ಹೊನ್ನಾಳಿ ಚಂದ್ರಶೇಖರ್

ಶಿವಮೊಗ್ಗ : ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ತಮ್ಮ ಚುನಾವಣಾ ರಾಜಕೀಯದ 12 ನೇ ವಿಧಾನಸಭೆ ಚುನಾವಣೆಗೆ ಸಜ್ಜಾಗಿದ್ದಾರೆ. 50ರ ದಶಕದಿಂದಲೂ ರಾಜಕೀಯದಲ್ಲಿರುವ ಅವರಿಗೆ ಸಾಗರ ಕ್ಷೇತ್ರ ಪ್ರತಿ ಸಲವೂ ಸಿಹಿಯನ್ನೇ ನೀಡಿಲ್ಲ. ಕಹಿಯನ್ನೂ  ಸಮನಾಗಿ ನೀಡಿದೆ. ಪಕ್ಷದ ಸೂಚನೆಯ ಮೇರೆಗೆ ಕಣದಲ್ಲಿರುವ ಕಾಗೋಡು ಅವರಿಗೆ ಬಿಜೆಪಿಯಿಂದ ಹರತಾಳು ಹಾಲಪ್ಪ ಪೈಪೋಟಿ ಒಡ್ಡಿ ದ್ದಾರೆ. 

ವಕೀಲ ಗಿರೀಶ್ ಗೌಡರಿಗೆ ಜೆಡಿ ಎಸ್ ಟಿಕೆಟ್ ನೀಡಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇದೆ. 2013ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಇದ್ದ ಪೂರಕ ಪರಿಸ್ಥಿತಿಗಳು ಸದ್ಯಕ್ಕಂತೂ ಇಲ್ಲ. ಅಂದು ಕ್ಷೇತ್ರದಲ್ಲಿ ಆಡಳಿತ ವಿರೋಧಿ
ಅಲೆ ಇತ್ತು. 2 ಬಾರಿ ಸೋಲು ಕಂಡರೂ ಕ್ಷೇತ್ರಾದ್ಯಂತ ಅರಣ್ಯಹಕ್ಕು ಕಾಯ್ದೆ, ಬಗರ್ ಹುಕುಂ ವಿಷಯಗಳನ್ನಿಟ್ಟುಕೊಂಡು ಓಡಾಡುತ್ತಲೇ ಇದ್ದ ಅವರನ್ನು ಜನತೆ ಮೆಚ್ಚುಗೆಯಿಂದ ನೋಡುತ್ತಿದ್ದರು. ಹಾಗಾಗಿಯೇ ಅವರು ತಮ್ಮ ಚುನಾವಣಾ ರಾಜಕೀ ಯದಲ್ಲಿ ೪೦ ಸಾವಿರ ಮತಗಳ ಅಂತರದ ಅತಿ ದೊಡ್ಡ ಗೆಲುವು ಕಂಡಿದ್ದರು. ಹಾಗಂತ ಈ ಬಾರಿ ಆ ಎಲ್ಲಾ ಮತಗಳು ಕಾಗೋಡು ತಿಮ್ಮಪ್ಪರಿಗೆ ದೊರೆಯುವ ಪರಿಸ್ಥಿತಿಯಂತೂ ಖಂಡಿತಾ ಕ್ಷೇತ್ರದಲ್ಲಿ ಇಲ್ಲ. 

ತೊಡಕುಗಳೇನು: ಈಡಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೇ ಮುಖ್ಯ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಇಬ್ಬರು ಪ್ರಮುಖ ಸ್ಪರ್ಧಿಗಳೂ ಇದೇ ಸಮುದಾಯದವರೇ. ಈ ಸಮುದಾಯದಲ್ಲಿ ಬಹುತೇಕರು ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರು. ಆದರೆ ಸಾರೇಕೊಪ್ಪ ಬಂಗಾರಪ್ಪ ಅವರು ಬಿಜೆಪಿಗೆ ಬಂದಾಗ ಎರಡನೇ ಪೀಳಿಗೆಯ ಈಡಿಗ ಮತದಾರರು ‘ಕಮಲ’ದ ಆಕರ್ಷಣೆಗೆ ಒಳಗಾದರು.

ಅಂದು ಬೇಳೂರು ಗೋಪಾಲಕೃಷ್ಣ ಅವರನ್ನು ಬೆಂಬಲಿಸಿದವರು ಇವರೇ. ಈ ಬಾರಿ ಕಾಗೋಡು ತಿಮ್ಮಪ್ಪ ಅವರ ಜತೆಗೂಡಿರುವ ಬೇಳೂರು ಗೋಪಾಲಕೃಷ್ಣ ಅವರನ್ನು ಆ ಮತದಾ ರರು ಮತ್ತು ಬೆಂಬಲಿಗರೆಲ್ಲಾ ಹಿಂಬಾ ಲಿಸಿದ್ದಾರೆ ಎಂದು ಹೇಳಲಾಗದು. ಏಕೆಂದರೆ ಬೇಳೂರು ನಡೆಯಿಂದ ಅಸಮಾಧಾನ ಗೊಂಡವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸವನ್ನು ಹರತಾಳು ಹಾಲಪ್ಪ ಅವರು  ಮಾಡುತ್ತಿದ್ದಾರೆ.

ಸಾಂಪ್ರ ದಾಯಿಕ ಮತದಾರರು ಹಾಲಪ್ಪ ಅವರ ಕೈಬಿಡುವುದಿಲ್ಲ ಎಂದ ವಿಶ್ವಾಸ ಬಿಜೆಪಿಯದ್ದು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು  ಜಿಲ್ಲೆಗೆ ಭೇಟಿ ನೀಡಿದ ನಂತರ ಬಿಜೆಪಿ ಮತ ಗಳಿಕೆ ಖಂಡಿತಾ ಹೆಚ್ಚಾಗಲಿದೆ ಎಂಬ ಆಸೆಯೂ ಇದೆ.  ಮೋದಿ ಅವರು ಬಿಟ್ಟ ಅಡಿಕೆ ಅಸ್ತ್ರದಿಂದಾಗಿ ಅಡಿಕೆ ಬೆಳೆಗಾರರು ಸಂತಸಗೊಂಡಿರುವುದು ಇತ್ತೀಚಿನ ಬೆಳವಣಿಗೆ.

ಹರತಾಳು ಹಾಲಪ್ಪ ಅವರು ಕ್ಷೇತ್ರಕ್ಕೆ ಹೊಸಬರೇನೂ ಇಲ್ಲ. ಈಗ ಸಾಗರ ಕ್ಷೇತ್ರದ ಭಾಗವೇ ಆಗಿರುವ ಹೊಸನಗರದಿಂದ ಒಮ್ಮೆ  ಶಾಸಕರಾಗಿದ್ದರು. ಜತೆಗೆ ಕಾಗೋಡು ತಿಮ್ಮಪ್ಪ ಅವರಿಗೆ ಗೊತ್ತಾಗದಂತೆ ಅವರನ್ನು ಕಾಡಿದ ಹಲವು ಅಂಶಗಳನ್ನು ಪೂರಕ ಮಾಡಿ ಕೊಳ್ಳಲು ಶ್ರಮಿಸುತ್ತಿದ್ದಾರೆ. ‘ಭೂಮಿ ಭಾಗ್ಯ ಕೊಡಿ’ ಎಂದು 60ರ ದಶಕದಿಂದಲೂ ಮಾತನಾಡುತ್ತಿರುವ ಕಾಗೋಡು ತಿಮ್ಮಪ್ಪ ಅವರು ಕಳೆದೊಂದು ದಶಕದಿಂದ ಇದೇ ವಿಷಯದಲ್ಲಿ ಜೀವನದ ಅಂತಿಮ ಗುರಿ ಎಂಬಂತೆ ಕೆಲಸ ಮಾಡಿದರು. ಅದನ್ನು ಗೌರವಿಸಿ
ಕ್ಷೇತ್ರದ ಉಳಿದೆಡೆ ಕೆಲಸ ಮಾಡಬೇಕಾದ ಕಾಂಗ್ರೆಸ್‌ನ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ ಎಂಬ ಜನರ ಅಸಮಾಧಾನಗಳು ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ಬರಲೇ ಇಲ್ಲ. 

ಆದರೂ ಕಾಗೋಡು ತಿಮ್ಮಪ್ಪ ಅವರ ಭೂಮಿ ಹೋರಾಟ, ಮುಳುಗಡೆ ಸಂತ್ರಸ್ತರ ಪರ ಹೋರಾಟಗಳು ಕೊನೆಯ ಚುನಾವಣೆ ಯಲ್ಲಿ ಅವರ ಕೈ ಹಿಡಿಯುತ್ತವೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ. 

ಬೇಳೂರು ಫ್ಯಾಕ್ಟರ್: ಬಿಜೆಪಿ ಟಿಕೆಟ್ ಸಿಗದೇ ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೇಳೂರು ಗೋಪಾಲಕೃಷ್ಣ ಅವರ  ಆಗಮನವನ್ನು ಹೇಗೆ ಸ್ವೀಕರಿಸಬೇಕು ಎಂದು ಇನ್ನೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಗೊಂದಲದಲ್ಲಿದ್ದಾರೆ. ಒಂದು ಕಾಲದಲ್ಲಿ ಪುಂಖಾನುಪುಂಖ ಟೀಕೆಗಳನ್ನು ಮಾಡುತ್ತಿದ್ದ ವ್ಯಕ್ತಿ ಈಗ ಎದುರಿಗೆ ಬಂದು ಕೈ ಕುಲುಕಿದರೆ ಕಸಿವಿಸಿ ಅನುಭವಿಸುವ ಪರಿಸ್ಥಿತಿ ಇದು.

ಜತೆಗೆ ಕಾಗೋಡು ತಿಮ್ಮಪ್ಪ ಅವರ ಉತ್ತರಾಧಿಕಾರಿ ಗಳೆಂದು ಹೇಳಿಕೊಳ್ಳುತ್ತಿದ್ದವರಿಗಂತೂ ತೀವ್ರ ಇರಸುಮುರುಸು. ಕಾಗೋಡು ಅವರ ನಂತರ ಬೇಳೂರು ಅವರೇ ಕಾಂಗ್ರೆಸ್ ಉತ್ತರಾಧಿಕಾರಿಯಾದರೆ ತಮ್ಮ ಗತಿ ಏನು ಎಂದು ಅವರು ಚರ್ಚಿಸುತ್ತಿದ್ದಾರೆ.

ಗೋಪಾಲಕೃಷ್ಣ ಬೇಳೂರು ಅವರ ಏಕೈಕ ಅಜೆಂಡಾ ಹರತಾಳು ಹಾಲಪ್ಪ ಅವರನ್ನು ಸೋಲಿಸುವುದು. ಕಾಂಗ್ರೆಸ್‌ಗೆ ಬರುತ್ತಿದ್ದಂತೆ ಅವರು ಮಾಡಿದ ಮೊಟ್ಟ ಮೊದಲ ಕೆಲಸ ತಮ್ಮ ಬೆಂಬಲಿಗರು ಬಿಜೆಪಿಯತ್ತ ವಾಲದಂತೆ ತಡೆಯುವುದು. ಇದಕ್ಕಾಗಿ ಅವರ ಆಕಾಂಕ್ಷೆಗಳಿಗೆ ‘ಬಲ’ ನೀಡುವ ಪ್ರಯತ್ನ ನಡೆಸಿ ಸ್ವಲ್ಪ  ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಇದನ್ನು ಮೀರಿ ಹೊರಬಂದವರಿಗೆ ಹರತಾಳು ಹಾಲಪ್ಪ ಅವರ ಮನೆ ಬಾಗಿಲು ತೆರೆದಿದೆ.

ಬೇಳೂರು ಅವರ ಬೆಂಬಲಿಗರ ಸಭೆಯಲ್ಲಿ ಕುಳಿತು ಅವರಿಗೆ ಸ್ಥೈರ್ಯ ತುಂಬಿದ್ದ ಹಲವರು ನಂತರ ಹರತಾಳು ಹಾಲಪ್ಪ ಬೆಂಬಲಿಗರ ಸಭೆಯಲ್ಲಿ ಹಾರ ಹಾಕಿಸಿಕೊಂಡಿದ್ದೇ ಇದಕ್ಕೆ ಸಾಕ್ಷಿ. ಸಾಗರ ಕ್ಷೇತ್ರವನ್ನು ಬೇಳೂರು ಚೆನ್ನಾಗಿ ಬಿಜೆಪಿ ಅಖಾಡವನ್ನಾಗಿ ಮಾಡಿದ್ದರು. ಅದನ್ನು ಅವರೀಗ ಕಾಂಗ್ರೆಸ್ ಅಖಾಡವನ್ನಾಗಿ ಮಾಡಬಲ್ಲರೇ  ಎಂಬುದು ಅವರ ಸಾಮರ್ಥ್ಯಕ್ಕೆ ಒಡ್ಡಿದ ಸವಾಲು. 

ಗೋಪಾಲಕೃಷ್ಣ ಬೇಳೂರು ಅವರು 2013ರಂತೆ ಈ ಬಾರಿಯೂ ಪಕ್ಷಕ್ಕೆ ಬರಬಹುದೇನೋ ಎಂದು ಕಾಯುತ್ತಿದ್ದ ಜೆಡಿಎಸ್ ವರಿಷ್ಠರು, ಸಾಧ್ಯವಾಗದು ಎಂಬುದು ಖಚಿತವಾಗುತ್ತಿದ್ದಂತೆ ವಕೀಲ ಗಿರೀಶ್ ಗೌಡ ಅವರಿಗೆ ಟಿಕೆಟ್ ನೀಡಿದ್ದಾರೆ. ಒಮ್ಮೆ ಮಾತ್ರ ಗೆಲವು ಕಂಡಿದ್ದ ಜೆಡಿಎಸ್ ಜನತಾ ಪರಿವಾರದ ಸಾಂಪ್ರದಾಯಿಕ ಮತದಾರರು ತಮ್ಮನ್ನು ಬಿಟ್ಟು ಹೋಗಬಾರದೆಂಬ ಕಾರಣಕ್ಕೆ ಇವಿಎಂ ಯಂತ್ರದಲ್ಲಿ ಒತ್ತಲು ಒಂದು ಬಟನ್ ನೀಡುವ ಉದ್ದೇಶವನ್ನಷ್ಟೇ ಹೊಂದಿದಂತಿದೆ. ಏಕೆಂದರೆ ರಾಜ್ಯ ಮುಖಂಡರಿರಲಿ, ಬಹುತೇಕ ಜಿಲ್ಲಾ  ಮುಖಂಡರೂ ಸಹ ಸಾಗರದತ್ತ ತಲೆ ಹಾಕಿಲ್ಲ. ಗಿರೀಶ್ ಗೌಡಸ್ವಸಾಮರ್ಥ್ಯ ಮತಗಳನ್ನೇ ಅವಲಂಬಿಸಿದ್ದಾರೆ. 

ಜತೆಗೆ ಚುನಾವಣೆ ಎದುರಿಸಲು ಬೇಕಾದ ‘ವ್ಯವಸ್ಥೆ’ ಗಳನ್ನು, ‘ಕರಾಮತ್ತು’ಗಳನ್ನು ಯಾರು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬುದೂ ಪ್ರಮುಖ ಅಂಶವೇ ಆಗಿದೆ. ನೇರ ಹಣಾಹಣಿ ಪರಿಸ್ಥಿತಿ ಇರುವುದರಿಂದ ಕಾಂಗ್ರೆಸ್ ಹೆಚ್ಚು ಎಚ್ಚರಿಕೆ ವಹಿಸಿದೆ. ಕಾಗೋಡು ಮ್ಮಪ್ಪ ಅವರು ಸೋತಿರುವ ಚುನಾವಣೆಗಳ ವಿಶ್ಲೇಷಣೆಗಳು ಅವರಿಗೆ ಈ ಪಾಠ ಕಲಿಸಿವೆ. ಅತಿ ಹೆಚ್ಚು ಈಡಿಗ ಹಾಗೂ ಬ್ರಾಹ್ಮಣ ಮತಗಳನ್ನು ಪಡೆಯುವುದರೊಂದಿಗೆ ಭವಿಷ್ಯದ ಬಗ್ಗೆ ನಿರೀಕ್ಷೆ ಹುಟ್ಟಿಸಬಲ್ಲ ನಾಯಕನಿಗೇ ಈ ಬಾರಿಯ ಚುನಾವಣೆಯಲ್ಲಿ ಗೆಲವು ಖಚಿತ ಎಂದು ವಿಶ್ಲೇಷಿಸಬಹುದು.