ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ 15ರಂದು ಚಾಲನೆ : ಆನೆಗಳಿಗೆ ಪ್ರತಿನಿತ್ಯ ತಾಲೀಮು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು ಅ.15 ರಂದು ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡುವರು.

World famous Mysore Dussehra festival starts on 15th: Daily exercise for elephants snr

 ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು ಅ.15 ರಂದು ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡುವರು.

ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಅ.24 ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2.08 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4.40 ರಿಂದ 5 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಡಿಸಿಎಂ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು.

ಅದೇ ದಿನ ಸಂಜೆ 7.30ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಗೌರವ ವಂದನೆ ಸ್ವೀಕರಿಸುವರು. ಸಿಎಂ, ಡಿಸಿಎಂ ಮತ್ತಿತರರು ಭಾಗವಹಿಸುವರು. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು.

ಅ. 15ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖುಬಾ, ರಾಜ್ಯದ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಮೇಯರ್ ಶಿವಕುಮಾರ್ ಭಾಗವಹಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.

ಅದೇ ದಿನ ಸಂಜೆ 7ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು. 

ಮೊದಲ ದಿನದ ಕಾರ್ಯಕ್ರಮ: ಅ.15 ರಂದು ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ, ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಧ್ಯಾಹ್ನ 1ಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸುವರು, ಸಂಜೆ 4ಕ್ಕೆ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ, ಸಂಜೆ 5ಕ್ಕೆ ದೊಡ್ಡಕೆರೆ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು.

ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ರಾಜ್ಯಮಟ್ಟದ ಶಿಲ್ಪ, ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸುವರು.

 ನಾಲ್ಕು ಕವಿಗೋಷ್ಠಿಗಳು: ಅ.17 ರಂದು ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಕಾವ್ಯ ಸಂಭ್ರಮ- ಹಾಸ್ಯ, ಚುಟುಕು, ಜಾನಪದ ಕವಿಗೋಷ್ಠಿಯನ್ನು ಕವಿ ಜಯಂತ್ ಕಾಯ್ಕಿಣಿ, 18 ರಂದು ಬೆಳಗ್ಗೆ 11ಕ್ಕೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು, ಮಹಿಳಾ ಕವಿಗೋಷ್ಠಿಯನ್ನು ಕವಯಿತ್ರಿ ಸವಿತಾ ನಾಗಭೂಷಣ ಉದ್ಘಾಟಿಸುವರು. 19 ರಂದು ಸಂಜೆ 7ಕ್ಕೆ ಬೆಂಗಳೂರು ರಸ್ತೆ,ಯ ಕ್ಲಾಸಿಕ್ ಸಭಾಂಗಣದಲ್ಲಿ ಉರ್ದು ಕವಿಗೋಷ್ಠಿ ನಡೆಯಯಲಿದೆ. 21 ರಂದು ಬೆಳಗ್ಗೆ 11ಕ್ಕೆ ಕಲಾಮಂದಿರದಲ್ಲಿ ನಡೆಯುವ ಪ್ರಧಾನ ಕವಿಗೋಷ್ಠಿಯನ್ನು ಕವಯಿತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸುವರು. 

 ಯುವ ದಸರಾ ಸಹಿತ - ಹಲವು ಕಾರ್ಯಕ್ರಮ

ದಸರಾ ಮಹೋತ್ಸವ ಸಂದರ್ಭದಲ್ಲಿ ಗ್ರಾಮೀಣ ಯೋಗ, ರಂಗೋಲಿ ಚಿತ್ತಾರ, ಮಹಿಳಾ ದಸರಾ, ಪಾರಂಪರಿಕ ಸೈಕಲ್ ಸವಾರಿ, ಕರಕುಶಲ ಪ್ರದರ್ಶನ, ಯುವ ದಸರಾ ಇತ್ಯಾದಿಗಳೂ ನಡೆಯಲಿವೆ.

ಪಾರಂಪರಿಕ ಟಾಂಗಾ ಸವಾರಿ, ಜೈಲು ಹಕ್ಕಿಗಳಿಗೆ ಯೋಗಾಭ್ಯಾಸ, ರೈತ ದಸರಾ, ರಾಜ್ಯ ಮಟ್ಟದ ಹಸುಗಳ ಹಾಲು ಕರೆಯುವ ಸ್ಪರ್ಧೆ, ಪಾರಂಪರಿಕ ನಡಿಗೆ, ದಸರಾ ಕ್ರೀಡಾಕೂಟ, ಯೋಗ ಚಾರಣ, ಸಾಕು ಪ್ರಾಣಿಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ.

Latest Videos
Follow Us:
Download App:
  • android
  • ios