ಸೋಲಾರ್ ಪ್ಲಾಂಟ್‌ನಲ್ಲಿ ಕಾಣಿಸಿಕೊಂಡಿದ್ದ 12 ಅಡಿ ಉದ್ದದ, 42 ಕೆಜಿ ತೂಕದ ಬೃಹತ್ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್ ಅವರು ರಕ್ಷಿಸಿದ್ದಾರೆ. ಸಂತಾನೋತ್ಪತ್ತಿ ಕಾಲವಾದ್ದರಿಂದ ಸಂಗಾತಿಯನ್ನು ಅರಸಿ ಬಂದಿರುವ ಸಾಧ್ಯತೆಗಳಿವೆ.

ತುಮಕೂರು: ತುರುವೇಕೆರೆ ತಾಲೂಕಿನ ಹಟ್ಟಿಹಳ್ಳಿಯ ಸೋಲಾರ್ ಪ್ಲಾಂಟ್ ನಲ್ಲಿ ಬೀಡುಬಿಟ್ಟಿದ್ದ ಸುಮಾರು 6 ವರ್ಷದ, 42 ಕೆಜಿ ತೂಕದ, 12 ಅಡಿ ಉದ್ದದ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಹಟ್ಟಿಹಳ್ಳಿಯಲ್ಲಿರುವ ಸೋಲಾರ್ ಪ್ಲಾಂಟ್ ನಲ್ಲಿ ಕೆಲ ದಿನಗಳಿಂದ ಈ ಹೆಬ್ಬಾವು ಸಂಚರಿಸುತ್ತಿತ್ತು. ನೋಡಿದ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಬಿಡುತ್ತಿತ್ತು. 

ಗುರುವಾರ ಮಧ್ಯಾಹ್ನ ಸೋಲಾರ್ ಪ್ಲಾಂಟ್ ನಲ್ಲಿ ಸಂಚರಿಸುತ್ತಿದ್ದುದನ್ನು ಗಮನಿಸಿದ ಅಲ್ಲಿಯ ಸಿಬ್ಬಂದಿ ಕೂಡಲೇ ಉರಗ ತಜ್ಞ ಬಾಣಸಂದ್ರ ರವೀಶ್ ಗೆ ಕರೆ ಮಾಡಿದ್ದರು. ಅವರು ಬರುವ ತನಕ ಬಹಳ ಸೂಕ್ಷ್ಮವಾಗಿ ಹೆಬ್ಬಾವಿನ ಸಂಚಾರವನ್ನು ಸಿಬ್ಬಂದಿ ಗಮನಿಸುತ್ತಿದ್ದರು.

ಉರಗ ತಜ್ಞ ಬಾಣಸಂದ್ರ ರವೀಶ್ ಅವರಿಂದ ರಕ್ಷಣೆ

ಬಾಣಸಂದ್ರ ರವೀಶ್ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡು ಹೆಬ್ಬಾವನ್ನು ಸಂರಕ್ಷಿಸಿದರು. ಈ ಪ್ರದೇಶದಲ್ಲಿ ಹೆಬ್ಬಾವು ಕಾಣಿಸಿಕೊಳ್ಳುವುದು ಅಪರೂಪ. ಇದು ಚಿಟ್ಟಿಹಳ್ಳಿ, ಬ್ಯಾಡರಹಳ್ಳಿ ಕಾವಲು ಅರಣ್ಯ ಪ್ರದೇಶದ ಮೂಲಕ ಇಲ್ಲಿಗೆ ಬಂದಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾವನ್ನು ರಕ್ಷಿಸಲು ಬಂದವನನ್ನೇ ಹಾವಿನಿಂದ ರಕ್ಷಿಸಿದ ಗ್ರಾಮಸ್ಥರು..!

ಸುಮಾರು 6 ವರ್ಷದ ಹೆಣ್ಣು ಹೆಬ್ಬಾವು

ಹೆಬ್ಬಾವಿಗೆ ಇದು ಸಂತಾನೋತ್ಪತ್ತಿ ಕಾಲವಾಗಿರುವುದರಿಂದ ತನ್ನ ಸಂಗಾತಿಯನ್ನು ಅರಸಿ, ಒಂದು ಅರಣ್ಯ ಪ್ರದೇಶದಿಂದ ಮತ್ತೊಂದು ಅರಣ್ಯ ಪ್ರದೇಶಕ್ಕೆ ತೆರಳುವುದು ಸಾಮಾನ್ಯ ಎಂದು ಅವರು ತಿಳಿಸಿದರು. ಇದು ಸುಮಾರು 6 ವರ್ಷದ ಹೆಣ್ಣು ಹೆಬ್ಬಾವಾಗಿದೆ. ಇದರ ತೂಕ ಸುಮಾರು 42 ಕೆಜಿ ಇದೆ. ಇದನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು ಎಂದು ಉರಗ ತಜ್ಞ ಬಾಣಸಂದ್ರ ರವೀಶ್ ಹೇಳಿದರು.

ಇದನ್ನೂ ಓದಿ: ಗಂಡು ಕಾಳಿಂಗ ಸರ್ಪ ಏಕಪತ್ನಿ ವ್ರತಸ್ಥನಾ? ಮಿಲನದ ನಂತರ ಸಂಗಾತಿಯನ್ನೇ ತಿನ್ನುತ್ತಾ?