ಮೈಸೂರು: ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಲಾಭ ಮಾಡಿಕೊಂಡಿವೆ. ಬಿಜೆಪಿಗೆ ಪ್ರಧಾನಿ ಮೋದಿ ಅಲೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಕೆಲಸ ಮಾಡಿದ್ದರೆ, ಜೆಡಿಎಸ್‌ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ದಿಟ್ಟತನ ವರದಾನವಾಗಿದೆ. 

ಮೈಸೂರು ಜಿಲ್ಲೆಯ 11 ಸ್ಥಾನಗಳ ಪೈಕಿ ಜೆಡಿಎಸ್- 5, ಕಾಂಗ್ರೆಸ್- 3, ಬಿಜೆಪಿ- 3 ಸ್ಥಾನಗಳನ್ನು ಪಡೆದಿವೆ. ಕೊಡಗು ಜಿಲ್ಲೆಯ ಎರಡು ಸ್ಥಾನಗಳು ಎಂದಿನಂತೆ ಬಿಜೆಪಿ ಪಾಲಾಗಿವೆ. ಈ ಪುಟ್ಟ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಎಲ್ಲಾ ಏಳೂ ಸ್ಥಾನಗಳು ಜೆಡಿಎಸ್ ಪಾಲಾಗಿವೆ. ಕೋಲಾರ ಜಿಲ್ಲೆಯ 6 ಸ್ಥಾನಗಳ ಪೈಕಿ ಕಾಂಗ್ರೆಸ್-4, ಜೆಡಿಎಸ್-1, ಕಾಂಗ್ರೆಸ್ ಬೆಂಬಲಿತ ಪಕ್ಷೇತರ- 1 ಸ್ಥಾನಗಳನ್ನು ಗಳಿಸಿದ್ದಾರೆ. 

ಹಾಸನ ಜಿಲ್ಲೆಯ 7 ಸ್ಥಾನಗಳ ಪೈಕಿ ಜೆಡಿಎಸ್-6 ಸ್ಥಾನಗಳನ್ನು ಪಡೆದಿದೆ. ಮತ್ತೊಂದರಲ್ಲಿ ಬಿಜೆಪಿ ಜಯ ಗಳಿಸಿದೆ. ಕಾಂಗ್ರೆಸ್‌ನದು ಇಲ್ಲಿ ಶೂನ್ಯ ಸಂಪಾದನೆ. ತುಮಕೂರು ಜಿಲ್ಲೆಯ 11 ಸ್ಥಾನಗಳಲ್ಲಿ ಕಾಂಗ್ರೆಸ್ -3 , ಜೆಡಿಎಸ್ ಮತ್ತು ಬಿಜೆಪಿ ತಲಾ 4ರಲ್ಲಿ ಜಯ ಗಳಿಸಿವೆ. ಚಾಮರಾಜನಗರ ಜಿಲ್ಲೆಯ ೪ ಸ್ಥಾನಗಳ ಪೈಕಿ ಎರಡಲ್ಲಿ ಕಾಂಗ್ರೆಸ್, ಒಂದು ಕಡೆ ಬಿಜೆಪಿ ಹಾಗೂ ಮತ್ತೊಂದು ಕಡೆ ಜೆಡಿಎಸ್ ಬೆಂಬಲಿತ ಬಿಎಸ್ಪಿ ಅಭ್ಯರ್ಥಿ ಜಯ ಗಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ 5 ಸ್ಥಾನಗಳ ಪೈಕಿ ಕಾಂಗ್ರೆಸ್- 4, ಜೆಡಿಎಸ್- 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ಘಟಾನುಘಟಿಗಳ ಸೋಲು: ಮೈಸೂರಿನಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದಲ್ಲಿ ಸಚಿವರಾಗಿದ್ದ ಡಾ.ಎಚ್.ಸಿ. ಮಹದೇವಪ್ಪ (ಲೋಕೋಪಯೋಗಿ), ಚಾಮರಾಜನಗರದಲ್ಲಿ ಡಾ.ಗೀತಾ ಮಹದೇವಪ್ರಸಾದ್ (ಸಣ್ಣ ಕೈಗಾರಿಕೆ ಮತ್ತು  ಸಕ್ಕರೆ), ಹಾಸನದಲ್ಲಿ ಎ. ಮಂಜು (ಪಶು ಸಂಗೋಪನಾ), ತುಮಕೂರಿನಲ್ಲಿ ಟಿ.ಬಿ. ಜಯಚಂದ್ರ (ಕಾನೂನು) ಪರಾಭವಗೊಂಡಿದ್ದಾರೆ. ಕೋಲಾರದಲ್ಲಿ ಕೆ.ಆರ್. ರಮೇಶ್‌ಕುಮಾರ್ (ಆರೋಗ್ಯ), ಮೈಸೂರಿನಲ್ಲಿ ತನ್ವೀರ್ ಸೇಠ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) ಮಾತ್ರ ಗೆದ್ದಿದ್ದಾರೆ. 

ಕಳೆದ ಬಾರಿ ಕೊರಟಗೆರೆಯಲ್ಲಿ ಪರಾಭವಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಈ ಬಾರಿ ಜಯಭೇರಿ ಬಾರಿಸಿದ್ದಾರೆ. ಮೋದಿ  ರ್ಯಾಲಿ, ಸಿದ್ದು ಟೀಕೆಯ ವರ: ಪ್ರಧಾನಿ  ನರೇಂದ್ರ ಮೋದಿ ಅವರು ಮೈಸೂರು, ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ,  ತುಮಕೂರು ಮತ್ತಿತರ ಕಡೆ  ರ್ಯಾಲಿಗಳನ್ನು ಮಾಡಿದ್ದು ಪ್ರಭಾವ ಬೀರಿದೆ. ಇದರಿಂದಾಗಿಯೇ ಮೈಸೂರಿನಲ್ಲಿ ಮೂರು, ಚಾಮರಾಜಗರದಲ್ಲಿ ಒಂದು, ಹಾಸನದಲ್ಲೂ ಒಂದು ಸ್ಥಾನ ಗಳಿಸಲು ಸಾಧ್ಯವಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪರಿಣಾಮ ಬೀರಿಲ್ಲ. ಅಲ್ಲದೇ ವೀರಶೈವ- ಲಿಂಗಾಯತ ಜನಾಂಗ ಭಾರಿ ಬೆಂಬಲ ಸೂಚಿಸಿವೆ. ಸಿದ್ದರಾಮಯ್ಯ ತಮ್ಮ ಜನಾಂಗವನ್ನು ಒಡೆಯಲು ಯತ್ನಿಸಿದರು ಎಂಬ ಆಕ್ರೋಶವೂ ಇದಕ್ಕೆ ಕಾರಣವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕಳೆದ ಬಾರಿ ಜೆಡಿಎಸ್ 3 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 5 ಸ್ಥಾನಗಳನ್ನು ಗಳಿಸಿದೆ. ಸರಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲಿ ಇನ್ನೂ 2 ಸ್ಥಾನಗಳಲ್ಲಿ ಗೆಲ್ಲಬಹುದಾಗಿತ್ತು. ಆದರೂ ಮೈಸೂರು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ಗೆ ಜೆಡಿಎಸ್ ಪರ್ಯಾಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಿಎಸ್ಪಿಗೆ ಸ್ಥಾನ ಬಿಟ್ಟಿಕೊಟ್ಟಿದ್ದು ಪರಿಣಾಮ ಬೀರಿದೆ.

1994 ರಲ್ಲಿ ಉತ್ತರದ ಬೀದರ್‌ನಿಂದ ಜಲ್ಫಿಕರ್ ಹಷ್ಮಿ ಗೆದ್ದಿದ್ದರು. ಅವರ ನಂತರ ದಕ್ಷಿಣದ ಕೊಳ್ಳೇಗಾಲದಿಂದ ಆನೆ ವಿಧಾನಸೌಧ ಪ್ರವೇಶಿಸುವಂತೆ ಆಗಿದೆ. ತುಮಕೂರಿನಲ್ಲಿ ಜೆಡಿಎಸ್ ಸ್ಥಾನಗಳು ಕಡಿಮೆಯಾಗಿವೆ. ಬಿಜೆಪಿಯ ಪರ ಒಲವು ಇದಕ್ಕೆ ಕಾರಣ. ಮಂಡ್ಯದಲ್ಲಿ ಕಾಂಗ್ರೆಸ್, ಸರ್ವೋದಯ ಕರ್ನಾಟಕದ ಆಟ ನಡೆದಿಲ್ಲ.

ಈ ಬಾರಿ ಶತಾಯಗತಾಯ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲೇಬೇಕು ಎಂಬುದು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ರತಿನಿತ್ಯ ಟೀಕಾಸ್ತ್ರಗಳನ್ನು ಬಿಡುತ್ತಿದ್ದುದು, ದೇವೇಗೌಡರ ಮಕ್ಕಳನ್ನು ಸೋಲಿಸಿ ಎಂದು ಕರೆ ನೀಡಿದ್ದು, ನನ್ನನ್ನು ದೇವೇಗೌಡ ರಾಜಕೀಯ ಬೆಳೆಸಿಲ್ಲ ಎಂದು ಹೇಳಿದ್ದು, ಬಹುಸಂಖ್ಯಾತ ಒಕ್ಕಲಿಗರನ್ನು ಕೆರಳಿಸಿತ್ತು. ಇದರ ಪರಿಣಾಮವೇ ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನಗಳು ಜೆಡಿಎಸ್ ಪಾಲಾಗಿವೆ. ಹಾಸನದಲ್ಲೂ ಇದೇ ವಿಷಯ ಕೆಲಸ ಮಾಡಿದ್ದು, ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚಾಗಿದೆ.