ಚಿಕ್ಕಬಳ್ಳಾಪುರ ಜಿಲ್ಲೆಯ 1,528 ಗ್ರಾಮಗಳ ಪೈಕಿ 1,242 ಗ್ರಾಮಗಳು ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಮುಕ್ತ ಎಂದು ಘೋಷಣೆಯಾಗಿವೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ನಡೆದ ಸರ್ವೇಯಲ್ಲಿ ಈ ಐತಿಹಾಸಿಕ ಸಾಧನೆ ದೃಢಪಟ್ಟಿದೆ. ಗಾಂಧಿ ಜಯಂತಿಯಂದು ಈ ಸಾಧನೆ ಮಾಡಿದ ಗ್ರಾಮಗಳಿಗೆ ಅಧಿಕೃತ ಪ್ರಮಾಣಪತ್ರ ವಿತರಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಹಕ್ಕುಗಳು ಮತ್ತು ಬಾಲ್ಯದ ಭದ್ರತೆಗೆ ಸಂಬಂಧಿಸಿದಂತೆ ಐತಿಹಾಸಿಕ ಹಾಗೂ ಆಶಾದಾಯಕ ಬದಲಾವಣೆಯೊಂದು ಗಾಳಿಯಲ್ಲಿ ತೇಲಿಬರುತ್ತಿದೆ. ಜಿಲ್ಲೆಯಾದ್ಯಂತ ಇರುವ ಒಟ್ಟು 1,528 ಗ್ರಾಮಗಳ ಪೈಕಿ ಬರೋಬ್ಬರಿ 1,242 ಗ್ರಾಮಗಳು 'ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಮುಕ್ತ ಗ್ರಾಮಗಳು' ಎಂದು ಅಧಿಕೃತವಾಗಿ ಘೋಷಣೆಯಾಗಿವೆ.
ಚಿಕ್ಕಬಳ್ಳಾಪುರದಲ್ಲಿ 1,242 ಹಳ್ಳಿಗಳು ಈಗ ಬಾಲ್ಯ ವಿವಾಹ ಮುಕ್ತ!
ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಈ ಬೃಹತ್ ಸಾಧನೆಯ ರೂವಾರಿಯಾಗಿದೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೃಹತ್ ಸರ್ವೇ
ಈ ಮಹತ್ವದ ಸಾಧನೆಯು ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ ಹಾಗೂ ನಿಯಮಾವಳಿಗಳ (ಮಾರ್ಗದರ್ಶನಗಳ) ಪ್ರಕಾರ ನಡೆಸಲಾದ ಸಮಗ್ರ ಸರ್ವೇ ಆಧರಿಸಿ ಹೊರಬಂದಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಇಲಾಖೆಯು ಜಿಲ್ಲೆಯಾದ್ಯಂತ ಪ್ರತಿಯೊಂದು ಗ್ರಾಮದಲ್ಲೂ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದೆ.
ಗ್ರಾಮಗಳ ಆಯ್ಕೆ ಹೇಗೆ?
ಜನವರಿ 1, 2025 ರಿಂದ ಇಂದಿನವರೆಗೆ ಯಾವೆಲ್ಲಾ ಗ್ರಾಮಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿಲ್ಲವೋ, ಪೋಕ್ಸೋ (POCSO) ಕಾಯ್ದೆಯಡಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೋ ಹಾಗೂ ಯಾವುದೇ ಬಾಲಗರ್ಭಿಣಿ ಪ್ರಕರಣಗಳು ಕಂಡುಬಂದಿಲ್ಲವೋ, ಅಂತಹ ಗ್ರಾಮಗಳನ್ನು ಸರ್ವೇಯಲ್ಲಿ ನಿಖರವಾಗಿ ಗುರುತಿಸಿ ಈ ಪಟ್ಟಿಗೆ ಸೇರಿಸಲಾಗಿದೆ.
ಗಾಂಧಿ ಜಯಂತಿಯಂದು ಪ್ರಮಾಣಪತ್ರಗಳ ವಿತರಣೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸಬಲೀಕರಣದ ಕನಸಿಗೆ ಪೂರಕವಾಗಿ, ಈ ಬಾರಿಯ ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಈ ಸಾಧನೆ ಮಾಡಿದ ಎಲ್ಲಾ 1,242 ಗ್ರಾಮಗಳಿಗೂ 'ಬಾಲ್ಯ ವಿವಾಹ ಮುಕ್ತ ಗ್ರಾಮ' ಎಂಬ ಅಧಿಕೃತ ಪ್ರಮಾಣಪತ್ರಗಳನ್ನು (Certificates) ವಿತರಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಯೊಂದು ಗ್ರಾಮಕ್ಕೂ ಈ ಗೌರವ ಪತ್ರ ತಲುಪಿಸಲಿದ್ದಾರೆ.
ಒಂದು ಕಾಲದಲ್ಲಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳಿಂದ ಸುದ್ದಿಯಾಗುತ್ತಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಿರುವುದು ಸಣ್ಣ ವಿಷಯವಲ್ಲ. ಮಕ್ಕಳ ರಕ್ಷಣಾ ಘಟಕ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ನೀಡಿರುವುದು ಮತ್ತು ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಶಿಕ್ಷೆಯ ಕುರಿತು ಜಾಗೃತಿ ಮೂಡಿಸಿರುವುದೆ ಈ ಬದಲಾವಣೆ ಗೆ ಕಾರಣವಾಗಿದೆ.
ಒಟ್ಟಾರೆ 1,528 ಗ್ರಾಮಗಳಲ್ಲಿ 1,242 ಗ್ರಾಮಗಳು (ಶೇಕಡಾ 80ಕ್ಕೂ ಹೆಚ್ಚು ಹಳ್ಳಿಗಳು) ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಾದರಿಯಾಗಿ ನಿಂತಿವೆ. ಬಾಕಿ ಉಳಿದಿರುವ ಗ್ರಾಮಗಳಿಗೂ ಈ ಪುರಸ್ಕಾರವು ದೊಡ್ಡ ಪ್ರೇರಣೆಯಾಗಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಮಕ್ಕಳ ರಕ್ಷಣಾ ಘಟಕದ ಈ ನಡೆ ಇಡೀ ರಾಜ್ಯಕ್ಕೇ ಮಾದರಿಯಾಗಿದೆ. (ವರದಿ:ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ)


