ಮಂಗಳೂರು(ಜೂ.25): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 2ನೇ ದಿನವೂ ಕೊರೋನಾ ಮರಣ ಮೃದಂಗ ಮುಂದುವರಿದಿದೆ. ಮಂಗಳವಾರ ಉಳ್ಳಾಲ ಆಜಾದ್‌ನಗರ ನಿವಾಸಿ 57 ವರ್ಷದ ಮಹಿಳೆ ಸಾವಿಗೀಡಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.

ಈ ನಡುವೆ ಹೊಸದಾಗಿ 12 ಮಂದಿಗೆ ಕೊರೋನಾ ದೃಢಪಟ್ಟಿದ್ದು, ಇವರಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ಎಸ್‌ಐ ಕೂಡ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಒಂದೇ ದಿನ 45 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆತಂಕದ ನಡುವೆಯೂ ಆಶಾಭಾವನೆ ಮೂಡಿಸಿದೆ.

ಸರ್ಕಾರದ ದಿಟ್ಟ ತೀರ್ಮಾನ, ಚೀನಾ ಮೇಡ್ ವಿದ್ಯುತ್ ಉಪಕರಣ ಬ್ಯಾನ್!

ಉಳ್ಳಾಲ ಆಜಾದ್‌ ನಗರದ 57 ವರ್ಷದ ಮಹಿಳೆ ಈ ಹಿಂದೆ ಬೇಧಿಯ ಕಾರಣದಿಂದಾಗಿ ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ವರದಿ ಪಾಸಿಟಿವ್‌ ಬಂದ ಬಳಿಕ 2 ದಿನಗಳ ಹಿಂದಷ್ಟೆವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಇವರಿಗೆ ಸೋಂಕು ಹರಡಿದ್ದು ಹೇಗೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಇದೀಗ ಮಹಿಳೆ ಮೃತಪಟ್ಟಿರುವುದರಿಂದ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪೊಲೀಸ್‌ ಸೇರಿ 12 ಪಾಸಿಟಿವ್‌: ಆತಂಕದ ಬೆಳವಣಿಗೆಯೊಂದರಲ್ಲಿ ಉಳ್ಳಾಲ ಪೊಲೀಸ್‌ ಠಾಣಾ ಎಸ್‌ಐ ಸೇರಿದಂತೆ 12 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 465ಕ್ಕೆ ಏರಿದೆ.

ಚೀನಾ ಉತ್ಪನ್ನ ಬಹಿಷ್ಕಾರ; ಸದ್ದಿಲ್ಲದೆ ನಡೆದಿದೆ ಕಾರ್ಯತಂತ್ರ

ಬುಧವಾರ ದೃಢಪಟ್ಟಪ್ರಕರಣಗಳ ಪೈಕಿ ನಾಲ್ಕು ಮಂದಿ (29 ವರ್ಷದ ಯುವಕ, 25, 51, 24 ವರ್ಷದ ಮಹಿಳೆಯರು) ಶಾರ್ಜಾದಿಂದ ಬಂದು ಕ್ವಾರಂಟೈನ್‌ ಇದ್ದವರಾಗಿದ್ದರೆ, ಉಳಿದ 8 ಮಂದಿಗೆ ಪ್ರಯಾಣ ಇತಿಹಾಸವೇ ಇಲ್ಲದೆ ಸೋಂಕು ಹರಡಿದೆ. ಮೂಲವೇ ಗೊತ್ತಾಗದೆ ಒಂದೇ ದಿನ ಇಷ್ಟುಮಂದಿಗೆ ಸೋಂಕು ಹರಡಿದ್ದು ಜಿಲ್ಲೆಯಲ್ಲಿ ಇದೇ ಮೊದಲು. ಇವರಲ್ಲಿ ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಪುತ್ತೂರಿನವರು, ಎಲ್ಲರೂ ಪುರುಷರೇ ಆಗಿದ್ದಾರೆ.

ಪ್ರಸ್ತುತ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 154 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ. ಕೋವಿಡ್‌ ಸೋಂಕಿತ ನ್ಯುಮೋನಿಯಾದಿಂದ ಬಳಲುತ್ತಿರುವ 41 ವರ್ಷದ ವ್ಯಕ್ತಿ ಮತ್ತು ಲಿವರ್‌ ಸಮಸ್ಯೆಯಿಂದ ಬಳಲುತ್ತಿರುವ 57 ವರ್ಷದ ಮಹಿಳೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

45 ಮಂದಿ ಡಿಸ್ಚಾರ್ಜ್

ಇದೇ ಮೊದಲ ಬಾರಿಗೆ ಒಂದೇ ದಿನ ದೊಡ್ಡ ಸಂಖ್ಯೆಯಲ್ಲಿ (45 ಮಂದಿ) ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಎರಡು ವರ್ಷದ ಮಗುವಿನಿಂದ ಹಿಡಿದು 61 ವರ್ಷದ ಹಿರಿಯ ನಾಗರಿಕರೊಬ್ಬರು ಕೂಡ ಗುಣಮುಖರಾಗಿದ್ದಾರೆ. ಬಿಡುಗಡೆಗೊಂಡ ಬಹುತೇಕರು ಯುವಕರೇ ಆಗಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 301 ಮಂದಿ ಗುಣಮುಖರಾದಂತಾಗಿದೆ.