ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ 24 ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದೆ ಎಂದು ತನಿಖಾ ಸಮಿತಿ ವರದಿ ಬಹಿರಂಗಪಡಿಸಿದೆ. ಈ ಜಾಗದಲ್ಲಿ ಖಾಸಗಿ ಕಟ್ಟಡಗಳು ಹಾಗೂ ವಸತಿ ಪ್ರದೇಶಗಳು ನಿರ್ಮಾಣವಾಗಿದ್ದು, ಅಕ್ರಮ ಖಾತೆಗಳನ್ನು ರದ್ದುಪಡಿಸಿ ತೆರವುಗೊಳಿಸಲು ಸಮಿತಿ ಶಿಫಾರಸು ಮಾಡಿದೆ.
ಮಂಡ್ಯ: ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೂ-ಸ್ವಾಧೀನವಾಗಿದ್ದ ಒಟ್ಟು ವಿಸ್ತೀರ್ಣದಲ್ಲಿ 24 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಮಿಮ್ಸ್ ಜಾಗದ ಒತ್ತುವರಿ ಸಂಬಂಧ ತನಿಖಾ ತಂಡದ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯನ್ನು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಗುರುವಾರ ಬಹಿರಂಗಪಡಿಸಿದರು.
ಒತ್ತುವರಿ ಜಾಗದ 12.13 ಎಕರೆ ಪ್ರದೇಶದಲ್ಲಿ 18 ಖಾಸಗಿ ಕಟ್ಟಡಗಳು ನಿರ್ಮಾಣಗೊಂಡಿದ್ದರೆ, 9.17 ಎಕರೆ ಪ್ರದೇಶದಲ್ಲಿ ತಮಿಳು ಕಾಲೋನಿ ನಿವಾಸಿಗಳು ನೆಲೆಸಿದ್ದಾರೆ. ಸರ್ಕಾರಿ ಕಟ್ಟಡಗಳ ಒತ್ತುವರಿ 2.11 ಎಕರೆ ಪ್ರದೇಶದಲ್ಲಿದ್ದು ಒಟ್ಟು ಸೇರಿದಂತೆ 24 ಎಕರೆ 1 ಗುಂಟೆ ಪ್ರದೇಶ ಒತ್ತುವರಿಯಾಗಿರುವುದು ದೃಢಪಟ್ಟಿದೆ. ಪ್ರಸ್ತುತ 25 ಎಕರೆ 8 ಗುಂಟೆ ಪ್ರದೇಶದಲ್ಲಿ ಜಿಲ್ಲಾ ಆಸ್ಪತ್ರೆ ಸ್ವಾಧೀನಾನುಭವದಲ್ಲಿದೆ ಎಂದು ನಕಾಶೆ ಸಹಿತ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜಿಲ್ಲಾಸ್ಪತ್ರೆಗೆ ಭೂ-ಸ್ವಾಧೀನವಾಗಿರುವ ಸರ್ವೇ ನಂಬರ್‌ಗಳಲ್ಲಿ ಒತ್ತುವರಿಯಾಗಿರುವ ಜಮೀನನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಮಿಮ್ಸ್ ತನಿಖಾ ತಂಡದ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಿದ್ದರು. ಅದರಂತೆ ತನಿಖಾ ತಂಡ ತಾಲೂಕು ಭೂ ಮಾಪಕರಿಂದ ಡಿಜಿಪಿಎಸ್ ಅಳತೆ ಕಾರ್ಯ ಮಾಡಿಸಿ, ನಕ್ಷೆ ತಯಾರಿಸಿ, ನಗರಸಭೆಯಿಂದ ಖಾತಾ ಆಗಿರುವ ಮಾಹಿತಿಯನ್ನು ಪಡೆದು ವರದಿಯನ್ನು ಸಿದ್ಧಪಡಿಸಿ ರವಾನಿಸಿದೆ ಎಂದರು.
14.32 ಎಕರೆ ಖರಾಬು ಭೂಮಿ
ಮೈಸೂರು ಗೆಜೆಟ್‌ನಲ್ಲಿ ದಾಖಲಿಸಿರುವ ಎರಡು ಅಧಿಸೂಚನೆಯನ್ವಯ 14.32 ಎಕರೆ ಖರಾಬು ಭೂಮಿಯನ್ನು ಒಳಗೊಂಡಿದೆ. ಕಂದಾಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಧಿಸೂಚನೆಯಂತೆ ಸರ್ವೇ ನಂ. 851ನ್ನು ಹೊರತುಪಡಿಸಿ ಉಳಿಕೆ ಎಲ್ಲಾ ಸರ್ವೇ ನಂಬರ್‌ಗಳು ಜಿಲ್ಲಾ ಆಸ್ಪತ್ರೆಗೆ ಭೂ ಸ್ವಾಧೀನವಾಗಿರುವುದಾಗಿ ನಮೂದಿಸಲಾಗಿದೆ ಎಂದರು.
ಒತ್ತುವರಿಯಾಗಿರುವ ಕಟ್ಟಡಗಳಿಗೆ ಅಥವಾ ಮಾಲೀಕತ್ವದ ಬಗ್ಗೆ ನಗರಸಭೆಯಿಂದ ಈಗಾಗಲೇ ಖಾತೆ ನೀಡಲಾಗಿದೆ. ಆದರೆ, ಮಾಲೀಕತ್ವವನ್ನು ಸಾಬೀತುಪಡಿಸಲು ಖಾತೆಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ಮಾಡಿರುತ್ತಾರೆ ಎನ್ನುವ ಬಗ್ಗೆ ಪೂರಕ ದಾಖಲೆ ಇಲ್ಲ. ಈ ಜಮೀನು ಹಿಂದೆ ಮಂಡ್ಯ ಜಿಲ್ಲಾ ಆಸ್ಪತ್ರೆ ಮತ್ತು ಮಿಮ್ಸ್‌ಗೆ ಭೂ ಸ್ವಾಧೀನವಾದ ನಂತರ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.
ಈ ಜಮೀನನ್ನು ಸಕ್ಷಮ ಪ್ರಾಧಿಕಾರ, ಸರ್ಕಾರದಿಂದ ಮಂಜೂರಾಗದ ಹೊರತು ಯಾವುದೇ ಖಾಸಗಿ ಸಂಸ್ಥೆ ವ್ಯಾಪ್ತಿಗೆ ಖಾತೆ ನೀಡಲು ಅವಕಾಶ ಇರುವುದಿಲ್ಲ. ಯಾವುದೇ ದಾಖಲೆಗಳ ಆಧಾರದ ಮೇಲೆ ಖಾತೆ ಖಾಸಗಿ ವ್ಯಕ್ತಿಗೆ ಖಾತೆ ನೀಡಿದ್ದರೆ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕಿರುತ್ತದೆ. ಅತಿಕ್ರಮ ಮಾಡಿಕೊಂಡಿರುವ ಕಟ್ಟಡ ಮಾಲೀಕರಿಂದ ದಾಖಲೆಗಳನ್ನು ಪಡೆದು ಪೌರಾಯುಕ್ತರು ಪರಿಶೀಲಿಸಿ ನೀಡುವುದು ಅವಶ್ಯಕವಾಗಿದೆ. ಅಕ್ರಮ ಖಾತೆಗಳಾಗಿದ್ದರೆ ರದ್ದು ಮಾಡಲು ಕ್ರಮ ವಹಿಸಬಹುದು ಎಂದು ಸಮಿತಿಯು ಪೌರಾಯುಕ್ತರಿಗೆ ಶಿಫಾರಸು ಮಾಡಿದೆ ಎಂದರು.
ಒತ್ತುವರಿ ತೆರವುಗೊಳಿಸುವ ಬಗ್ಗೆ ಕಾನೂನು ಕ್ರಮ
ಜಿಲ್ಲಾ ಆಸ್ಪತ್ರೆ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟಿರುವುದರಿಂದ ಆಡಳಿತಾತ್ಮಕ ವಿಷಯ ನಿರ್ವಹಣೆಯು ಮಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಎಂ.ಪಿ.ಕೃಷ್ಣಕುಮಾರ್ ಅವರದ್ದಾಗಿದೆ. ಅತಿಕ್ರಮವಾಗಿದ್ದಲ್ಲಿ ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ 1974ರ ಕಲಂ 2ಇ ಮತ್ತು ಕಲಂ 3ಹಾಗೂ ನಿಯಮಗಳು 1980ರ ನಿಯಮ 3,4,5,6ರನ್ವಯ ನಿಯಮಾನುಸಾರ ನೋಟಿಸ್ ನೀಡಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.
ದಸರಾ ಮುಗಿದ ಬಳಿಕ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಒತ್ತುವರಿ ಜಾಗ ತೆರವಿಗೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆ.ಮಧುಸೂಧನ್, ಮಂಚೇಗೌಡ, ಶಿವರಾಮೇಗೌಡ, ಕಿರಣ್‌ಕುಮಾರ್, ಕೃಷ್ಣ ಇದ್ದರು.
ತಡೆಯಾಜ್ಞೆಗೆ ಅವಕಾಶವಿಲ್ಲ
ಒತ್ತುವರಿ ಜಾಗದ ಸಂಬಂಧ ತನಿಖಾ ತಂಡ ಸಮಿತಿ ನೀಡುವ ನೋಟಿಸ್ ಮುಂದಿಟ್ಟುಕೊಂಡು ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಕ್ಕೆ ಅವಕಾಶವಿರುವುದಿಲ್ಲ. ಈ ಪ್ರಕರಣ ಸಕ್ಷಮ ಪ್ರಾಧಿಕಾರದ ಮುಂದೆ ಮೊದಲು ವಿಚಾರಣೆ ನಡೆದು ನಂತರ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಸಾಮಾನ್ಯವಾಗಿ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ 1974 ಮತ್ತು ನಿಯಮ 1980ರಡಿ ದಾಖಲಾಗುವ ಪ್ರಕರಣಗಳಿಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡುವುದಿಲ್ಲ ಎಂದರು.


