'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'
ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ಕುರಿತು ಕೂಡಲೆ ಆದೇಶ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಮಂಗಳೂರು(ಜು.01): ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ಕುರಿತು ಕೂಡಲೆ ಆದೇಶ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಅನೇಕ ಕೋವಿಡ್ ಆಸ್ಪತ್ರೆಗಳಿಗೆ ಬರುವ ಕೊರೋನಾ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವಂತೆ ಕಳುಹಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 4,500ರಿಂದ 5 ಸಾವಿರ ರು.ಗಳಷ್ಟುನೀಡಬೇಕಾಗುತ್ತದೆ. ವೆಂಟಿಲೇಟರ್‌ಗೆ 15 ಸಾವಿರ ರು. ಕೊಡಬೇಕು. ಬಡವರಿಗೆ ಇಷ್ಟುಖರ್ಚು ಮಾಡಲು ಅಸಾಧ್ಯ. ಆದ್ದರಿಂದ ಖಾಸಗಿ ಆಸ್ಪತ್ರೆ ಸೇರುವವರಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸಬೇಕು, ಇಲ್ಲವೇ ಸರ್ಕಾರವೇ ಅಂಥವರ ವೆಚ್ಚ ಭರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ದಕ್ಷಿಣ ಕನ್ನಡದಲ್ಲಿ 44 ಮಂದಿಗೆ ಕೊರೋನಾ, 17 ಡಿಸ್ಚಾರ್ಜ್
ಕೊರೋನಾ ಎದುರಿಸಲು ರಾಜ್ಯದಲ್ಲಿ 25 ಸಾವಿರ ಬೆಡ್‌ಗಳು ಸಿದ್ಧವಾಗಿವೆ ಎಂದು ಈ ಹಿಂದೆಯೇ ಹೇಳಿದ್ದರು. ಇದೀಗ 12 ಸಾವಿರ ಕೊರೋನಾ ಪ್ರಕರಣಗಳಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಡಿಸ್ಚಾಜ್‌ರ್ ಆಗಿರುವ ಸಮಯದಲ್ಲಿ ಬೆಡ್ ಖಾಲಿಯಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ. ಇದು ಖಾಸಗಿ ಆಸ್ಪತ್ರೆಗಳಿಗೆ ಸಹಾಯ ಮಾಡುವ ಯತ್ನ ಎಂದು ಆರೋಪಿಸಿದ ಐವನ್ ಡಿಸೋಜ, ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರದ ನಡುವೆ ಹೊಂದಾಣಿಕೆ ನಡೆದಿದೆಯಾ ಎಂದು ಪ್ರಶ್ನಿಸಿದರು.
ಕೊರೋನಾ ಸಂಖ್ಯೆ ಹೆಚ್ಚುತ್ತಿದ್ದಂತೆ ಇನ್ನೇನೂ ಮಾಡಲಾಗದು ಎಂದು ಸರ್ಕಾರ ಕೈಚೆಲ್ಲಿದಂತೆ ಕಾಣುತ್ತಿದೆ. ಯಾವುದೇ ಪೂರ್ವ ತಯಾರಿ ಮಾಡದಿರುವುದೇ ಈ ವೈಫಲ್ಯಕ್ಕೆ ಕಾರಣ. ಆರಂಭದಲ್ಲಿ ಇತರ ರಾಜ್ಯಗಳಿಂದ ಆಗಮಿಸಿದವರನ್ನು ಸರಿಯಾಗಿ ಕ್ವಾರಂಟೈನ್ ಮಾಡದೆ ಇದ್ದುದರಿಂದ ಈಗ ಸಮುದಾಯಕ್ಕೆ ಸೋಂಕು ಹರಡಿದೆ. ಅಗತ್ಯ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳದೆ ಈಗ ಸಂಡೇ ಲಾಕ್‌ಡೌನ್ ಮಾಡಿದರೆ ಏನು ಪ್ರಯೋಜನ, ಯಾವ ಚಿಂತನೆ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐವನ್ ಡಿಸೋಜ ಪ್ರಶ್ನಿಸಿದರು.