ಜಮೀನಿನ ಸಹಾಯ ಕೇಳಿ ಬಂದ ಮಹಿಳೆಗೆ ಅಮಲೇರುವ ಔಷಧ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಗೊಂಡೇನಹಳ್ಳಿ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿಯನ್ನು ಬಂಧಿಸಲಾಗಿದೆ. ಈ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆತನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಾಗಮಂಗಲ(ಅ.2): ತಾಲೂಕಿನ ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಗುರುವಾರ ಆದೇಶ ಹೊರಡಿಸಿದ್ದಾರೆ.
ಸಹಾಯ ಕೇಳಿ ಬಂದ ಮಹಿಳೆಗೆ ಕಾದಿತ್ತು ಆಘಾತ
ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿದ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಹಣ್ಣಿನ ರಸಕ್ಕೆ ಅಮಲೇರುವ ಔಷಧ ಮಿಶ್ರಣ ಮಾಡಿ ಕುಡಿಸಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾ೧ಚಾರವೆಸಗಿದ್ದಲ್ಲದೆ ವೀಡಿಯೋ ಮಾಡಿಟ್ಟುಕೊಂಡು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದರು.
ನ್ಯಾಯಾಂಗ ಬಂಧನಕ್ಕೆ ಆರೋಪಿ ಮರಿಸ್ವಾಮಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳೂರು ಠಾಣೆ ಪೊಲೀಸರು ಸೆ.19ರಂದು ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಘಟನೆ ಕುರಿತು ತಹಸೀಲ್ದಾರ್ ಹಾಗೂ ನಾಗಮಂಗಲ ವೃತ್ತ ನಿರೀಕ್ಷಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನಾಧರಿಸಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಮರಿಸ್ವಾಮಿಗೆ ಈವರೆಗೂ ಜಾಮೀನು ಸಿಗದಿರುವುದನ್ನು ಉಲ್ಲೇಖಿಸಿ ಸೆ.30ರಂದು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅಮಾನತ್ತುಗೊಂಡ ಗ್ರಾಮ ಆಡಳಿತಾಧಿಕಾರಿಯನ್ನು ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ವೃತ್ತಕ್ಕೆ ಸ್ಥಳಾಂತರಿಸಿದ್ದು, ಈ ಸಂದರ್ಭ ಸಕ್ಷಮದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲವೆಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.


