ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ನಾಯಿಗಳ ಭಯದಿಂದ ನುಗ್ಗಿದ ಮುಳ್ಳುಹಂದಿಯೊಂದು, ನಾಲ್ಕನೇ ಮಹಡಿಯಿಂದ ಕೆಳಕ್ಕೆ ಜಿಗಿದು ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಯತ್ನಿಸಿದರೂ, ಭಯಭೀತಗೊಂಡ ಪ್ರಾಣಿ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದೆ.

ಪುತ್ತೂರು: ನೆಹರೂ ನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಧುಮುಕಿದ ಮುಳ್ಳು ಹಂದಿಯೊಂದು ಮೈದಾನದಲ್ಲಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಭಯದಿಂದ ಮುದುಡಿ ಕೂತಿದ್ದ ಮುಳ್ಳುಹಂದಿ

ನಾಯಿಗಳನ್ನು ಕಂಡು ಮುಳ್ಳುಹಂದಿ ಎಲ್ಲಿಂದಲೋ ಓಡಿಕೊಂಡು ಬಂದು ಕಾಲೇಜು ಆವರಣ ಪ್ರವೇಶಿಸಿದೆ. ಕೆಲವೇ ಹೊತ್ತಿನಲ್ಲಿ ಅದು ಕಾಲೇಜು ಕಟ್ಟಡದೊಳಗೆ ಪ್ರವೇಶಿಸಿ ಮೆಟ್ಟಿಲು ಹತ್ತುತ್ತ ೩ನೇ ಮಹಡಿ ತಲುಪಿತ್ತು. ಮೆಟ್ಟಿಲ ಮೇಲೆ ಭಯದಿಂದ ಮುದುಡಿ ಕೂತಿದ್ದ ಮುಳ್ಳುಹಂದಿಯನ್ನು ಕಂಡು ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಕಿಟಕಿಯೊಳಗೆ ತೂರಿ ಕೆಳಕ್ಕೆ ಜಂಪ್

ಇಲಾಖೆಯ ಸಿಬ್ಬಂದಿ, ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರ ನೇತೃತ್ವದಲ್ಲಿ ಬಂದು ಮುಳ್ಳು ಹಂದಿಯನ್ನು ರಕ್ಷಿಸಲು ಯತ್ನಿಸಿದರು. ಭಯಗೊಂಡ ಮುಳ್ಳು ಹಂದಿ ಮೆಟ್ಟಿಲು ಹತ್ತುತ್ತಾ ಇನ್ನೊಂದು ಮಹಡಿಗೆ ಹೋಗಿದ್ದಲ್ಲದೆ, ಕಿಟಕಿಯೊಳಗೆ ತೂರಿ ಕೆಳಕ್ಕೆ ಜಿಗಿದಿದೆ. ನೆಲದ ಮೇಲೆ ಬಿದ್ದ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿದೆ.

ಇದನ್ನೂ ಓದಿ: 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಕಿರಣ್, ನಿಯಮ ಪ್ರಕಾರ ಪೋಸ್ಟ್ ಮಾರ್ಟಂ ಮಾಡಿ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: