ಕಲಬುರಗಿಯ ಮಹಿಳೆಗೆ ದೆವ್ವ ಹಿಡಿದಿದೆ ಎಂಬ ಮೂಢನಂಬಿಕೆಯಿಂದ, ಆಕೆಯ ಪತಿಯ ಸಂಬಂಧಿಕರು ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಈ ಘಟನೆಯಲ್ಲಿ, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಲಬುರಗಿ (ಡಿ.27): ಜನಗಳ ಮೂಢ ನಂಬಿಕೆಗೆ ಕಲಬುರಗಿಯಲ್ಲಿ ಅಮಾಯಕ ಮಹಿಳೆ ಬಲಿಯಾಗಿದ್ದಾಳೆ. ದೆವ್ವ ಹಿಡಿದಿದೆ ಅಂತ ಬೇವಿನ ಕಟ್ಟಿಗೆಯಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಲಾಗಿದೆ. 38 ವರ್ಷದ ಮುಕ್ತಾಬಾಯಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿಯಾಗಿದ್ದ ಮುಕ್ತಾಬಾಯಿ, ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎನ್ನುವ ವ್ಯಕ್ತಿಯ ಜೊತೆ ಮದುವೆಯಾಗಿದ್ದರು.
ದೆವ್ವ ಹಿಡಿದಿದೆ ಎನ್ನುವ ಮೂಢನಂಬಿಕೆಯ ಮೇಲೆ ಕಳೆದ ನಾಲ್ಕು ದಿನದ ಹಿಂದೆ ಮುರುಮ್ ಗ್ರಾಮದಲ್ಲಿ ಈಕೆಗೆ ಬೇವಿನ ಕಟ್ಟಿಗೆಯಿಂದ ಬಾಮೈದ ಹೊಡೆದಿದ್ದ. ಗಿಡ್ಡೆಪ್ಪನ ಸಹೋದರ ಹಾಗೂ ಸಂಬಂಧಿಕರು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ತಲೆ ಸುತ್ತು ಬಂದು ಮನೆಯ ಬಳಿ ಬಿದ್ದಾಗ ದೆವ್ವ ಹಿಡಿದಿದೆ ಅಂತ ಹಲ್ಲೆ ಮಾಡಲಾಗಿತ್ತು.
ಬೇವಿನ ಕಟ್ಟಿಗೆಯಿಂದ ರಾತ್ರಿ ಮತ್ತು ಬೆಳಿಗ್ಗೆ ಹಲ್ಲೆ ಆಕೆಯ ಮೇಲೆ ಸಂಬಂಧಿಗಳು ಹಲ್ಲೆ ಮಾಡಿದ್ದರು. ಬಳಿಕ ದೇವಲ ಗಾಣಗಾಪುರದ ದತ್ತನ ಸನ್ನಧಿಗೆ ತಂದು ದೆವ್ವ ಬಿಡಿಸಲು ಗಿಡ್ಡಪ್ಪನ ಸಂಬಂಧಿಕರು ಮುಂದಾಗಿದ್ದರು. ದೆವ್ವ ಬಿಡಿಸಲು ಹಲ್ಲೆ ಮಾಡಿದ ಬಳಿಕ ಮುಕ್ತಾಬಾಯಿ ಸುಸ್ತಾಗಿ ಬಿದ್ದಿದ್ದಳು.
ಆ ಬಳಿಕ ಆಕೆಯ ತಾಯಿಗೆ ಕರೆ ಮಾಡಿ ಗಂಡನ ಮನೆಯವರು ವಿಷಯ ತಿಳಿಸಿದ್ದರು. ಮುಕ್ತಾಬಾಯಿ ಅವರ ತಾಯಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಸಾವು ಕಂಡಿದ್ದಾರೆ. ಮಹಾರಾಷ್ಟ್ರದ ಮುರುಮ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.


