ಕೇಂದ್ರ ಬಜೆಟ್‌ನಲ್ಲಿ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ ಕೇವಲ 1,000 ರೂ. ಮಂಜೂರು..!

1000 ರು. ಮೀಸಲಿಟ್ಟ ಕೇಂದ್ರದ ಧೋರಣೆಗೆ ಕಲಬುರಗಿಯಲ್ಲಿ ಆಕ್ರೋಶ, ವಂದೇ ಭಾರತ್‌ ರೈಲಿಂದ ಕಲಬುರಗಿ ದೂರ ಇಟ್ಟು ಮಾರ್ಗ ಘೋಷಣೆಗೆ ಆಕ್ಷೇಪ. 

1000 Rs Sanctioned for the Kalaburagi Railway Division in the Union Budget  grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.05):  ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಲಬುರಗಿಗೆ ಮಂಜೂರಾಗಿರುವ ರೇಲ್ವೆ ವಿಭಾಗೀಯ ಕಚೇರಿ (ಆಡಳಿತ ಭವನ) ಕ್ಕೆ ಕೇವಲ 1 ಸಾವಿರ ರುಪಾಯಿ ಮಂಜೂರು ಮಾಡಲಾಗಿದೆ!. 2013- 14ರಲ್ಲೇ ಮಂದೂಡಲಾಗಿರುವ ಇನ್ನೂ ನೆಲಬಿಟ್ಟು ಮೇಲೇಳದ ವಿಭಾಗೀಯ ಕಚೇರಿಗೆ ಈ ರೀತಿ ಚಿಲ್ಲರೆ ಹಣ ಮೀಸಲಿಟ್ಟಿರುವ ಕೇಂದ್ರದ ಧೋರಣೆಗೆ ಕಲಬುರಗಿಯಲ್ಲಿ ರೇಲ್ವೆ ಬಳಕೆದಾರರು, ವಿವಿಧ ಸಂಘಟನೆಯವರು, ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಹೊರತು ಪಡಿಸಿದರೆ ಕಲ್ಯಾಣದ ಜಿಲ್ಲೆಗಳಿಗೆ ಹೇಳಿಕೊಳ್ಳುವಂತಹ ಯಾವುದೇ ಹೊಸ ರೇಲ್ವೆ ಮೂಲ ಸವಲತ್ತಿನ ಅಭಿವೃದ್ಧಿ ವಿಷಯದ ಯೋಜನೆಗಳು
ಲಭ್ಯವಾಗಿಲ್ಲ. ಇಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಎಂದಿನಂತೆ ಅನುದಾನ ನೀಡಲಾಗಿದೆ. ಇದರಲ್ಲೂ ಮಂಜೂರಾದ ಮೊತ್ತಕ್ಕೆ ಹೋಲಿಸಿದಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ ಸಾಗುವ ಹೊಸ ರೈಲು ಮಾರ್ಗ ಯೋಜನೆಗಳಿಗೆ ಕೇಂದ್ರ ಧಾರಾಳಿಯಾಗಿ ಹಣ ನೀಡುವಲ್ಲಿಯೂ ಹಿಂದೆ ಮುಂದೆ ನೋಡಿರೋದು ಬಜೆಟ್‌ ದಾಖಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ.

ಚಿಲ್ಲರೆ ಹಣ!

ಬಜೆಟ್‌ನಲ್ಲಿ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ 1 ಸಾವಿರ ರುಪಾಯಿ ಹಣ ನೀಡಲಾಗಿದೆ. ಕೇಂದ್ರದ ಈ ಕ್ರಮ ಮತ್ತೆ ಸಾರ್ವಜನಿಕರನ್ನು ಕೆರಳುವಂತೆ ಮಾಡಿದೆ. ಕಳೆದ ಬಾರಿಯ ಬಜೆಟ್‌ನಲ್ಲಿಯೂ ಸಾವಿರ ಮೊತ್ತವನ್ನೇ ನಿಗದಿಪಡಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಇಲ್ಲಿನ ಹೋರಾಟಗಾರರು ರೇಲ್ವೆ ಸಚಿವರಿಗೇ ಚಂದಾ ಪಟ್ಟಿಮಾಡಿ 1, 11 ರುಪಾಯಿ ಹಣ ಮನಿ ಆರ್ಡರ್‌ ಮಾಡುವ ಮೂಲಕ ಕೋಪತಾಪ ಹೊರಹಾಕಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೆ ಈ ಬಜೆಟ್‌ನಲ್ಲಿ ಅದೇ ಸಾವಿರ ರುಪಾಯಿ ಮೊತ್ತವೇ ಕಾಯ್ದಿರಿಸಿರೋದು ಜನರನ್ನು ಕೆರಳಿಸಿದೆ.

ಕಲಬುರಗಿ: ಕೇಂದ್ರ ಬಜೆಟ್‌ ಜನ ವಿರೋಧಿ, ಸಿಪಿಐ (ಎಂ) ಸಮಿತಿ ಕಾರ್ಯದರ್ಶಿ ಕೆ.ನೀಲಾ

ಸದರಿ ಯೋಜನೆಗೆ ವಿಸ್ತೃತ ಯೋಜನಾ ವರದಿಯೂ ರೇಲ್ವೆ ಬೋರ್ಡ್‌ಗೆ ಸಲ್ಲಿಕೆಯಾಗಿತ್ತು. ಆದರೀಗ ಬಜೆಟ್‌ನಲ್ಲಿ ಚಿಲ್ಲರೆ ಹಣ ನೀಡುತ್ತಿರೋದು ಯಾಕಾಗಿ? ಈ ಯೋಜನೆ ಕೈಗೂಡುತ್ತದೋ? ರೇಲ್ವೆ ಇದನ್ನು ಕೈಬಿಟ್ಟಿದೆಯೋ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

2014- 15 ರಲ್ಲಿ ಸದರಿ ಯೋಜನೆಗೆ 5 ಕೋಟಿ ರುಪಾಯಿ ಮಂಜೂರು ಮಾಡಲಾಗಿತ್ತು, 2015- 16 ರ ಬಜೆಟ್‌ನಲ್ಲಿ 48 ಲಕ್ಷ ರುಪಾಯಿ ದೊರಕಿತ್ತು. ಇದಾದ ನಂತರ ಸದರಿ ಯೋಜನೆಯನ್ನು ರೇಲ್ವೆ ಸಚಿವಾಲಯ ಮೂಲೆಗುಂಪು ಮಾಡುತ್ತಲೇ ಹೊರಟಿದ್ದು ಇದೀಗ ಬಜೆಟ್‌ನಲ್ಲಿ ಸದರಿ ಯೋಜನೆಗೆ ಜೀವಂತ ಇಡಬೇಕು ಎಂಬ ದೃಷ್ಟಿಯಿಂದ ಮಾತ್ರ ಚಿಲ್ಲರೆ ಹಣ ನೀಡಲಾಗುತ್ತಿದೆಯೇ ವಿನಹಃ ಯೋಜನೆ ಕೈಗೂಡಿ ಹಿಂದುಳಿದ ನೆಲದಲ್ಲಿ ರೇಲ್ವೆ ಮೂಲ ಸವಲತ್ತು ಒದಗಿಸಲು ಅಲ್ಲ ಎಂದು ರೇಲ್ವೆ ಬಳಕೆದಾರರು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಂದ್ರೆ ಬಂಡಲ್‌ ಜನತಾ ಪಾರ್ಟಿ: ಪ್ರಿಯಾಂಕ್‌ ಖರ್ಗೆ

ವಂದೇ ಭಾರತ್‌ಗೂ ಕೊಕ್ಕೆ!

ರೇಲ್ವೆ ಸಚಿವಾಲಯ ಘೋಷಿಸಿರುವ ಬೆಂಗಳೂರು ಚೆನ್ನೈ ನಡುವಿನ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಮಾರ್ಗದಲ್ಲಿ ಕಲಬುರಗಿಯನ್ನು ದೂರ ಇಡಲಾಗಿದೆ. ಕಾಚಿಗುಡಾ, ಹುಬ್ಬಳ್ಳಿ, ಕೋಯಂಬತ್ತೂರ್‌ ಮಾರ್ಗದ ಮೂಲಕ ವಂದೇ ಭಾರತ ರೈಲು ಬೆಂಗಳೂರು- ಚೆನ್ನೈ ಸಂಪರ್ಕಿಸಲಿದೆ ಎಂದು ಘೋಷಿಸಲಾಗಿದೆ. ಆದರೆ ವಂದೇ ಭಾರತ ರೈಲನ್ನು ಬೆಂಗಳೂರಿನಿಂದ ಕಲಬುರಗಿ ಮಾರ್ಗವಾಗಿ ಚೆನ್ನೈಗೆ ಓಡಿಸಲು ಅವಕಾಶವಿದ್ದರೂ ಈ ರೈಲನ್ನು ಕಾಚಿಗುಡಾ ಮೂಲಕ ಓಡಿಸಲಾಗುತ್ತಿದೆ. ಬೆಂಗಳೂರಿನಿಂದ ಕಾಚಿಗುಡಾ ಹಾಗೂ ಕಲಬುರಗಿ ಮಧ್ಯೆ ಅಷ್ಟೇ ಅಂತರವಿದ್ದರೂ ಸಹ ಏಕೆ ಹೀಗೆ ಕಲಬುರಗಿಯನ್ನು ವಂದೇ ಭಾರತ ಮಾರ್ಗದಿಂದ ದೂರ ಇಡಲಾಯಿತು ಎಂಬ ಪ್ರಶ್ನೆ ಮೂಡಿದೆ. ಕಲಬುರಗಿಯಂದ ಬೆಂಗಳೂರಿಗೆ ಪ್ರತ್ಯೇಕ ರೈಲುಗಳೇ ಇಂದಿಗೂ ಇಲ್ಲ. ಹೀಗಾಗಿ ವಂದೇ ಭಾರತ್‌ ರೈಲನ್ನು ಬೆಂಗಳೂರನಿಂದ ಕಲಬುರಗಿ ಮಾರ್ಗವಾಗಿ ಚೆನ್ನೈಗೆ ಓಡಿಸಬಹುದಿತ್ತು ಎಂಬುದು ಇಲ್ಲಿನ ರೈಲ್ವೆ ಬಳಕೆದಾರರ ಅಪೇಕ್ಷೆಯಾಗಿದೆ.

ರೈಲ್ವೆ ಸಚಿವರಿಗೆ ಒಂದು ಪ್ರಶ್ನೆ, ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ ಬಹುದೊಡ್ಡ ಮೊತ್ತವಾದ 1 ಸಾವಿರ ರುಪಾಯಿ ನೀಡಿದ್ದೀರಿ. ಇದನ್ನು ಈ ಯೋಜನೆಯಲ್ಲಿ ಯಾವ ರೀತಿಯಾಗಿ ವೆಚ್ಚ ಮಾಡಬೇಕು ಎಂಬುದನ್ನೂ ತಾವೇ ಹೇಳಿ ಬಿಡಿ. ನಮಗಂತೂ ಈ ಮೊತ್ತ ಹೇಗೆ ವೆಚ್ಚ ಮಾಡಬೇಕು ಗೊತ್ತಾಗುತ್ತಿಲ್ಲ. ಹಣ ಕೊಟ್ಟವರು ನೀವೆ, ಅದರ ಖರ್ಚು ಮಾಡೋದು ಹೇಗೆಂದೂ ನೀವೇ ಮಾರ್ಗದರ್ಶನ ಮಾಡಿ. ನಮ್ಮನ್ನು ಸೆಂಟ್ರಲ್‌ ರೇಲ್ವೆಯಿಂದ ತೆಗೆದು ಹುಬ್ಬಳ್ಳಿ ಕೇದ್ರವಾಗಿರೋ ನೈರುತ್ಯ ರೇಲ್ವೆಗೆ ಸೇರಿಸದ ಹೊರತು ನಮ್ಮ ಭಾಗದಲ್ಲಿ ರೇಲ್ವೆ ಸವಲತ್ತು ದೊರಕೋದಿಲ್ಲವೆಂಬುದು ಇದರಿಂದ ನಿಶ್ಚಿತವಾಗಿದೆ ಅಂತ ಕಲಬುರಗಿ ರೇಲ್ವೆ ಬಳಕೆದಾರ ಆನಂದ ದೇಶಪಾಂಡೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios