ಮಂಗಳೂರು(ಜು.01): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮೇರೆ ಮೀರಿ ಸಮುದಾಯಕ್ಕೆ ಹರಡುತ್ತಿರುವುದು ಒಂದೆಡೆಯಾದರೆ ಇದೀಗ ಸಾಮೂಹಿಕವಾಗಿ ವೈದ್ಯರೂ ಈ ಮಹಾಮಾರಿಗೆ ತುತ್ತಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಮಂಗಳವಾರ ಒಂದೇ ದಿನ 10 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ ಹಲವು ಮಂದಿ ವೈದ್ಯರು, ದಾದಿಯರು ಸೋಂಕಿಗೆ ತುತ್ತಾಗುವ ಭೀತಿಯೂ ಎದುರಾಗಿದೆ.

ಎಲ್ಲ ಅಪಾಯಗಳ ನಡುವೆಯೂ ಕೋವಿಡ್‌ ವಾರಿಯರ್‌ಗಳಾಗಿ ಮುಖ್ಯ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೇ ದೊಡ್ಡ ಮಟ್ಟದಲ್ಲಿ ಸೋಂಕಿಗೆ ಈಡಾಗುತ್ತಿರುವುದು ಮುಂದಿನ ದಿನಗಳಲ್ಲಿ ಜಟಿಲ ಸಮಸ್ಯೆಗೆ ಕಾರಣವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'

ಕೋವಿಡ್‌ ಆಸ್ಪತ್ರೆ ವೈದ್ಯಗೇ ಸೋಂಕು: ತೀವ್ರ ವಿಷಾದಕರ ಪ್ರಕರಣವೊಂದರಲ್ಲಿ ಜಿಲ್ಲಾ ಕೋವಿಡ್‌ ವೆನ್ಲಾಕ್‌ ಆಸ್ಪತ್ರೆಯ ಮುಖ್ಯ ವೈದ್ಯರಿಗೇ ಸೋಂಕು ತಗುಲಿದೆ. ರೋಗಿಗಳ ಚಿಕಿತ್ಸೆಯಲ್ಲಿ ಹಗಲಿರುಳು ತೊಡಗಿಕೊಂಡಿದ್ದ ಈ ವೈದ್ಯರಿಗೆ ಪಾಸಿಟಿವ್‌ ಬಂದಿದ್ದರಿಂದ ಕೋವಿಡ್‌ ಆಸ್ಪತ್ರೆಯ ಅನೇಕ ವೈದ್ಯರು, ದಾದಿಯರು ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಜಿಲ್ಲೆಯ ಪ್ರಮುಖ 2-3 ಖಾಸಗಿ ಆಸ್ಪತ್ರೆಯ 8-9 ವೈದ್ಯರಿಗೂ ಸೋಂಕು ದೃಢಪಟ್ಟಿದ್ದು, ಈ ಆಸ್ಪತ್ರೆಗಳ 60ಕ್ಕೂ ಅಧಿಕ ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪ್ರತಿದಿನವೂ ವೈದ್ಯರ ಸಂಪರ್ಕಕ್ಕೆ ಹಲವು ಮಂದಿ ಬರುವುದರಿಂದ ಸಾರ್ವಜನಿಕರಿಗೂ ಸೋಂಕು ಹರಡಿರುವ ತೀವ್ರ ಆತಂಕ ಸೃಷ್ಟಿಯಾಗಿದೆ.

ಮೂಲ ಹುಡುಕೋದೆ ಕಷ್ಟ!

ಒಂದೇ ದಿನ 10 ವೈದ್ಯರಿಗೆ ಸೋಂಕು ಹರಡಿದ್ದು ಕೊರೋನಾ ವಾರಿಯರ್‌ಗಳಾದ ಇತರ ಸಿಬ್ಬಂದಿಯ ಜಂಘಾಬಲ ಉಡುಗಿದೆ. ಸಮುದಾಯದಲ್ಲಿ ತೀವ್ರಗತಿಯಲ್ಲಿ ಸೋಂಕು ಹರಡುತ್ತಿರುವಾಗ ವೈದ್ಯರೇ ಸೋಂಕಿಗೆ ತುತ್ತಾದರೆ ಪರಿಸ್ಥಿತಿ ಎದುರಿಸುವುದು ಹೇಗೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ದೊಂದಿಗೆ ವಿಷಾದ ವ್ಯಕ್ತಪಡಿಸಿದರು. ಸಮುದಾಯಕ್ಕೆ ಸೋಂಕು ಹರಡಿದ ಮೇಲೆ ಪ್ರತಿ ರೋಗಿಯ ಪ್ರಯಾಣ ಇತಿಹಾಸ, ಅವರ ಸಂಪರ್ಕದಲ್ಲಿರುವವರನ್ನು ಕಂಡುಹಿಡಿಯುವುದು ಕಷ್ಟಸಾಧ್ಯವಾಗಿದೆ. ಮುಂದೆ ಪರಿಸ್ಥಿತಿ ಇನ್ನಷ್ಟುಹದಗೆಡುವ ಸಾಧ್ಯತೆಯಿದೆ ಎಂದೂ ಹೇಳಿದ್ದಾರೆ.

2 ಹೊಟೇಲ್‌ಗಳೂ ಸೀಲ್‌ಡೌನ್‌

ನಗರದ ಹೆಸರಾಂತ ಮೀನು ಹೊಟೇಲ್‌ನ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಹೊಟೇಲ್‌ ಸೀಲ್‌ಡೌನ್‌ ಮಾಡಲಾಗಿದೆ. ಈ ಹೊಟೇಲ್‌ ಗ್ರಾಹಕರಿಗೆ ಈಗ ಸೋಂಕಿನ ಆತಂಕ ಹುಟ್ಟಿದೆ. ಇದೇ ರೀತಿ ಅಳಕೆ ಪ್ರದೇಶದ ಹೊಟೇಲ್‌ವೊಂದರ ಸಿಬ್ಬಂದಿಯೂ ಸೋಂಕಿಗೆ ತುತ್ತಾಗಿದ್ದು, ಅದನ್ನೂ ಸೀಲ್‌ಡೌನ್‌ ಮಾಡಲಾಗಿದೆ.