ಮೈಸೂರು (ಮೇ.27):   ಉಸ್ತುವಾರಿ ಸಚಿವ ಸೋಮಶೇಖರ್ ಮೈಸೂರು ಗ್ರಾಮಾಂತರ ಭಾಗಕ್ಕೆ ಭೇಟಿ ನೀಡಿದ್ದರು‌. ಗ್ರಾಮಾಂತರ ಭಾಗದಲ್ಲಿ‌ ಸೋಂಕು ಹೆಚ್ಚಳ ಆಗಿದೆ ಎನ್ನುವುದು ಈ ವೇಳೆ ಕಂಡು ಬಂದಿದ್ದರಿಂದ ಜನಪ್ರತಿನಿಧಿಗಳ ಸಲಹೆ ಪಡೆದು ಜಿಲ್ಲಾಧಿಕಾರಿಗೆ ಸೂಚನೆ ನೀಡಿ 10 ದಿನ ಕಂಪ್ಲೀಟ್ ಲಾಕ್‌ಡೌನ್ ಮಾಡಲು ತಿಳಿಸಿದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರತಾಪ  ಸಿಂಹ  ಮೈಸೂರಲ್ಲಿ ಕಂಪ್ಲೀಟ್ ಲಾಕ್‌ಡೌನ್ ಇರಲಿದ್ದು, ವಾರದಲ್ಲಿ ಎರಡು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ.  ಈವರೆಗಿನ ಲಾಕ್‌ಡೌನ್ ವ್ಯವಸ್ಥೆಯಲ್ಲಿ ನಮಗೆ ಸರಿಯಾದ ನಿಯಂತ್ರಣ ಆಗಿಲ್ಲ. ಇದಕ್ಕಾಗಿ ಕಂಪ್ಲೀಟ್ ಲಾಕ್‌ಡೌನ್ ಅನಿವಾರ್ಯ ಆಗಿದೆ. ಈ ಲಾಕ್‌ಡೌನ್‌ನಲ್ಲಿ ಜನ ಹೊರಗಡೆ ಬರೋದು ಬೇಡ ಎಂದರು.

ಇನ್ನು ಹೊರಕ್ಕೆ ಬಂದು ಪೊಲೀಸರು ಹೊಡೆದರು ಅಥವಾ ತಡೆದರೂ ಅಂತ ಆರೋಪ ಮಾಡಬೇಡಿ ಎಂದು   ಸುಮ್ಮನೆ ದೂರು ಕೊಟ್ಟು ಸಮಯ ವ್ಯರ್ಥ ಮಾಡಬೇಡಿ ಎಂದ ಸಂಸದರು ಪರೋಕ್ಷವಾಗಿ ಪೊಲೀಸರು ಹೊಡೆದರೂ ನಾವು ಬರಲ್ಲ ಅಂತ ಸಂದೇಶ ನೀಡಿದರು.

ಮೈಸೂರು : ಮೇ.29 ರಿಂದ ಜೂ.7ರವರೆಗೆ ಕಠಿಣ ಲಾಕ್‌ಡೌನ್ ...

ಪೊಲೀಸರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ಮಾಡಬೇಡಿ. ಮೈಸೂರಿಗರು ಇದಕ್ಕೆ ಸಹಕಾರ ಕೊಡ್ತಾರೆ ಅನ್ನುವ ವಿಶ್ವಾಸ ಇದೆ. ಜನರು ಕಂಪ್ಲೀಟ್ ಲಾಕ್‌ಡೌನ್ ಗೆ ಸಹಕಾರ ನೀಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ಹೇಳಿದರು. 
 
ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ :  ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ.  ನಿಮಿಷಕ್ಕೆ 1000KL ಆಕ್ಸಿಜನ್ ಉತ್ಪಾದಿಸುವ ಯೂನಿಟ್ ಇದಾಗಿದೆ. ಅದನ್ನ ಕೆ.ಆರ್.ಆಸ್ಪತ್ರೆ ಅಥವ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಇದಲ್ಲದೆ ಮುಡಾದಿಂದ ತುಳಿಸಿ ದಾಸಪ್ಪ‌ ಆಸ್ಪತ್ರೆಗು ಆಕ್ಸಿಜನ್ ಜನರೇಟರ್ ಯೂನಿಟ್ ಸಿಗಲಿದೆ. ಇನ್ನೊಂದು ತಿಂಗಳಲ್ಲಿ ಮೈಸೂರಿನ ಎಲ್ಲ ತಾಲ್ಲೂಕಿನಲ್ಲು ಆಕ್ಸಿಜನ್ ಜನರೇಟರ್ ಯೂನಿಟ್ ಅಳವಡಿಸಲಾಗುವುದು. ಹೀಗಾಗಿ ಮುಂದಿನ ತಿಂಗಳ ಹೊತ್ತಿಗೆ‌ ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
 
ಸೋಂಕು ಹರಡಲು ಕಾರಣ :  ಟೆಸ್ಟಿಂಗ್ ಕಡಿಮೆ ಮಾಡಿದ್ದು ಕೊರೋನಾ ಸೋಂಕು‌ ಹರಡಲು ಕಾರಣ ಆಯ್ತು. ಇದನ್ನ‌ ಮುಕ್ತವಾಗಿ ನಾನು‌ ಒಪ್ಪಿಕೊಳ್ಳುತ್ತೇನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸ್ವಲ್ಪ ಸೋಂಕು ಹೆಚ್ಚಾಗಲು ಕಾರಣ  ಆಯ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ.  ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್‌ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೆಷನ್ ಬಗ್ಗೆ ಕೂಡ ಜನರಲ್ಲಿ‌ ಗೊಂದಲ ಇತ್ತು. ಇದೆಲ್ಲದರ ಪರಿಣಾಮ ಹಿಂದಿನ ಲಾಕ್‌ಡೌನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದರು. 
 
ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿ ಎತ್ತಾಕೊಂಡು ಬರಬೇಕಾಗುತ್ತದೆ.  ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡುತ್ತೇವೆ. ಯಾರೇ ಆಗಲಿ ಆಸ್ಪತ್ರೆ ಅಥವ ಕೋವಿಡ್ ಸೆಂಟರ್ ಬರಬೇಕು. ಇನ್ನು  ಯಾರು ಸಬೂಬು ಹೇಳುವಂತಿಲ್ಲ ಎಂದರು. 

ವಿಶ್ವನಾಥ್ ವಿರುದ್ಧ ಅಸಮಾಧಾನ :   ಕೊರೋನಾ ನಿಯಂತ್ರಣಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಕಾನೂನು ಬಾಹಿರ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ  ಇದು ಜನಪ್ರತಿನಿಧಿಗಳಿಗೆ ಟಿಎ ಡಿಎ, ಕಾರು ಕೊಡುವಂತಹ ಹುದ್ದೆಯಲ್ಲ. ಇದು ಕೊರೋನಾ ನಿಯಂತ್ರಿಸುವ ಸಲುವಾಗಿ ನಾವೇ ಸೇವೆ ಸಲ್ಲಿಸಲು ಮಾಡಿಕೊಂಡಿರುವ ಟಾಸ್ಕ್. ಆಡಳಿತದಲ್ಲಿ ವೈಫಲ್ಯ ಕಂಡಾಗ ನಾವು ತೆಗೆದುಕೊಂಡಿರೋ ನಿರ್ಧಾರ.  ಜನ ಪ್ರತಿನಿಧಿಗಳು ಜನರಿಗಾಗಿ ದುಡಿಯುವ ಕೆಲಸ ಮಾಡಬೇಕಿದೆ. ಇದಕ್ಕೆ ಸಂಘಸಂಸ್ಥೆಗಳ ಸಹಕಾರ ಇದೆ. ಇದು ನಮ್ಮ ಜವಾಬ್ದಾರಿ ಅಷ್ಟೇ ಎಂದರು. 

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆ ಕಾರಣಕ್ಕೆ ನಾವೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಕೊರೋನಾಗೆ ಕಡಿವಾಣ ಹಾಕಲು, ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದೆವೆ. ಇದನ್ನ ಆರೋಪ ಮಾಡೋದಲ್ಲ, ಸಹಕಾರ ನೀಡಿ. ನಮ್ಮ ಜನರ ಉಳಿವಿಗಾಗಿ ನಾವೇ ಸೇವೆ ಸಲ್ಲಿಸಲು ಮುಂದಾಗಿದ್ದೆವೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.
 
ಆಡಳಿತ ಯಂತ್ರ ದಾರಿ ತಪ್ಪಿದ ಮೇಲೆ ಜನಪ್ರತಿನಿಧಿಗಳಿಗೆ ಜವಬ್ದಾರಿ ಕೊಡಲಾಯಿತು. ಇದನ್ನ ರಾಜ್ಯಮಟ್ಟದಲ್ಲು ಮಾಡಿದ್ದರು. ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲಿಯೂ ಮಾಡಿ‌ ನಮ್ಮನ್ನ ನೇಮಕ‌ ಮಾಡಿದರು. ನಾನು ಹೆಮ್ಮೆಯಿಂದ ಹೇಳ್ತಿನಿ ನಾವು ಜವಬ್ದಾರಿ ವಹಿಸಿಕೊಂಡ ಮೇಲೆ  ಎಲ್ಲವೂ ನಿಯಂತ್ರಣಕ್ಕೆ ಬಂದಿದೆ.  ಸೋರಿಕೆ‌ ತಪ್ಪಿಸಿದ್ದರಿಂದ ಆಕ್ಸಿಜನ್ ಕೊರತೆ ನಿವಾರಣೆ ಆಗಿದೆ. ಈಗಲೂ 37kl ಅಷ್ಟೇ ಆಕ್ಸಿಜನ್ ಬರುತ್ತಿದೆ.
ಚಾಮರಾಜನಗರ ಘಟನೆ ನಂತರ ಸಮಸ್ಯೆಯನ್ನ ಆಲಿಸಲು‌ ಖುದ್ದು ನಾವೇ ಫೀಲ್ಡ್‌ಗೆ ಇಳಿದೆವು. ಅದಕ್ಕಾಗಿ ಸಮಸ್ಯೆಯನ್ನ ಅರಿತು ಕೆಲಸ ಮಾಡಿ ಎಲ್ಲವನ್ನು ತಹಬದಿಗೆ ತಂದಿದ್ದೇವೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona