5 ಲಕ್ಷ ಸ್ವಯಂ ಉದ್ಯೋಗಕ್ಕೆ ವಿವೇಕಾನಂದ ಯೋಜನೆ: ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿ ಯೋಜನೆ ಅನುಷ್ಠಾನ, ಒಲಿಂಪಿಕ್ಸ್‌ಗೆ ಸಿದ್ಧಗೊಳಿಸಲು 75 ಕ್ರೀಡಾಪಟುಗಳ ದತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ(ಜ.13): ಐದು ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡುವ ‘ಸ್ವಾಮಿ ವಿವೇಕಾನಂದ ಯೋಜನೆ’ಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗಿ ಯಾಗುವ ದಿಸೆಯಲ್ಲಿ ರಾಜ್ಯದಲ್ಲಿ 75 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಜನರನ್ನು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರ್ಕಾರವು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಿದೆ. ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ಲಭಿಸಲಿದೆ ಎಂದ ಅವರು, ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆಕೊಟ್ಟಧೀಮಂತ ಯೋಗಿಯಾಗಿದ್ದಾರೆ. ಧ್ಯಾನ ಮತ್ತು ಜ್ಞಾನವನ್ನು ಯುವಜನರಿಗೆ ಬೋಧಿಸಿದ ಮಹಾನ್ ಚೇತನರಾಗಿದ್ದಾರೆ ಎಂದರು.
ಹುಬ್ಬಳ್ಳಿ: ಮೋದಿಗೆ ಹಾರಹಾಕಲು ಓಡಿದ 10ರ ಬಾಲಕ, ಭದ್ರತಾ ಲೋಪ?
ರಾಜ್ಯದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶದಲ್ಲೇ ಮೊಟ್ಟಮೊದಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ ರಾಜ್ಯ ನಮ್ಮದು ಎಂದ ಅವರು, ಮುಂಬರುವ ಒಲಿಂಪಿಕ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕೆಂಬ ಉದ್ದೇಶದಿಂದ 75 ಪ್ರತಿಭಾವಂತರನ್ನು ದತ್ತು ಪಡೆದು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನಸಂಖ್ಯೆ ಎಂದರೆ ಹೊರೆಯಲ್ಲ, ಅದು ಮಾನವ ಸಂಪತ್ತು. ಅದರ ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ಯೋಚನೆ ಮಾಡಿದವರು ದೇಶದ ಪ್ರಧಾನಿ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸ್ಫೂರ್ತಿಯಾಗಿದ್ದಾರೆ. ಫಿಟ್ ಇಂಡಿಯಾ, ಖೇಲೋ ಇಂಡಿಯಾ ಎಂದು ಯುವ ಜನತೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುತ್ತಿರುವ ಯುವ ಜನೋತ್ಸವ ನಾಡಿನ ಯುವ ಜನರಲ್ಲಿ ಹೊಸ ಸ್ಫೂರ್ತಿ ನೀಡುವಂತಾಗಲಿದೆ ಎಂದರು.