿಸಲಾಯಿತು. ಹೊಸ ಆನೆಗಳಷ್ಟೇ ಸ್ವಲ್ಪ ವಿಚಲಿತವಾಗಿದ್ದು ಬಿಟ್ಟರೆ, ಅನುಭವಿ ಆನೆಗಳು ಧೈರ್ಯದಿಂದ ಶಬ್ಧವನ್ನು ಆಲಿಸಿದವು.

ಜಂಬೂಸವಾರಿಯ ಆರಂಭದ ಸಂದರ್ಭದಲ್ಲಿ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದೆ. ಈ ವೇಳೆ ಬಾರಿ ಶಬ್ದವಾಗಲಿದೆ. ಆಗ ಆನೆ ಮತ್ತು ಕುದುರೆಗಳು ವಿಚಲಿತವಾಗದೆ ಇರಲು ಈ ತಾಲೀಮು ನೀಡಲಾಗುತ್ತದೆ. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ 43 ಆಶ್ವಗಳಿಗೆ 7 ಪಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಬಾರಿ ಕುಶಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ಪರಿಚಯ ಮಾಡಿಸಲಾಯಿತು.

ಈ ವೇಳೆ ಅಭಿಮನ್ಯು ಒಳಗೊಂಡಂತೆ ಅನುಭವಿ 10 ಆನೆಗಳು ಧೈರ್ಯ ಪ್ರದರ್ಶಿಸಿದರೆ ಹೊಸ ಆನೆಗಳಾದ ರೋಹಿತ್, ಹಿರಣ್ಯ, ಪ್ರಶಾಂತ ಮತ್ತು ಸುಗ್ರೀವ ಬೆಚ್ಚಿದವು.

ತಾಲೀಮಿಗೂ ಮುನ್ನ ಡಿಸಿಪಿ ಮುತ್ತುರಾಜ್ ಅವರಿಂದ ಕುಶಾಲತೋಪು ಸಿಡಿಸಲು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ಅನುಮತಿ ಪಡೆದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿಧ್ಯುಕ್ತವಾಗಿ ಆರಂಭವಾಯಿತು.

ಸಿಡಿಮದ್ದು ಸಿಡಿಯುತ್ತಿದ್ದಂತೆಯೇ ಮೊದಲ ಸಾಲಿನಲ್ಲಿ ನಿಂತಿದ್ದ ಅಭಿಮನ್ಯು, ಅರ್ಜುನ, ವಿಜಯಾ, ವರಲಕ್ಷ್ಮಿ, ಭೀಮ, ಗೋಪಿ, ಕಂಜನ್, ಮಹೇಂದ್ರ ಆನೆಗಳು ಭಾರಿ ಶಬ್ದಕ್ಕೆ ಕದಲದೆ ನಿಂತಿದ್ದವು. ಇದೇ ಮೊದಲ ಬಾರಿ ದಸರೆಗೆ ಬಂದಿರುವ ಕಂಜನ್ ಕೂಡ ಕದಲಲಿಲ್ಲ. ಮೊದಲ ಸುತ್ತಿನ ಸಿಡಿಮದ್ದಿನ ಸದ್ದಿಗೆ ಬೆಚ್ಚಿದರೂ ನಂತರ ಧೈರ್ಯ ಪ್ರದರ್ಶಿಸಿದ. ಆದರೆ, ಮೂರನೇ ಬಾರಿ ದಸರೆಯಲ್ಲಿ ಭಾಗವಹಿಸಿರುವ ಧನಂಜಯ ಸಿಡಿಮದ್ದಿನ ಶಬ್ದಕ್ಕೆ ಬೆಚ್ಚಿದ.

ಮುಂಜಾಗ್ರತಾ ಕ್ರಮವಾಗಿ ಅರ್ಜುನ, ಅಭಿಮನ್ಯು, ಮಹೇಂದ್ರ, ಭೀಮ ಹೊರತು ಪಡಿಸಿ ಉಳಿದ ಎಲ್ಲಾ ಆನೆಗಳ ಕಾಲಿಗೆ ಸರಪಳಿ ಕಟ್ಟಲಾಗಿತ್ತು. ಎರಡನೇ ಸಾಲಿನಲ್ಲಿ ನಿಂತಿದ್ದ ಸುಗ್ರೀವ, ರೋಹಿತ, ಪ್ರಶಾಂತ ಹಾಗೂ ಹಿರಣ್ಯ ಬೆಚ್ಚಿದವು. ಸಿಡಿಮದ್ದು ಸ್ಫೋಟಗೊಳ್ಳುತ್ತಿದ್ದಂತೆ ಬೆದರಿದ ಈ ಆನೆಗಳು ಹಿಂದೆ ಮುಂದೆ ಚಲಿಸಲಾರಂಭಿಸಿದವು. ಶಬ್ಧಕ್ಕೆ ಬೆದರಿ ಘೀಳಿಟ್ಟವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಬೆಚ್ಚಿದ ಕುದುರೆಗಳನ್ನು ಸವಾರರು ಹತೋಟಿಗೆ ತಂದರು.

ಗೀಳಿಟ್ಟ ರೋಹಿತ

ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ 21 ವರ್ಷದ ರೋಹಿತ ಆನೆ ಸಿಡಿಮದ್ದಿನ ಮೊರತಕ್ಕೆ ಬೆಚ್ಚಿದ. ಮುಂಜಾಗ್ರತಾ ಕ್ರಮವಾಗಿ ಎರಡೂ ಕಾಲಿಗೂ ಸರಪಳಿ ಕಟ್ಟಿದ್ದರೂ ಭಾರೀ ಸದ್ದಿಗೆ ವಿಚಲಿತನಾದ. ಕುಶಾಲತೋಪು ಸಿಡಿಯುತ್ತಿದ್ದಂತೆ ಗಾಬರಿಗೊಂಡು ಅತ್ತಿಂದಿತ್ತ ಚಲಿಸಲಾರಂಭಿಸಿದ.

ಮಾವುತ, ಕಾವಾಡಿ ರೋಹಿತನನ್ನು ಸಮಾಧಾನಪಡಿಸಲು ಮುಂದಾದರೂ ಸಹಜ ಸ್ಥಿತಿಗೆ ಮರಳಲಿಲ್ಲ. ಕಾಲಿಗೆ ಸರಪಳಿ ಕಟ್ಟಿದ್ದರಿಂದ ಮುಗ್ಗರಿಸಿದ. ಈ ವೇಳೆ ಆನೆಯ ಮೇಲೆ ಕುಳಿತಿದ್ದ ಕಾವಾಡಿ ಕೆಳಗೆ ಜಿಗಿದ. ತಾಲೀಮು ಮುಗಿಯುವವರೆಗೂ ಮಾವುತ, ಕಾವಾಡಿಯನ್ನು ತನ್ನ ಮೇಲೇರಲು ರೋಹಿತ ಬಿಡಲಿಲ್ಲ. ಈ ವೇಳೆ ನೆರವಿಗೆ ಬಂದ ಅರ್ಜುನ, ಭೀಮ ರೋಹಿತ್ನನ್ನು ಸಮಾಧಾನಪಡಿಸಿ, ಅರಮನೆಯ ಅಂಗಳಕ್ಕೆ ಕರೆದೊಯ್ದರು.

ಹೊಸ ಆನೆಗಳಷ್ಟೇ ಸ್ವಲ್ಪ ಬೆದರಿದರೂ, ಬಳಿಕ ನಿಯಂತ್ರಣಕ್ಕೆ ಬಂದವು. ಅ. 13 ರಂದು ಎರಡನೇ ಸುತ್ತಿನ ತಾಲೀಮು ನಡೆಯಲಿದೆ.

- ಸೌರಭ್ ಕುಮಾರ್, ಡಿಸಿಎಫ್

Latest Videos
Follow Us:
Download App:
  • android
  • ios