Asianet Suvarna News Asianet Suvarna News

ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ ಮೋದಿಯಿಂದ ಇಂದು ದಲಿತಾಸ್ತ್ರ

ಮೊನ್ನೆಯಷ್ಟೇ ಚಾಮರಾಜನಗರ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರಮೋದಿ, ಇಂದು ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದರು.

PM Modi public rallies in Bellary, Kalaburagi and Bengaluru for Karnataka election

ಬೆಂಗಳೂರು/ಬಳ್ಳಾರಿ/ಕಲಬುರಗಿ (ಮೇ 3): ಮೊನ್ನೆಯಷ್ಟೇ ಚಾಮರಾಜನಗರ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರಮೋದಿ, ಇಂದು ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದರು.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೂ ವಿವಿಧೆಡೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಒಟ್ಟಿನಲ್ಲಿ ಇಂದು ರಾಜ್ಯಕ್ಕೆ ಹೈ ವೋಲ್ಟೇಜ್ ಡೇ ಆಗಿತ್ತು.

ಮೊನ್ನೆ ಉಡುಪಿಯಲ್ಲಿ ಅನಿರೀಕ್ಷಿತವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಹಾಡಿ ಹೊಗಳುವ ಮೂಲಕ ಮೋದಿ, ಗೌಡರ ಅಸ್ಮಿತೆಯನ್ನು ಮೋದಿಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ನಲ್ಲಿ ಯಾರೂ ಹಿರಿಯ ನಾಯಕ, ಮಣ್ಣಿನ ಮಗ, ದೇಶದ ಮಾಜಿ ಪ್ರಧಾನಿಯನ್ನು ಗೌರವಿಸೋಲ್ಲ ಎನ್ನುವ ಮೂಲಕ ಒಕ್ಕಲಿಗ ಮತವನ್ನು ಸೆಳೆಯಬಲ್ಲಂಥ ಹೇಳಿಕೆ ನೀಡಿದ್ದರು. 

ಮೇ 3ರಂದು ಇನ್ನೊಂದು ಹೆಜ್ಜೆ ಮುಂದಿಟ್ಟ ಪ್ರಧಾನಿ, ದಲಿತ ಅಸ್ತ್ರ ಪ್ರಯೋಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ದಲಿತ ಮುಖಂಡ ಖರ್ಗೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಮಾತು ತಪ್ಪಿದೆ,' ಎನ್ನುವ ಮೂಲಕ ದಲಿತ ಅಸ್ತ್ರವನ್ನು ಪ್ರಯೋಗಿಸಿದರು.

'ಬಿಜೆಪಿಯನ್ನು ಬ್ರಾಹ್ಮಣ ಪಕ್ಷವೆಂದು ಹೇಳಲಾಗುತ್ತಿದೆ. ಆದರೆ, ದಲಿತ ನಾಯಕನೊಬ್ಬನನ್ನು ಪಕ್ಷ ರಾಷ್ಟ್ರಪತಿಯನ್ನಾಗಿ ಮಾಡಿದೆ, ಹಿಂದುಳಿದ ವರ್ಗಕ್ಕೆ ಸೇರಿದವನನ್ನು ಪ್ರಧಾನಿಯನ್ನಾಗಿ ಮಾಡಿ, ಹಿಂದುಳಿದ ವರ್ಗದ ಜನರಿಗೆ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶ ಕಲ್ಪಿಸಿದ ಹೆಗ್ಗಳಿಗೆ ಬಿಜೆಪಿಗೆ ಸೇರುತ್ತದೆ,' ಎನ್ನುವ ಮೂಲಕ, ಶ್ರೀ ಸಾಮಾನ್ಯನಿಗೆ ಬಿಜೆಪಿ ಮನ್ನಣೆ ನೀಡುತ್ತದೆಂದರು.

ಅಷ್ಟೇ ಅಲ್ಲ, ರಾಜ್ಯದಲ್ಲಿ ಬಿಜೆಪಿ ಕೇವಲ ಎಂಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಸ್ತ್ರೀ ವಿರೋಧಿ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳಬೇಕಾಗಿದೆ. ಆದರೆ, 'ರಕ್ಷಣಾ ಸಚಿವಾಲಯದಂಥ ಜವಾಬ್ದಾರಿಯುತ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡಿದೆ, ಆ ಮೂಲಕ ದೊಡ್ಡ ದೊಡ್ಡ ಹುದ್ದೆಯನ್ನೂ ಮಹಿಳೆಯರು ಅಲಂಕರಿಸಲು ಅನುವು ಮಾಡಿಕೊಟ್ಟಿದೆ,' ಎಂದು ಸಮರ್ಥಿಸಿಕೊಂಡರು.

ಆಯಾ ಕ್ಷೇತ್ರಗಳಲ್ಲಿರುವ ಪ್ರಾದೇಶಿಕ ಸಮಸ್ಯೆಗಳನ್ನು ಉದ್ದೇಶಿಸಿ, ಮಾತನಾಡಿದ ಮೋದಿ, ತೊಗರಿ ಬೇಳೆ ಕಣಜ ಎಂದೆನಿಸಿಕೊಂಡಿರುವ ಕಲಬುರಗಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆಯೇ ಮಾಡಿದರು. ಬೆಂಗಳೂರಿನಲ್ಲಿ ಕೊಳೆತು ನಾರುತ್ತಿರುವ ಕಸದ ಬಗ್ಗೆ ಮಾತನಾಡಿ, ಗಾರ್ಡನ್ ಸಿಟಿ, ಗಾರ್ಬೇಜ್ ಸಿಟಿಯಾಗಿದೆ ಎನ್ನುವ ಮೂಲಕ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.

ಅಷ್ಟೇ ಅಲ್ಲದೇ, ಮೊನ್ನೆ ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ, ಇಂದು ಕೆಂಗೇರಿಯಲ್ಲಿ ಮಾತನಾಡಿ, ಜೆಡಿಎಸ್ ವಿರುದ್ಧ ಮಾತನಾಡಿದ್ದು ವಿಶೇಷವಾಗಿತ್ತು.
 

ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios