ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಹರ್ಕೂರು ಗ್ರಾಮದ ಹಿಂದುಳಿದ ಕೊರಗ ಸಮುದಾಯದ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಭೋಜನ ಸವಿದು, ಸಮಸ್ಯೆಗಳನ್ನು ಆಲಿಸಿದ್ದಾರೆ.

ಬೈಂದೂರು (ಫೆ.20): ಜನಪ್ರತಿನಿಧಿಗಳು ಅಂದಾಕ್ಷಣ ಐಷಾರಾಮಿ ಜೀವನದ ಚಿತ್ರಣ ಕಣ್ಣಮುಂದೆ ಬರುತ್ತದೆ. ಆದರೆ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಮನೆಯಲ್ಲಿ ರಾತ್ರಿ ತಂಗುವ ಮೂಲಕ ಅರ್ಥಪೂರ್ಣ ಗ್ರಾಮ ವಾಸ್ತವ್ಯ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಕೂರು ಗ್ರಾಮದ ಮದುಕೊಡ್ಡು ಎಂಬಲ್ಲಿನ ಕೊರಗ ಸಮುದಾಯದ ಸುರೇಂದ್ರ ಎಂಬುವವರ ಮನೆಯಲ್ಲಿ ಮಂಗಳವಾರ ರಾತ್ರಿ ಶಾಸಕರು ವಾಸ್ತವ್ಯ ಹೂಡಿದ್ದರು. ಮನೆಯವರ ಜೊತೆ ಕುಳಿತು ಆತ್ಮೀಯವಾಗಿ ಭೋಜನ ಸವಿದ ಅವರು, ಸಾಮಾನ್ಯರಲ್ಲಿ ಸಾಮಾನ್ಯರಂತೆ ರಾತ್ರಿ ವಿಶ್ರಾಂತಿ ಪಡೆದರು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ನೀಡಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

ಸಮಸ್ಯೆಗಳ ಆಲಿಕೆ ಮತ್ತು ಸಂವಾದ

ಬರಿ ವಾಸ್ತವ್ಯಕ್ಕೆ ಸೀಮಿತವಾಗದೆ, ಸಮುದಾಯದ ಮುಖಂಡರ ಜೊತೆ ಸುದೀರ್ಘ ಸಂವಾದ ನಡೆಸಿದ ಗಂಟಿಹೊಳೆ ಅವರು ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. "ಕೊರಗ ಸಮುದಾಯವು ಹಿಂದೂ ಸಮಾಜದ ಅವಿಭಾಜ್ಯ ಅಂಗ. ಕಲೆ, ಸಾಹಿತ್ಯ ಮತ್ತು ಪರಂಪರೆಯ ಉಳಿವಿನಲ್ಲಿ ಈ ಸಮುದಾಯದ ಪಾತ್ರ ದೊಡ್ಡದಿದೆ. ಅವರ ನೋವು-ನಲಿವುಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ," ಎಂದು ಶಾಸಕರು ಹೇಳಿದರು.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ತಾ.ಪಂ. ಮಾಜಿ ಅಧ್ಯಕ್ಷೆ ಇಂದಿರಾ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಸುಬ್ಬಣ್ಣ ಶೆಟ್ಟಿ, ಪ್ರಸನ್ನ ಶೆಟ್ಟಿ ಹರ್ಕೂರು ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಶಾಸಕರ ಈ ಸರಳ ನಡೆ ಮತ್ತು ಶೋಷಿತ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಕ್ಷೇತ್ರದಾದ್ಯಂತ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.