MYsuru : 106 ವರ್ಷ ಹಳೆಯ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ

106 ವರ್ಷ ಹಳೆಯ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ, -ಮೈಸೂರಿನಲ್ಲಿ ಘಟನೆ. ಪ್ರಾಂಶುಪಾಲರು, ಪ್ರಾಧ್ಯಾಪಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

106 year old Maharani College building wall collapsed snr

 ಮೈಸೂರು (ಅ.22):  ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ, ಶಿಥಿಲಾವಸ್ಥೆಯಲ್ಲಿದ್ದ 106 ವರ್ಷಗಳಷ್ಟು ಹಳೆಯ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ. ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿಗೆ 2 ದಿನ ರಜೆ ಘೋಷಿಸಲಾಗಿದೆ.

ಶಿಥಿಲಗೊಂಡಿರುವ ಕಟ್ಟಡದ (Buildong)  ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ಶೀಘ್ರದಲ್ಲೇ ನಡೆಯಬೇಕಿತ್ತು. ಆದರೆ 4 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ (Rain)  ಬಿರುಕುಗಳು ಮೂಡಿ ಇದೀಗ ಕುಸಿದಿದೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ರವಿ ಹೇಳಿದ್ದಾರೆ.

ತಪ್ಪಿದ ದುರಂತ: ಇದೀಗ ಕುಸಿದಿರುವ ಕಟ್ಟಡದ ಭಾಗದಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯವಿತ್ತು. ಹೊರಭಾಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರವೇಶ ದ್ವಾರವಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರಯೋಗಾಲಯದ ಗೋಡೆಯಲ್ಲಿ ಬಿರುಕು ಮೂಡಿತ್ತು. ಗೋಡೆ ಕುಸಿಯುವ ಮುನ್ನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ.ಪದ್ಮನಾಭ ಅವರು ಎಂದಿನಂತೆ ಕೊಠಡಿಗೆ ಆಗಮಿಸಿದ್ದು, ಈ ವೇಳೆ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿರುವುದನ್ನು ಗಮನಿಸಿ, ಕೂಡಲೇ ಪ್ರಾಂಶುಪಾಲ ಡಾ.ಡಿ.ರವಿ ಅವರ ಗಮನಕ್ಕೆ ತಂದರು. ತಕ್ಷಣ ಕೊಠಡಿ ಪರಿಶೀಲಿಸಿದ ಪ್ರಾಂಶುಪಾಲರು ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗ್ಗೆ 10.28ಕ್ಕೆ ಕೊಠಡಿಗೆ ಬಾಗಿಲು ಮುಚ್ಚಿಸಿ, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಯಾರೂ ಒಳ ಪ್ರವೇಶಿಸದಂತೆ ಸೂಚಿಸಿದರು. ಎಲ್ಲರೂ ಕಟ್ಟಡದ ಮೊದಲ ಮಹಡಿ ಮೆಟ್ಟಿಳಿಯುತ್ತಿದ್ದಂತೆ ಭಾರೀ ಶಬ್ಧದೊಂದಿಗೆ ಬೆಳಗ್ಗೆ 10.35ಕ್ಕೆ ಗೋಡೆ ಬಿರುಕು ಬಿಟ್ಟಿದ್ದ ಭಾಗದಲ್ಲಿ ಕಟ್ಟಡ ಕುಸಿದಿದೆ. ಸಾಮಾನ್ಯವಾಗಿ ಈ ಪ್ರಯೋಗಾಲಯದಲ್ಲಿ 30 ವಿದ್ಯಾರ್ಥಿನಿಯರು, ಐವರು ಉಪನ್ಯಾಸಕರು ಇರುತ್ತಿದ್ದರು. ಒಂದು ವೇಳೆ ಸ್ವಲ್ಪ ವಿಳಂಬವಾಗಿದ್ದರೂ ಜೀವ ಹಾನಿಯಾಗುವ ಸಾಧ್ಯತೆ ಇತ್ತು.

ಕೊಠಡಿ ಕುಸಿದಿರುವುದರಿಂದ ಅಂದಾಜು .40 ಲಕ್ಷ ಮೌಲ್ಯದ ಉಪಕರಣಗಳು ಸಂಪೂರ್ಣ ಹಾಳಾಗಿವೆ ಎಂದು ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಪದ್ಮನಾಭ ತಿಳಿಸಿದರು.

ನ್ಯೂನತೆ ಸರಿಪಡಿಸಲು ಶಿಫಾರಸು

: ಉತ್ತಮ ಪರಿಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಎನ್‌ ಇ ಪಿಯನ್ನು (ರಾಷ್ಟ್ರೀಯ ಶಿಕ್ಷಣ ನೀತಿ) ಅಳವಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಲಾಗುವುದು ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್‌. ರಂಗಪ್ಪ ಹೇಳಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕದ (Karnataka ) ನಿವೃತ್ತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಹಾಗೂ ಮೈಸೂರು (Mysuru) ವಿಶ್ವವಿದ್ಯಾಲಯದ ಅಲ್ಯುಮ್ನಿ ಅಸೋಸಿಯೇಷನ್‌ (ಯುಎಂಎಎ) ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಹುಶಿಸ್ತೀಯ ಕೋರ್ಸ್‌ಗಳ ಆಯ್ಕೆ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಇಪಿಯನ್ನು ತರಾತುರಿಯಲ್ಲಿ ಮಾಡಲಾಗಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಉಪನ್ಯಾಸಕರಿಲ್ಲ, ಸೌಲಭ್ಯಗಳಿಲ್ಲ, ಉತ್ತರ ಪತ್ರಿಕೆ ಬಂದಿಲ್ಲ ಎಂಬುದು ಸೇರಿದಂತೆ ಸೌಲಭ್ಯದ ಕೊರತೆಗಳಿವೆ. ಇದನ್ನು ಸರಿಪಡಿಸುವ ಕುರಿತು ಆರು ತಿಂಗಳಿನಿಂದ ಚರ್ಚೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಎನ್‌ಇಪಿ ಒಳ್ಳೆಯ ಪರಿಕಲ್ಪನೆಯನ್ನು ಹೊಂದಿದೆ. ಆದರೆ ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರದಿದ್ದರೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಉಪನ್ಯಾಸಕರ ಅಭಿಪ್ರಾಯ ಕೇಳಲಾಗುತ್ತಿದೆ. ಆ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಕಳಿಹಿಸಿ ಅನುಮೋದನೆ ಪಡೆದ ಬಳಕ ಎನ್‌ಇಪಿ ಅನುಷ್ಠಾನಗೊಳಿಸುವುದಾಗಿ ಅವರು ಹೇಳಿದರು.

ಈ ಸಂಬಂಧ ಸಾಕಷ್ಟುತಾಪತ್ರಯವಿದೆ. ಒಂದು ವರ್ಷವಾದರೂ ಅಂಕಪಟ್ಟಿಕೊಟ್ಟಿಲ್ಲ ಎಂದಾದರೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತಕುಮಾರ್‌ ಮಾತನಾಡಿ, ಎನ್‌ಇಪಿ ವಿಜ್ಞಾನದ ಪಠ್ಯಕ್ರಮ ಸಮಿತಿ ಅಧ್ಯಕ್ಷನಾದೆ. ವಿಶ್ವದ ಮೊದಲ 100 ವಿವಿಗಳ ರಾರ‍ಯಂಕ್‌ಪಟ್ಟಿಯಲ್ಲಿ ಭಾರತದ ವಿವಿಗಳು ಬರಬೇಕು ಎನ್ನುವುದು ಕೇಂದ್ರದ ಉದ್ದೇಶ. ಇದಕ್ಕಾಗಿ ಗುಣಮಟ್ಟದ ಶಿಕ್ಷಣ ಅಗತ್ಯ. ಇದಕ್ಕೆ ಪೂರಕವಾಗಿ ಬೋಧಕರು ಮನೋಭಾವ ಬದಲಿಸಿಕೊಳ್ಳಬೇಕು ಎಂದರು.

ಕೋರ್ಸ್‌ಗಳ ಆಯ್ಕೆಯ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಬದಲಾವಣೆಯಾದಾಗ ಆರಂಭದಲ್ಲಿ ವಿರೋಧವಿರುತ್ತದೆ. ನಂತರ ಸರಿ ಹೋಗುತ್ತದೆ. ಸರ್ಕಾರವು ಹೆಚ್ಚಿನ ಅನುದಾನ, ಮೂಲಸೌಲಭ್ಯ ಮತ್ತು ಮಾನವ ಸಂಪನ್ಮೂಲ ಒದಗಿಸಿದರೆ ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂದು ಅವರು ಹೇಳಿದರು.

ವಿಶ್ರಾಂತ ಕುಲಪತಿ ಎಸ್‌.ಎನ್‌. ಹೆಗ್ಡೆ ಮಾತನಾಡಿ, ಇದು ಎರಡು ವರ್ಷಸ ಹಿಂದಿನ ಪಾಲಿಸಿ ಅಲ್ಲ. 15 ವರ್ಷದ ಪಾಲಿಸಿ. ಇದನ್ನು ಎಲ್ಲಾ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಬೇಕು. ಇದು ಒಳ್ಳೆಯ ಯೋಜನೆ. ಆದರೆ ಅದಕ್ಕೆ ತಯಾರಿ ಆಗಿದೆಯಾ? ರಾಜಕೀಯ ಧೋರಣೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಬಾರದು. ಈ ಯೋಜನೆ ಅನುಷ್ಠಾನಕ್ಕೆ ಬೇಕಾದ ಶಿಕ್ಷಕರು ಎಲ್ಲಿದ್ದಾರೆ? ಸೌಕರ್ಯ ಎಲ್ಲಿದೆ? ಇದನ್ನೆಲ್ಲ ಸರ್ಕಾರ ಗಮನಿಸಬೇಕು. ಇಂತಹ ಕಾರ್ಯಾಗಾರ ಹೆಚ್ಚು ನಡೆಯಬೇಕು. ಕಲಾ, ವಿಜ್ಞಾನ, ವಾಣಿಜ್ಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕೊಡಬೇಕು ಎಂದರು.

Latest Videos
Follow Us:
Download App:
  • android
  • ios