ಶೇಷಮೂರ್ತಿ ಅವಧಾನಿ

ಬರೋಬ್ಬರಿ 33 ವರ್ಷಗಳ ನಂತರ ಕಲಬುರಗಿಗೆ ನುಡಿಹಬ್ಬದ ಆತಿಥ್ಯ ದೊರಕಿರುವಾಗ ನೀವು ಜಿಲ್ಲಾಧಿಕಾರಿ, ನಿಮಗೆ ಹೇಗನ್ನಿಸುತ್ತಿದೆ?

ನನ್ನ ಅದೃಷ್ಟ, ನಾನಿಲ್ಲಿ ಜಿಲ್ಲಾಧಿಕಾರಿಯಾಗಿರುವಾಗಲೇ ಸಮ್ಮೇಳನ ಬಂದಿದೆ. ಕನ್ನಡಮ್ಮನ ಸೇವೆ ಮಾಡಲು ಸುಯೋಗ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ. ನನ್ನ ಓರಗೆಯ ಡಿಸಿಗಳಿಗೂ ವಿಚಾರಿಸಿದೆ. ಈ ಬಗ್ಗೆ, ಅವರೆಲ್ಲರೂ ‘ಯೂ ಆರ್ ಲಕ್ಕಿ ಪರ್ಸನ್’ ಅಂದ್ರು. ನನಗಂತೂ ಕನ್ನಡ ಹಬ್ಬದಲ್ಲಿ ಪ್ರಮುಖ ಪಾತ್ರದ ಯೋಗಾಯೋಗ ಕೂಡಿಬಂದಿದ್ದು ಹೆಮ್ಮೆ. ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು... ಕುವೆಂಪು ಅವರ ಕವಿವಾಣಿಯೇ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿರುವ ನನಗೆ ಪ್ರೇರಣೆ.

ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್‌ ಆಗಬಾರದು: ಎಚ್. ಎಸ್.ವಿ

ಕಲಬುರಗಿ ಕನ್ನಡ ಹಬ್ಬದ ಸಿದ್ಧತೆ, ಅದರ ಯಶಸ್ಸಿನ ಬಗ್ಗೆ ಏನಂತೀರಿ?

ಕಲಬುರಗಿ ಸಮ್ಮೇಳನ ಅಭೂತಪೂರ್ವ ಯಶ ಕಾಣೋದು ನಿಶ್ಚಿತ. ಈ ನೆಲ ಕನ್ನಡದ ಸಾಹಿತ್ಯದ ಪ್ರಾಚೀನ ತಾಣ. ಹೀಗಾಗಿ ಇಲ್ಲಿನ ಜನರಲ್ಲಿ ತುಂಬ ಉತ್ಸಾಹವಿದೆ. ಸಮ್ಮೇಳನ ಭಾರಿ ಯಶಸ್ಸು ಕಾಣಲಿದೆ ಎಂಬುದೇ ನನ್ನ ನಿರೀಕ್ಷೆ.

ಸಮ್ಮೇಳನದ ಖರ್ಚು- ವೆಚ್ಚ, ಸರ್ಕಾರದ ಅನುದಾನ, ಜನರ ದೇಣಿಗೆ ಇತ್ಯಾದಿ...?

ಕನ್ನಡಮ್ಮನ ಹಬ್ಬವಾದ್ದರಿಂದ ಸಾರ್ವಜನಿಕರನ್ನು ಹೆಚ್ಚಿಗೆ ಒಳಗೊಳ್ಳುವಂತೆ ಮಾಡಬೇಕೆಂದು ಡಿಸಿಎಂ ಗೋವಿಂದ ಕಾರಜೋಳ್ ಅವರ ಸಲಹೆಯಂತೆ ನಾನೇ ಸಂಪನ್ಮೂಲ ಸಂಗ್ರಹಕ್ಕಾಗಿ ಹೆಗಲಿಗೆ ಜೋಳಿಗೆ ಹಾಕಿರುವೆ. ನನ್ನ ತಿಂಗಳ ವೇತನ 97 ಸಾವಿರ ರು. ದೇಣಿಗೆ ನೀಡಿ ಜೋಳಿಗೆ ಹಿಡಿದೆ ನೋಡಿ, ಇದುವರೆಗೂ ಜನ, ಸಂಘ- ಸಂಸ್ಥೆಗಳಿಂದ 15 ಲಕ್ಷ ರು.ಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಸಮ್ಮೇಳನದ ವೆಚ್ಚ 14 ರಿಂದ 50 ಕೋಟಿ ರು. ಎಂದು ಅಂದಾಜಿಸಲಾಗಿದೆ.

ತಾವು ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು, ಕನ್ನಡ ಸಾಹಿತ್ಯದ ಆಸಕ್ತಿಯೂ ತಮ್ಮಲ್ಲಿದೆ. ಇದು ಹೇಗೆ?

ಕನ್ನಡದ ಕಾವ್ಯ ಋಷಿ ಬಿಎಂ ಶ್ರೀಕಂಠಯ್ಯನವರು ಹೇಳಿದಂತೆ ‘ಇವಳ ಸೀರೆ ಅವಳಿಗೆ ತೊಡಿಸಿ, ಅವಳ ಸೀರೆ ಇವಳಿಗೆ ತೊಡಿಸಿ...’ ಎಂಬಹಾಗೆ ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಒಳ ಸೆಳವುಗಳು ಒಂದೇ. ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿದವ. ಅಲ್ಲಿ ಕುವೆಂಪು ಪ್ರಾಚಾರ್ಯರಾಗಿದ್ದವರು. ಅಲ್ಲೇ ಕನ್ನಡ, ಆಂಗ್ಲ ಸಾಹಿತ್ಯದ ಪ್ರಭಾವ ನನಗಾಯ್ತು. ಕನ್ನಡ, ಇಂಗ್ಲಿಷ್ ಎರಡರಲ್ಲಿಯೂ ನನಗೆ ಆಸಕ್ತಿ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಹೆಚ್ಚಿನವರು ಇಂಗ್ಲಿಷ್ ಹಿನ್ನೆಲೆಯವರೇ ಎಂಬುದನ್ನು ನಾವು ನೋಡುತ್ತೇವೆ. ನಾನೂ ಚಿತ್ರದುರ್ಗದ ಹೊಳಲ್ಕೆರೆಯವ. ಡಾ. ಯು.ಆರ್.ಅನಂತಮೂರ್ತಿ ಹಾಗೂ ಚಿನುವ ಅಚಿಬೆ ಸಮನ್ವಯದ ವಿಚಾರಗಳ ತೌಲನಿಕ ಅಧ್ಯಯನದ ಪಿಎಚ್‌ಡಿ ಮಾಡುವ ಆಸಕ್ತಿ ಹೊಂದಿ ಹೆಸರು ನೋಂದಾಯಿಸಿದ್ದೆ. ಕೆಲಸದ ಒತ್ತಡಲ್ಲಿ ಅದು ಮಾಡಲಾಗಿಲ್ಲ. ಆದರೆ ನಾನು ಆಂಗ್ಲ ಸ್ನಾತಕೋತ್ತರ ಪದವೀಧರನಾದರೂ ಕನ್ನಡದ ಸಾಹಿತ್ಯದ ಬಗ್ಗೆ ಅಷ್ಟೇ ಆಸಕ್ತಿ ಇಟ್ಟುಕೊಂಡವ.

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ಸಮ್ಮೇಳನಕ್ಕೆ ಆರಂಭದಲ್ಲೇ ಅಪಸ್ವರ ಕಾಡಿದವು, ಅವನ್ನೆಲ್ಲ ಹೇಗೆ ನಿವಾರಿಸಿದ್ರಿ?

ನಿಜ, ಸಮ್ಮೇಳನಕ್ಕೆ ಆರಂಭದಲ್ಲೇ ಹಲವು ದಿಕ್ಕಿನಿಂದ ಅಪಸ್ವರ ಕಾಡಿದವು. ಲಾಂಛನದಿಂದಲೇ ಶುರುವಾಯ್ತು ಸಣ್ಣಗಿನ ವಿವಾದ. ನನ್ನ ಗಮನಕ್ಕೆ ಬಂದ ತಕ್ಷಣ ಕಸಾಪದವರನ್ನು ಕರೆದು ಮಾಹಿತಿ ಪಡೆದೆ. ಸ್ಥಳೀಯ ಸಾಹಿತಿಗಳು ನಮಗೆ ಕರೆಯುತ್ತಿಲ್ಲ ಎಂದು ಕೊರಗು ಹೊರಹಾಕಿದಾಗ ನಾನೇ ಖುದ್ದು ಸಭೆ ನಡೆಸಿದೆ. ಸಂಕ್ರಮಣ ದಿನ ಎಳ್ಳು- ಬೆಲ್ಲ ನೀಡಿ ಆಹ್ವಾನಿಸಿದೆ. ಹೀಗೆಯೇ ಸ್ಥಳೀಯರನ್ನು ಒಳಗೊಂಡು ಸಮ್ಮೇಳನ ನಡೆಯಬೇಕೆ ವಿನಹಃ ಹೊರಗಿನವರೇ ಬಂದು ಮಾಡೋದಲ್ಲ ಎಂಬ ಸಂದೇಶ ಎಲ್ಲರಿಗೂ ಸಾರುತ್ತ ನಿಧಾನಕ್ಕೆ ಸಿಟ್ಟು- ಸೆಡವಿನ ವಾತಾವರಣ ತಿಳಿಗೊಳಿಸುವ ಯತ್ನ ಮಾಡಿದೆ. ಈಗ ಸಮ್ಮೇಳನದ ಸಿದ್ಧತೆಯಂತು ಸುಸೂತ್ರ ನಡೆಯಲಿದೆ. ಎಲ್ರೂ ಸೇರಿ ತಾನೆ ಕನ್ನಡಮ್ಮನ ನುಡಿಜಾತ್ರೆ ಮಾಡೋದು, ಒಬ್ಬರಿಂದಲೇ ಸಾಧ್ಯವೆ?

ಕನ್ನಡದ ಕಮೀಷನರ್ ಶರತ್ ಅಂತಿದ್ದಾರಲ್ರಿ ಕಲಬುರಗಿ ಜನ ನಿಮ್ಮನ್ನ... 

ನೋಡ್ರಿ, ಕನ್ನಡ ಕೆಲಸ ಮಾಡಲು ನಾನಂತೂ ಸಿದ್ಧ. ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಕನ್ನಡ ಸೇವೆ ಮಾಡುವುದೇ ನನ್ನ ಆದ್ಯತೆ. ಕನ್ನಡ ತಾಯಿ ಕೆಲಸಕ್ಕೆ ಜೋಳಿಗೆ ನಾನೇ ಹಾಕುವಾಗ ನನ್ನ ಮಾಸಿಕ ಸಂಬಳ ಹಾಕಿಯೇ ನಾನು ಅನ್ಯರ ದೇಣಿಗೆ ಕೇಳಲು ಶುರು ಮಾಡಿದೆ. ನನ್ನ ಈ ಕೆಲಸ ಜನರಿಗೆ ಮನಕ್ಕೆ ತಟ್ಟಿದೆ ಅನ್ಕೋತೀನಿ. ಮನೆಯ ಹಿರಿಯರ ಚಾಳಿಯೇ ಇತರರು ಅನುಸರಿಸೋದಿಲ್ಲವೆ? ಹಾಗೆಯೇ ಇಲ್ಲಿ ನಾನು ಜೋಳಿಗೆಗೆ ದೇಣಿಗೆ ಹಾಕಿದಾಕ್ಷಣವೇ ಜನನಾಯಕರು, ಸರ್ಕಾರಿ ನೌಕರರಿಂದ ಹಿಡಿದು ಎಲ್ಲರು ಸ್ಪಂದಿಸುತ್ತಿದ್ದಾರೆ. ಇದನ್ನೆಲ್ಲ ಕಂಡಿರುವ ನಮ್ಮ ಹಿರಿಯ ಸಾಹಿತಿಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಿದ್ಧಯ್ಯ ಪುರಾಣಿಕ ಐಎಎಸ್ ಆಗಿದ್ದವರು, ಕಂದಾಯ ಇಲಾಖೆಯಲ್ಲಿದ್ದೇ ಕನ್ನಡ ತಾಯಿ ಸೇವೆ ಮಾಡಿದವರು, ನೀವು ಹಾಗೆಯೇ ಇದ್ದೀರಿ ಎಂದು ಹೇಳುತ್ತಿದ್ದಾರೆ. ಹಾಗೇ ಹೇಳೋದನ್ನ ನಾನು ಕೆಲವೆಡೆ ಕೇಳಿದ್ದೇನೆ. ಹಿರಿಯರ ಆಶಿರ್ವಾದ ಅವರ ಔದಾರ್ಯದ ಮಾತುಗಳಿವು. ನಾನು ಎಂದಿನಂತೆ ಕನ್ನಡಮ್ಮನ ಸಾಮಾನ್ಯ ಸೇವಕ ಮಾತ್ರ ಎನ್ನುತ್ತಾರೆ ಕಲಬುರಗಿ ಡಿಸಿ ಶರತ್.