ಕಾಫಿ ನಾಡಿಗೂ ಎಂಟ್ರಿ ಕೊಟ್ಟ ಕೊರೋನಾ ಹೆಮ್ಮಾರಿ..!
ಇಷ್ಟು ದಿನಗಳ ಕಾಲ ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಿಗೆ ಕೊರೋನಾ ವೈರಸ್ ವಕ್ಕರಿಸಿದೆ. ಜಲ್ಲೆಯ ಇಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.20): ದೇಶಕ್ಕೆ 57 ದಿನಗಳ ಹಿಂದೆ ಕಾಲಿಟ್ಟ ಕೊರೋನಾ ಮಹಾಮಾರಿಯ ಕೆಂಗಣ್ಣಿನ ವಕ್ರದೃಷ್ಟಿ ಈಗ ಮಲೆನಾಡಿನ ಮೇಲೂ ಬಿದ್ದಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್‌ಬುಲೆಟಿನ್ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಡಿಸಿದೆ. ಇದು, ಕಾಫಿಯ ನಾಡಿನ ಪಾಲಿಗೆ ಬ್ಯಾಡ್ ಡೇ. ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಈ ಸೋಂಕು ಕಂಡು ಬಂದಿದ್ದರೆ, ತರೀಕೆರೆಯಲ್ಲಿ ಗರ್ಭೀಣಿ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದಾಗಿ ಮಲೆನಾಡಿನ ಜನರಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಹಸಿರು ವಲಯದಲ್ಲಿದ್ದ ನೆರೆಯ ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿತ್ತು. ಇಂದೋ, ನಾಳೆ ಈ ಮಹಾಮಾರಿಯ ಕಣ್ಣು ಪಶ್ಚಿಮಘಟ್ಟದ ತಪ್ಪಿನ ಕಾಫಿನಾಡಿನ ಮೇಲೂ ಬೀಳಲಿದೆ ಎಂದು ಸಂದೇಹ ಪಟ್ಟಿದ್ದರು. ಅದು ಮಂಗಳವಾರ ಘಟಿಸಿತು. ಜಿಲ್ಲೆಯ ಇಬ್ಬರಲ್ಲಿ ಕೊರೋನಾ ಸೋಂಕು ಇರುವ ಸುದ್ದಿ ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯಲ್ಲಿ ಕಾಡ್ಗಿಚ್ಚು ಹಬ್ಬಿಸಿ ಜನರನ್ನು ಮತ್ತಷ್ಟುಆತಂಕಕ್ಕೀಡು ಮಾಡಿದೆ.
ಹೋಂ ಕ್ವಾರಂಟೈನ್ ಉಲ್ಲಂಘನೆ: ಐವರು ಸರ್ಕಾರಿ ಕ್ವಾರಂಟೈನ್‌ಗೆ ಶಿಫ್ಟ್
27 ವರ್ಷದ ಗರ್ಭಿಣಿ ಮಹಿಳೆ, ಇತ್ತೀಚೆಗೆ ಮುಂಬೈನಿಂದ ಆಗಮಿಸಿದ್ದರು ಎಂದು ಹೇಳಲಾಗುತ್ತಿದ್ದು, ಅವರನ್ನು ಮೇ 16ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಗಂಟಲ ದ್ರವ ಮಾದರಿಯನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಂಗಳವಾರ ಇದರ ಫಲಿತಾಂಶ ಪಾಸಿಟಿವ್ ಬಂದಿದೆ.
ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 43 ವರ್ಷದ ವೈದ್ಯರೊಬ್ಬರು ಕಳೆದ 20 ದಿನಗಳ ಹಿಂದೆ ಬೆಂಗಳೂರು, ಕೊಡಗು ಜಿಲ್ಲೆಗಳಿಗೆ ಹೋಗಿ ಬಂದಿರುವುದಲ್ಲದೆ, ಆಸ್ಪತ್ರೆಗೆ ಬಂದಿರುವ ಸುಮಾರು 500ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇವರ ಟ್ರಾವೆಲ್ ಹಿಸ್ಟರಿ ಇದೀಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಡಿಸಿ ಭೇಟಿ: 5 ಕಿ.ಮೀ.ವ್ಯಾಪ್ತಿ ಬಫರ್ ಜೋನ್
ಮೂಡಿಗೆರೆ ಹಾಗೂ ತರೀಕೆರೆ ತಾಲೂಕು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ವೈರಾಣು ಸೋಂಕಿತ ವ್ಯಕ್ತಿಗಳು ನೆಲೆಸಿರುವ ಮನೆಯ ಸುತ್ತಮುತ್ತಲ 100 ಮೀಟರ್ ಪ್ರದೇಶವನ್ನು ನಿಯಂತ್ರಿತ ವಲಯ ಹಾಗೂ ಸುತ್ತಲ 5 ಕಿ.ಮೀ. ಪ್ರದೇಶವನ್ನು ಬಫರ್ ವಲಯ ಎಂಬುದಾಗಿ ಘೋಷಿಸಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಸೋಂಕಿತರಿರುವ ಪ್ರದೇಶ ಸೀಲ್‌ಡೌನ್:
ಕೊರೋನಾ ಸೋಂಕಿತರಿಗೆ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕವಾಗಿ ತೆರೆದಿರುವ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರಿದ್ದ ಮನೆಯ ಬಡಾವಣೆಯಲ್ಲಿ ಜನರ ಓಡಾಟ ನಿಯಂತ್ರಿಸಲು ಸೀಲ್‌ಡೌನ್ ಮಾಡಲಾಗಿದೆ. ಈ ಭಾಗದ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಆದರೆ, ತರೀಕೆರೆ ತಾಲೂಕು ಕೇಂದ್ರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜನ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಮಧ್ಯಾಹ್ನದ ವೇಳೆಗೆ ತರೀಕೆರೆ ಪಟ್ಟಣ ಬಿಕೋ ಎನ್ನುವಂತಿತ್ತು.
ತಾಲೂಕು ಸೋಂಕಿತ ವ್ಯಕ್ತಿ ವಿವರ
ಮೂಡಿಗೆರೆ ಕ್ರಮ ಸಂಖ್ಯೆ- 1295
ತರೀಕೆರೆ ಕ್ರಮ ಸಂಖ್ಯೆ- 1296