ಶಿವಮೊಗ್ಗ(ಮೇ.20): ನಗರ ಪಾಲಿಕೆಗೆ ಮಂಗಳವಾರ ಇನ್ನೊಂದು ಕರಾಳ ದಿನದಂತಾಗಿದ್ದು, ಇದೀಗ 10 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಎಂಟು ಮಂದಿ ಜಿಲ್ಲಾಡಳಿತದ ಕ್ವಾರಂಟೈನ್‌ನಲ್ಲಿ ಇದ್ದವರಾಗಿದ್ದು, ಇನ್ನಿಬ್ಬರಲ್ಲಿ ಒಬ್ಬರು ರಾರ‍ಯಂಡಮ್‌ ಟೆಸ್ಟ್‌ಗೆ ಒಳಗಾದಾಗ ಸೋಂಕು ಪತ್ತೆಯಾದರೆ, ಇನ್ನೊಬ್ಬ ಮಹಿಳೆ ಸರ್ಕಾರಿ ಕೇಂದ್ರದಲ್ಲಿದ್ದು, ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಎಂದು ಗೊತ್ತಾಗಿದೆ.

ಕ್ವಾರಂಟೈನ್‌ನಲ್ಲಿದ್ದ 8 ಮಂದಿಯಲ್ಲಿ ಐವರು ಮುಂಬೈಯಿಂದಲೂ, ಇಬ್ವರೂ ಕೇರಳದಿಂದಲೂ ಹಾಗೂ ಒಬ್ಬರು ಆಂಧ್ರದಿಂದಲೂ ಬಂದವರು. ಉಳಿದ ಇಬ್ಬರಲ್ಲಿ ಒಬ್ಬರು ಶಿಕಾರಿಪುರ ಮತ್ತು ಇನ್ನೊಬ್ಬ ಶಿವಮೊಗ್ಗ ತಾಲೂಕಿನ ಗ್ರಾಮವೊಂದರಿಂದ ಬಂದವರಾಗಿದ್ದಾರೆ.

ಪ್ರಾಥಮಿಕ ಸಂಪರ್ಕದ 18 ಜನ ಕ್ವಾರಂಟೈನ್‌:

ಮಂಗಳವಾರ ಪ್ರಕಟಗೊಂಡ 10 ಪಾಸಿಟಿವ್‌ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಸದ್ಯ 18 ಮಂದಿಯನ್ನು ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಮಾಡಲಾಗಿದೆ. ಇವರ ಕುಟುಂಬಸ್ಥರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಸೋಂಕಿತರಿದ್ದ ಕ್ವಾರಂಟೈನ್‌ಗಳನ್ನು ಬಂದ್‌ ಮಾಡಲಾಗಿದೆ. ಇನ್ನೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ತನಿಖೆ ನಡೆಸಲಾಗುತ್ತಿದ್ದು, ಸಂಪರ್ಕ ಹೇಗೆಂಬ ಕುರಿತು ಪತ್ತೆ ಹಚ್ಚಲಾಗುತ್ತಿದೆ. ಶಿಕಾರಿಪುರದಿಂದ ಬಂದ ಮಹಿಳೆ ಸರ್ಕಾರಿ ಇನ್‌ಸ್ಟಿಟ್ಯೂಟನ್‌ನಲ್ಲಿದ್ದು, ಸದ್ಯಕ್ಕೆ ಈ ಇನ್‌ಸ್ಟಿಟ್ಯೂಟ್‌ನ್ನು ಬಂದ್‌ ಮಾಡಲಾಗಿದೆ.

3 ಕಂಟೈನ್ಮೆಂಟ್‌ ಜೋನ್‌:

ಈ ಹತ್ತು ಪ್ರಕರಣ ಹೊರ ಬರುತ್ತಿದ್ದಂತೆ ಜಿಲ್ಲೆಯಲ್ಲೀಗ ಮೂರು ಕಂಟೈನ್ಮೆಂಟ್‌ ಜೋನ್‌ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಶಂಕೆ ಇರುವ ಕೆಲ ವ್ಯವಹಾರ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಈ ಮೊದಲು ತೀರ್ಥಹಳ್ಳಿಯ ಹಳ್ಳಿಬೈಲು ಗ್ರಾಮ ಕಂಟೈನ್ಮೆಂಟ್‌ ಜೋನ್‌ ಮಾಡಲಾಗಿತ್ತು. ಇದೀಗ ಶಿವಮೊಗ್ಗ ತಾ ಬಾಳೆಕೊಪ್ಪ ಹಾಗೂ ಶಿಕಾರಿಪುರದ ತರಲಘಟ್ಟಗ್ರಾಮ ಕಂಟೈನ್ಮೆಂಟ್‌ ಜೋನ್‌ ಆಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

810 ಜನರ ಕೊರೋನಾ ಟೆಸ್ಟ್‌ :

ಹೊರರಾಜ್ಯದಿಂದ ಜಿಲ್ಲೆಗೆ ಬಂದವರ ಸಂಖ್ಯೆ 976 ಆಗಿದ್ದು, ಇದರಲ್ಲಿ 810 ಜನರಿಗೆ ಸ್ವಾ್ಯಬ್‌ ಟೆಸ್ಟ್‌ ಮಾಡಲಾಗಿದೆ. ಇವರೆಲ್ಲರ ಪರೀಕ್ಷೆಯ ವರದಿ ಪಡೆದುಕೊಳ್ಳಲಾಗಿದೆ. ಉಳಿದ 166 ಜನರ ಪರೀಕ್ಷೆ ಫಲಿತಾಂಶ ಹಂತ ಹಂತವಾಗಿ ಬರಲಿದೆ. ಸೋಮವಾರ ಸಂಜೆ ಹೊರರಾಜ್ಯದಿಂದ ಬಂದಂತಹ ಇತರೆ 33 ಜನರನ್ನು ಸ್ವಾ್ಯಬ್‌ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ ಹಲವು ಪೊಲೀಸರು ಕ್ವಾರಂಟೈನ್‌

ಶಿಕಾರಿಪುರದ ಅಪ್ರಾಪ್ತ ಬಾಲಕಿಯ ಕೊರೋನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿ ಸೇರಿ ಹಲವು ಪೊಲೀಸ್‌ ಸಿಬ್ಬಂದಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಶಿಕಾರಿಪುರ ಸಿಪಿಐ ಸೇರಿ ಹಲವು ಅಧಿಕಾರಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. 

ಕಾಫಿ ನಾಡಿಗೂ ಎಂಟ್ರಿ ಕೊಟ್ಟ ಕೊರೋನಾ ಹೆಮ್ಮಾರಿ..!

ಆರಂಭದಲ್ಲಿ ಇದೊಂದು ಅತ್ಯಾಚಾರ ಪ್ರಕರಣವಾಗಿತ್ತು. ಹೀಗಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಪ್ರಕರಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಬಳಿಕ ಸಂತ್ರಸ್ಥೆಯಲ್ಲಿಯೇ ಕೊರೋನಾ ಪಾಸಿಟಿವ್‌ ಪತ್ತೆಯಾದ ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದೇ ರೀತಿ ಶಿವಮೊಗ್ಗ ತಾ ಬಾಳೆಕೊಪ್ಪ ಗ್ರಾಮದ ಹಾಲಿನ ವ್ಯಾಪಾರಿಯ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಕುರಿತು ತೀವ್ರ ಶೋಧ ನಡೆಸಿದ್ದು, ಸದ್ಯ ಗೋಪಾಳದ ಮಾಲ್‌ವೊಂದನ್ನು ಬಂದ್‌ ಮಾಡಲಾಗಿದೆ. ವರದಿ ಬಂದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆ ಲಿಸ್ಟ್‌ನಲ್ಲಿ ಸೇರುವುದಿಲ್ಲ: ಡಿಸಿ ಶಿವಕುಮಾರ್‌

ರಾಜ್ಯ ಮಟ್ಟದಲ್ಲಿ ಪ್ರಕಟಿಸಲಾದ ಮೀಡಿಯಾ ಬುಲೆಟಿನ್‌ನಲ್ಲಿ ಶಿವಮೊಗ್ಗದಲ್ಲಿ 12 ಪಾಸಿಟಿವ್‌ ಪ್ರಕರಣ ಎಂದು ಹೇಳಲಾಗಿತ್ತು. ಆದರೆ ಇದರಲ್ಲಿ 10 ಮಾತ್ರ ಶಿವಮೊಗ್ಗಕ್ಕೆ ಸಂಬಂಧಿಸಿದ್ದು. ಇನ್ನೆರಡು ಪ್ರಕರಣ ಬೇರೆ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಅದು ಶಿವಮೊಗ್ಗ ಜಿಲ್ಲೆ ಲಿಸ್ಟ್‌ನಲ್ಲಿ ಸೇರುವುದಿಲ್ಲ . ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಇಬ್ಬರು ಮೂಲತಃ ಶಿವಮೊಗ್ಗ ಜಿಲ್ಲೆಯವರೆಂದು ಹೇಳಲಾಗುತ್ತಿದ್ದರೂ ಬೇರೆ ಜಿಲ್ಲೆಯ ಆಸ್ಪತ್ರೆಯಲ್ಲಿ ಅವರು ದಾಖಲಾಗಿರುವುದರಿಂದ ಇವರಿಬ್ಬರ ಪ್ರಕರಣ ಶಿವಮೊಗ್ಗದ ಕೊರೋನಾ ಪಾಸಿಟಿವ್‌ ಆಗಿ ಪರಿಗಣಿಸಲಾಗಿಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.