Asianet Suvarna News Asianet Suvarna News

ವಾರಕ್ಕೆ 4 ದಿನ ಮಾತ್ರ ಕೆಲಸ: UKಯ 70 ಸಂಸ್ಥೆಗಳಲ್ಲಿ ಪ್ರಯೋಗ ಶುರು: ಭಾರತದಲ್ಲಿ ಸಾಧ್ಯವಾ?

ಪ್ರಯೋಗದ ಸಮಯದಲ್ಲಿ, ಸಿಬ್ಬಂದಿ ಹೆಚ್ಚು ಕಾರ್ಯಪ್ರವೃತ್ತರಾಗುವ  ಗುರಿಯೊಂದಿಗೆ ಅವರು ಸಾಮಾನ್ಯವಾಗಿ ಕೆಲಸ ಮಾಡುವ 80% ಗಂಟೆಳಿಗೆ 100% ವೇತನವನ್ನು ಪಡೆಯಲಿದ್ದಾರೆ

World s biggest four day work week trial begins in the United Kingdom mnj
Author
Bengaluru, First Published Jun 7, 2022, 8:55 PM IST

ನವದೆಹಲಿ (ಜೂ. 07): ಯುನೈಟೆಡ್ ಕಿಂಗ್‌ಡಮ್‌ನ 70 ಸಂಸ್ಥೆಗಳಲ್ಲಿ 3,300 ಕ್ಕೂ ಹೆಚ್ಚು ಕಾರ್ಮಿಕರು ಸೋಮವಾರದಿಂದ ವೇತನದಲ್ಲಿ ಯಾವುದೇ ಕಡಿತವಿಲ್ಲದೇ ನಾಲ್ಕು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸುತ್ತಿದ್ದಾರೆ. ಈ ಪ್ರಾಯೋಗಿಕ ಯೋಜನೆಯು ಆರು ತಿಂಗಳವರೆಗೆ ನಡೆಯಲಿದೆ. ಈ ಪ್ರಯೋಗವು ಸ್ಥಳೀಯ ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಹಣಕಾಸು ಕಂಪನಿಗಳವರೆಗೆ ಸಾವಿರಾರು ಕಾರ್ಮಿಕರನ್ನು ಒಳಗೊಂಡಿರಲಿದೆ. 

ಈ ಪ್ರಾಯೋಗಿಕ ಕಾರ್ಯಕ್ರಮವನ್ನು  4 ಡೇ ವೀಕ್ ಗ್ಲೋಬಲ್ ಸಂಸ್ಥೆಯು, ಥಿಂಕ್ ಟ್ಯಾಂಕ್  ಅಟೋನಾಮಿ, 4 ಡೇ ವೀಕ್ ಯುಕೆ ಕ್ಯಾಂಪೇನ್, ಮತ್ತು ಕೆಂಬ್ರಿಡ್ಜ್, ಆಕ್ಸ್ ಫರ್ಡ್ ಹಾಗೂ ಬಾಸ್ಟನ್ ಕಾಲೇಜುಗಳ ಸಂಶೋಧಕರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. 

ಪ್ರಯೋಗದ ಸಮಯದಲ್ಲಿ, ಸಿಬ್ಬಂದಿ ಹೆಚ್ಚು ಕಾರ್ಯಪ್ರವೃತ್ತರಾಗುವ  ಗುರಿಯೊಂದಿಗೆ ಅವರು ಸಾಮಾನ್ಯವಾಗಿ ಕೆಲಸ ಮಾಡುವ 80% ಗಂಟೆಳಿಗೆ 100% ವೇತನವನ್ನು ಪಡೆಯಲಿದ್ದಾರೆ. ಕೋವಿಡ್‌ 19 ಸಾಂಕ್ರಾಮಿಕ ರೋಗದ ಮಧ್ಯೆ ಅನೇಕ ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲಸದ ದಿನಗಳನ್ನು ಕಡಿಮೆ ಮಾಡುವ ಕೂಗುಗಳು ಕೇಳಿಬಂದಿದ್ದವು. 

ಕೋವಿಡ್-19 ಸಮಯದಲ್ಲಿ ಲಕ್ಷಗಟ್ಟಲೆ ಉದ್ಯೋಗಿಗಳು ರಿಮೋಟ್ ಕೆಲಸಕ್ಕೆ ಬದಲಾದ ಕಾರಣ, ಪ್ರಯಾಣದ ಸಮಯ ಮತ್ತು ವೆಚ್ಚಗಳನ್ನು ಕಡಿತಗೊಂಡಿತ್ತು. ಐಸ್‌ಲ್ಯಾಂಡ್‌ನಲ್ಲಿ ನಾಲ್ಕು ದಿನಗಳ ವಾರದ ಇದೇ ರೀತಿಯ ಪ್ರಯೋಗಗಳು "ಅಗಾಧ ಯಶಸ್ಸನ್ನು" ಗಳಿಸಿದ್ದವು.  

ಇದನ್ನೂ ಓದಿ: Work From Office: ಉದ್ಯೋಗಿಗಳನ್ನು ಕಚೇರಿಗೆ ಮರಳಿ ತರಲು ಕಂಪನಿಗಳ ಹರಸಾಹಸ

ಕಡಿಮೆ ಗಂಟೆಗಳವರೆಗೆ ಕಾರ್ಮಿಕರಿಗೆ ಅದೇ ಮೊತ್ತವನ್ನು ಪಾವತಿಸುವ ಪ್ರಯೋಗಗಳು 2015 ಮತ್ತು 2019 ರ ನಡುವೆ ನಡೆದಿವೆ. ಈ ಪ್ರಯೋಗಗಳಲ್ಲಿ ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಉತ್ಪಾದಕತೆ ಒಂದೇ ಆಗಿರುತ್ತದೆ ಅಥವಾ ಸುಧಾರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೇ‌ ಈ ವರ್ಷದ ಕೊನೆಯಲ್ಲಿ ಸ್ಪೇನ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಸರ್ಕಾರಿ ಬೆಂಬಲಿತ ಪ್ರಯೋಗಗಳು ನಡೆಯಲಿವೆ ಎಂದು 4 ಡೇಸ್‌ ವೀಕ್ ಅಭಿಯಾನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲೂ ಬದಲಾವಣೆ?: ಭಾರತವೂ ಈ ವಿಷಯದಲ್ಲಿ ಕೆಲವು ರೀತಿಯ ಯೋಜನೆಗಳನ್ನು ಹೊಂದಿದೆ. ನೌಕರರ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕೆಗಳ ಸಂಬಂಧ, ಉದ್ಯೋಗ ಸುರಕ್ಷತೆ, ಆರೋಗ್ಯ ಹಾಗೂ ಕೆಲಸದ ಬೇಡಿಕೆಗೆ ಸಂಬಂಧಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಜಾರಿಗೆ ಕೇಂದ್ರ ಸರ್ಕಾರ ಯೋಜಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ. ಇದು ಜಾರಿಯಾದರೆ, ನೌಕರರ ವಾರದ ಕೆಲಸವು 4 ದಿನಗಳಿಗೆ ಕಡಿತಗೊಳ್ಳಲಿದ್ದು, ವಾರಕ್ಕೆ 3 ದಿನಗಳ ರಜೆಯ ಭಾಗ್ಯ ಸಿಗಲಿದೆ.

ಆದರೆ ವಾರಕ್ಕೆ 48 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆಯಾಗದು. ಈ ಹಿನ್ನೆಲೆಯಲ್ಲಿ ನೌಕರರು ವಾರಕ್ಕೆ 3 ದಿನ ರಜೆ ಪಡೆಯಲು ನಿತ್ಯ 12 ಗಂಟೆ ಕೆಲಸ ನಿರ್ವಹಿಸಬೇಕು. ಜತೆಗೆ ಈ ನೂತನ ನಿಯಮಗಳ ಪ್ರಕಾರ ನೌಕರರು ಮತ್ತು ಕಂಪನಿಯು ಭವಿಷ್ಯನಿಧಿಗೆ ಹೆಚ್ಚಿನ ಹಣ ಪಾವತಿಸಬೇಕಿದ್ದು, ನೌಕರನ ಕೈಗೆ ಸಿಗುವ ವೇತನದಲ್ಲಿ ಕಡಿತವಾಗಲಿದೆ ಎಂಬ ಅಂಶವು ಕಾರ್ಮಿಕ ಸಂಹಿತೆಯಲ್ಲಿದೆ. 

ಇದನ್ನೂ ಓದಿ: ವರ್ಕ್‌ ಫ್ರಂ ಹೋಂ ಬೇಕು ಅಂದ್ರೆ ಪರ್ಮನೆಂಟಾಗಿ ಮನೆಗೆ ಕಳಿಸ್ತೀನಿ: ಟೆಸ್ಲಾ ಸಿಬ್ಬಂದಿಗೆ ಮಸ್ಕ್‌ ಎಚ್ಚರಿಕೆ

ಕೆಲಸದ ಅವಧಿ, ವಾರದಲ್ಲಿ ರಜೆಗಳ ಸಂಖ್ಯೆ, ನೌಕರರ ಮಾಸಿಕ ವೇತನ ಸೇರಿದಂತೆ ಕೆಲಸದ ಸಂಸ್ಕೃತಿಗಳ ಬದಲಾವಣೆ ಪ್ರಸ್ತಾವನೆ ನೂತನ ಸಂಹಿತೆ ಒಳಗೊಂಡಿವೆ. ಕಾರ್ಮಿಕರಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಕಾರ್ಮಿಕ ವಿಚಾರವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ಈ ಕುರಿತು ರಾಜ್ಯಗಳು ಸಹ ನಿಯಮಗಳನ್ನು ರೂಪಿಸಬೇಕಿದೆ ಎಂದು ವರದಿಗಳು ತಿಳಿಸಿವೆ. 

Follow Us:
Download App:
  • android
  • ios